ಬೆಳ್ತಂಗಡಿ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಳೆದ ಆರ್ಥಿಕ ವರ್ಷದಲ್ಲಿ 70 ಲಕ್ಷ ರೂ. ಗಿಂತ ಅಧಿಕ ಲಾಭವನ್ನು ಗಳಿಸಿದ್ದು ಸದಸ್ಯರಿಗೆ ಶೇ.14 ಡಿವಿಡೆಂಟ್ ನೀಡಲು ನಿರ್ಣಯಿಸಲಾಗಿದೆ ಎಂದು ಸಂಘದ ಅಧ್ಯಕ್ಷ ವಸಂತ ಮಜಲು ಹೇಳಿದರು.
ಕಳಿಯ ಗೇರುಕಟ್ಟೆಯ ಸಹಕಾರಿ ಸಭಾಭವನದಲ್ಲಿ ಸೆ.18ರಂದು ಜರಗಿದ ಮಹಾಸಭೆಯಲ್ಲಿ ಮಾತನಾಡಿದರು. ಸಂಘವು ಎ ತರಗತಿಯ 2,489 ಸಿ ತರಗತಿಯ 223 ಹಾಗೂ ಡಿ ತರಗತಿಯ 113 ಸದಸ್ಯರನ್ನು ಹೊಂದಿದ್ದು 2.16 ಕೋಟಿ ರೂ. ಗಿಂತ ಅಧಿಕ ಪಾಲು ಬಂಡವಾಳ 35 ಕೋಟಿ ರೂ.ಗಿಂತ ಅಧಿಕ ಠೇವಣಾತಿ ಹೊಂದಿದ್ದು 44 ಕೋಟಿ ರೂ. ಸಾಲಗಳನ್ನು ನೀಡಿದೆ.
ಎಂ.ಕೆ.ಸಿ.ಸಿ, ಮಧ್ಯಮಾವಧಿ, ದೀರ್ಘಾವಧಿ, ವಾಹನ, ಚಿನ್ನಾಭರಣ, ಸ್ವಸಹಾಯ ಗುಂಪು, ಪಶು ಭಾಗ್ಯ ಯೋಜನೆ, ಹಟ್ಟಿ ಕೊಟ್ಟಿಗೆ ರಚನೆಗಳಿಗೆ ಸಾಲಗಳನ್ನು ನೀಡಿದೆ. ಭಾಗ್ಯಲಕ್ಷ್ಮಿ, ಭಾಗ್ಯನಿಧಿ ನಗದು ಪ್ರಮಾಣ ಪತ್ರ, ಬೆಳಕು ಪೆನ್ಷನ್ ಯೋಜನೆ ಸಹಿತ ಸಹಿತ ನಾನಾ ರೀತಿಯ ರೇವಣಾತಿಗಳ ಸಂಗ್ರಹ ಹೊಂದಿದೆ ಎಂದರು.
ಠೇವಣಾತಿ ಸಂಗ್ರಹದಲ್ಲಿ ಕಳೆದ ಸಾಲಿಗಿಂತ 3.87 ಕೋಟಿ ರೂ. ಹೆಚ್ಚಳವಾಗಿದ್ದು ಈ ಬಾರಿ 4.21ಕೋಟಿ ರೂ. ಹೆಚ್ಚಿಗೆ ಸಾಲ ವಿತರಿಸಲಾಗಿದೆ ಎಂದರು.
ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರಾದ ಹರಿಪ್ರಸಾದ್ ಪಡಂತ್ತಾಯ, ದೇವಣ್ಣ ಮೂಲ್ಯ,ರಾಜೀವ ಗೌಡ, ಶೇಖರ ನಾಯ್ಕ್, ರಾಮಪ್ರಕಾಶ್ ಶೆಟ್ಟಿ, ರತ್ನಾಕರ ಬಳ್ಳಡಡ್ಕ, ಚಂದ್ರಾವತಿ ಕಟ್ಟದ ಬೈಲು, ಶಶಿಧರ ಶೆಟ್ಟಿ ಹೀರ್ಯ, ಲೋಕಯ್ಯ ಕುಂಟಿನಿ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.
ಸಿಇಒ ಸತ್ಯಶಂಕರ ಕೆಜಿ ವರದಿ ವಾಚಿಸಿದರು. ಬೆಳ್ತಂಗಡಿ ಸಹಕಾರ ಭಾರತಿಯ ಅಧ್ಯಕ್ಷ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿ ಸಂತೋಷ್ ಕುಮಾರ್ ವಂದಿಸಿದರು.
ಅತೀ ಹೆಚ್ಚು ಪೈಪ್, ಬಿಡಿಭಾಗಗಳನ್ನು ಖರೀದಿಸಿದ ಸಂಘದ ಸದಸ್ಯರಾದ ಗಂಗಯ್ಯ ಗೌಡ, ವಸಂತ ಶೆಟ್ಟಿ, ಆನಂದ ಗೌಡ, ಇಬ್ರಾಹಿಂ, ವನಜಾ, ರಾಘವ ಪೂಜಾರಿ ಅವರನ್ನು ಸಮ್ಮಾನಿಸಲಾಯಿತು.