News Kannada
Friday, September 29 2023
ಮಂಗಳೂರು

ಮಂಗಳೂರು: ರಾಮನ ಹಾದಿಯಲ್ಲಿ ಮುನ್ನಡೆಯೋಣ- ರಾಘವೇಶ್ವರ ಶ್ರೀ ಕರೆ

RAGHAVA SHREE
Photo Credit : By Author

ಮಂಗಳೂರು: ಮಠವನ್ನು ಕಟ್ಟಿ ರಾಮನಿಗೆ ಕಾಣಿಕೆಯಾಗಿ ಸಮರ್ಪಿಸುವ ಪವಿತ್ರ ಸಂದರ್ಭದಲ್ಲಿ ರಾಮ ನಡೆದ ಹಾದಿಯಲ್ಲಿ ಮುನ್ನಡೆಯುವ ಪಣ ತೊಡಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಮಾಣಿ ಮಠದ ಸಪರಿವಾರ ಶ್ರೀರಾಮಚಂದ್ರದೇವರ ಶಿಲಾಮಯ ಗರ್ಭಗುಡಿ ನಿರ್ಮಾಣದ ಕಾಮಗಾರಿ ವೀಕ್ಷಿಸಿ, ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಶಿಷ್ಯರ ಮಾರ್ಗದರ್ಶನ ಸಭೆಯಲ್ಲಿ ಪರಮಪೂಜ್ಯರು ಆಶೀರ್ವಚನ ನೀಡಿದರು.

ನಮ್ಮತನ ಉಳಿಸೋಣ. ನಮ್ಮ ಆಚರಣೆ ಸಂಪ್ರದಾಯ, ಸಂಸ್ಕøತಿ, ಭಾಷೆ, ನಾಡು ನುಡಿ ಉಳಿಸಲು ನಮ್ಮಿಂದಾದ ಕೊಡುಗೆ ನೀಡೋಣ. ಶಿಲಾಮಯ ಗರ್ಭಗುಡಿ ಸಹಸ್ರಮಾನದ ಕಾರ್ಯ. ನಮ್ಮ ಹತ್ತಾರು ಪೀಳಿಗೆಗಳಿಗೆ ಸಿಗದ ದುರ್ಲಭ ಅವಕಾಶ ಇದು. ಇಂಥ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡ ಎಲ್ಲರೂ 2023ರ ಜನವರಿ 23ರಿಂದ 25ರವರೆಗೆ ನಡೆಯುವ ಪುನಃಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಪಾಲ್ಗೊಳ್ಳುವ ಮೂಲಕ ಜೀವನ ಸಾರ್ಥಕಗೊಳಿಸಿಕೊಳ್ಳಿ ಎಂದು ಸಲಹೆ ಮಾಡಿದರು.

ನಶ್ವರವನ್ನು ಬಿಟ್ಟು ಶಾಶ್ವತವಾದ ಈಶ್ವರನ ಕಡೆಗೆ ತೆರಳುವ ಸಂಕಲ್ಪ ಮಾಡೋಣ. ಭಗವತ್ ಚೈತನ್ಯ ಶಾಶ್ವತ; ಅದರ ಉಪಾಸನೆಯೇ ಆಧ್ಯಾತ್ಮ. ಲೌಕಿಕವಾಗಿ ನೋಡಿದರೂ ಶಕ್ತಿ, ಅನುಕೂಲ ಇದ್ದಾಗ ಸತ್ಕಾರ್ಯಗಳನ್ನು ಮಾಡಬೇಕು. ರಾಮದೇವರ ಗರ್ಭಗೃಹ ಇಡೀ ನಮ್ಮ ಮಠ ವ್ಯವಸ್ಥೆಯ ಶಿಖರ ಇದ್ದಂತೆ. ರಾಮ ಸರ್ವೋಚ್ಛ ಪೀಠದಲ್ಲಿರುವಂತೆ ಮಾಡುವ ಪ್ರಯತ್ನವೇ ಶಿಲಾಮಯ ಗರ್ಭಗುಡಿ ಎಂದು ಬಣ್ಣಿಸಿದರು.

ಜೀವನ ಮುಂದುವರಿಯುತ್ತಿರಬೇಕು. ಹರಿಯುವ ನದಿಯಾಗಬೇಕು. ಆಗ ಮಾತ್ರ ಅದು ಶುದ್ಧಿಯಾಗಿರುತ್ತದೆ. ಸಂಸ್ಥೆಯೂ ಹಾಗೆಯೇ; ಉನ್ನತಿಯತ್ತ, ಶ್ರೇಷ್ಠತೆಯತ್ತ ಮುನ್ನಡೆಯಬೇಕು. ಮಾಣಿ ಮಠದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಪರ್ವ ಇದಕ್ಕೆ ಅನುಕರಣೀಯ ನಿದರ್ಶನ ಎಂದು ಹೇಳಿದರು.

ಹಿಂದಿನ ಗುರುಗಳು ಈ ಹೋಬಳಿಗೆ ನೀಡಿದ್ದನ್ನು ಮತ್ತಷ್ಟು ಉನ್ನತಿಯತ್ತ ಒಯ್ಯುವ ಪ್ರಯತ್ನವೇ ಶಿಲಾಮಯ ಗರ್ಭಗುಡಿ. ಜೀವನದಲ್ಲಿ ಮುಖ್ಯ ಅಂಶಗಳಿಗೆ ಕೊಡಬೇಕಾದ ಮಹತ್ವವನ್ನು ನೀಡಬೇಕು. ಮುಖ್ಯವಾದುದನ್ನು ಗೌಣವಾಗಿಸುವ ಪ್ರಯತ್ನ ಮಾಡಬಾರದು. ಆಗ ಅವ್ಯವಸ್ಥೆ ತಾಂಡವವಾಡುತ್ತದೆ ಎಂದು ವಿಶ್ಲೇಷಿಸಿದರು.

ಯಾಗಶಾಲೆ, ಸೋಪಾನಪೀಠದಂಥ ಕಾರ್ಯಗಳು ನಡೆಯುತ್ತಿವೆ. ಒಂದು ಒಳ್ಳೆಯ ಕಾರ್ಯ ಮತ್ತೊಂದು ಉತ್ತಮ ಕಾರ್ಯಕ್ಕೆ ಪ್ರೇರಣೆಯಾಗುತ್ತದೆ. ಅನೇಕ ಸತ್ಕಾರ್ಯಗಳಿಗೆ ಈ ಬೃಹತ್ ಕಾರ್ಯ ಸ್ಫೂರ್ತಿಯಾಗಲಿದೆ ಎಂದರು.

ಬದಿಯಡ್ಕದ ದಂತವೈದ್ಯ ಡಾ.ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಬಗ್ಗೆ ಉಲ್ಲೇಖಿಸಿದ ಸ್ವಾಮೀಜಿಯವರು,ಭಾರತದಲ್ಲಿ ನಾವೇ ಪರಕೀಯರಾಗುವ ಸ್ಥಿತಿ ನಿರ್ಮಾಣವಾಗುತ್ತಿದೆ. ನೆರೆಯ ಕಾಸರಗೋಡಿಗೆ ಬಂದ ಪರಿಸ್ಥಿತಿ ನಾಳೆ ದಕ್ಷಿಣ ಕನ್ನಡಕ್ಕೂ ಬರಬಹುದು; ಇಂಥ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಇಡೀ ಸಮುದಾಯ ಸಂಘಟಿತವಾಗಬೇಕು. ಇಡೀ ಸಮಾಜ ಎಚ್ಚರಗೊಂಡು ಇಂಥ ಘಟನೆ ಮರುಕಳಿಸದಂತೆ ತಕ್ಕ ಉತ್ತರ ನೀಡಬೇಕು ಎಂದು ಆಶಿಸಿದರು.

ಸೇವಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಂಗಾರಡ್ಕ ಜನಾರ್ದನ ಭಟ್ ಆರ್ಥಿಕ ಅವಲೋಕನ ನೆರವೇರಿಸಿದರು. ಅಗಲಿದ ಶಿಷ್ಯಬಂಧುಗಳಿಗೆ ಡಾ.ವೈ.ವಿ.ಕೃಷ್ಣಮೂರ್ತಿ ಶ್ರದ್ಧಾಂಜಲಿ ಸಮರ್ಪಿಸಿದರು. ಅಡಿಕೆಗೆ ಬಂದ ಎಲೆ ಚುಕ್ಕಿ ರೋಗದ ನಿವಾರಣೆಗೆ ಪ್ರಾರ್ಥಿಸಿ ಇಡೀ ಶಿಷ್ಯವೃಂದದ ಪರವಾಗಿ ಶ್ರೀಕರಾರ್ಚಿತ ರಾಮದೇವರಿಗೆ ವಿಶೇಷ ಹರಕೆ ಪ್ರಾರ್ಥನೆ ಸಲ್ಲಿಸಲಾಯಿತು.

See also  ಮಂಗಳೂರು: ಮಾನಸಿಕ ಏಕಾಗ್ರತೆಗೆ ಸಂಗೀತ ಪೂರಕ- ವೇದವ್ಯಾಸ ಕಾಮತ್

ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಪಿದಮಲೆ ನಾಗರಾಜ ಭಟ್, ಮಂಡಲ ಗುರಿಕಾರರಾದ ಉದಯಕುಮಾರ್ ಭಟ್ ಖಂಡಿಗೆ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಹಾಮಂಡಲ ಉಪಾಧ್ಯಕ್ಷೆ ಶೈಲಜಾ ಭಟ್ ಮತ್ತಿತರರು ಉಪಸ್ಥಿತರಿದ್ದರು. ಉದಯಶಂಕರ ಅರಸಿನಮಕ್ಕಿ ನಿರೂಪಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು