News Kannada
Thursday, December 08 2022

ಮಂಗಳೂರು

ಬಂಟ್ವಾಳ: ಸಾಹಿತ್ಯ ಮತ್ತು ಮುದ್ರಣ ಮಾಧ್ಯಮ ಒಂದಕ್ಕೊಂದು ಪೂರಕವಾಗಿದೆ ಎಂದ ಬಾಲಕೃಷ್ಣ ಗಟ್ಟಿ

Literature and print media complement each other, says Balakrishna Gatti
Photo Credit : By Author

ಬಂಟ್ವಾಳ: ಸಾಹಿತ್ಯ ಮತ್ತು ಮುದ್ರಣ ಮಾಧ್ಯಮ ಒಂದಕ್ಕೊಂದು ಪೂರಕವಾಗಿದ್ದು,ಒಂದು ಇನ್ನೊಂದನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪ್ರೋತ್ಸಾಹಿಸುತ್ತಲೇ ಬಂದಿದ್ದು,ಮುದ್ರಣ ಮಾಧ್ಯಮ ತನ್ನ ಓದುಗರನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಇಡೀ ಸಾಹಿತ್ಯ ಲೋಕವನ್ನು ರಕ್ಷಿಸುತ್ತಿದೆ ಎಂದು ಬಂಟ್ವಾಳ ತಾಲೂಕು 22ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ, ಪತ್ರಕರ್ತ, ಲೇಖಕ ಪ್ರೊ.ಕೆ.ಬಾಲಕೃಷ್ಣ ಗಟ್ಟಿ ಹೇಳಿದ್ದಾರೆ.

ತಾಲೂಕಿನ ಅಮ್ಮುಂಜೆ ಅನುದಾನಿತ ಶಾಲೆಯ ಅಮ್ಮುಂಜೆಗುತ್ತು ಪಟೇಲ್ ಶಂಕರ ಶೆಟ್ಟಿ ವೇದಿಕೆಯಲ್ಲಿ ಶನಿವಾರ ಸಂಜೆ ಆರಂಭಗೊಂಡ ಎರಡು ದಿನಗಳ ಬಂಟ್ವಾಳ ತಾಲೂಕು 22 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪತ್ರಿಕೆಗಳು ಓದುಗರಲ್ಲಿ ಸಾಹಿತ್ಯಾಸಕ್ತಿಯನ್ನು ಜೀವಂತವಾಗಿರಿಸಿಕೊಳ್ಳುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಜೀವ ತುಂಬಿದೆ. ಓದುಗರ ಸಂಖ್ಯೆಯನ್ನು ಹೆಚ್ಚಿಸಲು ಹಾಗೂ ಜನರಲ್ಲಿ ಓದುವ ಹವ್ಯಾಸವನ್ನು ಇನ್ನಷ್ಟು ಹೆಚ್ಚಿಸಲು ಸಾಹಿತಿಗಳು, ಲೇಖಕರು, ಪತ್ರಕರ್ತರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಪ್ರಯತ್ನಿಸಬೇಕು ಎಂದವರು ಸಲಹೆ ನೀಡಿದರು.

ಸಾಹಿತ್ಯ ಕ್ಷೇತ್ರದ ಉಳಿವಿನಲ್ಲಿ ಪತ್ರಿಕೆಯ ಪಾತ್ರ ದೊಡ್ಡದು ಎಂದ ಅವರು, ಪತ್ರಿಕೆಗಳಿಗೆ ಲೇಖನ, ಸಂಪಾದಕರಿಗೆ ಪತ್ರಗಳನ್ನು ಬರೆಯುವ ಮೂಲಕ  ಸಾಹಿತ್ಯಾಸಕ್ತಿ ಇಮ್ಮಡಿಗೊಳಿಸಬಹುದು ಎಂದರು. ಪತ್ರಕರ್ತರೂ ಕೂಡ ತಮ್ಮ ಭಾಷೆ ಹಾಗೂ ಬರವಣಿಗೆಯ ಶೈಲಿಯನ್ನು ಉತ್ತಮ ಪಡಿಸುವ  ಮೂಲಕ ಉತ್ತಮ ಲೇಖಕರು- ಸಾಹಿತಿಗಳಾಗಬಹುದು ಎಂದ ಅವರು, ವಿವಿಧ ಪತ್ರಕರ್ತರು  ಸಾಹಿತಿಗಳಾದ ವಿದ್ಯಮಾನಗಳನ್ನು ಉಲ್ಲೇಖಿಸಿದರು.

ಕಳೆದೆರಡು ದಶಕಗಳಲ್ಲಿ ಸಾಹಿತ್ಯ ಕ್ಷೇತ್ರ ಮತ್ತು ಮುದ್ರಣ ಮಾದ್ಯಮ ಒಂದು ದೊಡ್ಡ ಸವಾಲನ್ನು ಎದುರಿಸುತ್ತಿದೆ, ಕ್ಷೀಣಿಸುತ್ತಿರುವ ಓದುಗರ ಸಂಖ್ಯೆ ಸಾಹಿತಿಗಳು, ಪ್ರಕಾಶಕರು ಮತ್ತು ಮುದ್ರಣ ಮಾಧ್ಯಮದವರಲ್ಲಿ  ಆತಂಕ ಸೃಷ್ಟಿಸಿದೆಯಾದರೂ,.ಮುದ್ರಣ ಮಾಧ್ಯಮ ತನ್ನ ವಿಶ್ವಾಸರ್ಹತೆಯನ್ನು ಉಳಿಸಿಕೊಂಡು ತನ್ನ ಓದುಗರನ್ನು ಗಟ್ಟಿಯಾಗಿ ಹಿಡಿದಿಟ್ಟು ಕೊಡುವಲ್ಲಿ ಯಶಸ್ವಿಯಾಗಿವೆ ಎಂದವರು ಹೇಳಿದರು.

ಕೃಷಿ, ಉದ್ಯಮ, ವಾಣಿಜ್ಯ, ಶಿಕ್ಷಣ, ಸಾಹಿತ್ಯ, ಸಾಂಸ್ಕ್ರತಿಕ ಚಟುವಟಿಕೆಗಳು ಎಲ್ಲವೂ ಬಂಟ್ವಾಳಕ್ಕೆ  ನಿಸರ್ಗದತ್ತ ವರದಾನವಾಗಿದ್ದು,ಇಲ್ಲಿ ಕೃಷಿ, ಉದ್ಯಮ, ವಾಣಿಜ್ಯ ಇದರ ಬೆಳವಣಿಗೆಗೆ ವಿಪುಲ ಅವಕಾಶವಿದೆ. ಇಲ್ಲಿರುವ ಜನರು ಸಂಸ್ಕಾರವಂತರು, ಸುಶಿಕ್ಷಿತರು, ಕ್ರಿಯಾಶೀಲರು, ಸೃಜನಶೀಲರು, ಸಾಹಸಮಯ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು. ಪ್ರೀತಿ, ವಿನಮ್ರತೆ, ಸಂಯಮ, ಸಹಕಾರ, ಸಹಾನುಭೂತಿ ಮನೋಭಾವವನ್ನು ಮೈಗೂಡಿಸಿಕೊಂಡಿದ್ದು ಇಲ್ಲಿನ ಸಂಸ್ಕ್ರತಿ ಯಾವಾಗಲೂ ಜನರ ಮನಸ್ಸು ಮತ್ತು ಸ್ಪೂರ್ತಿಯನ್ನು ವಿಶಾಲಗೊಳಿಸುತ್ತದೆ ಎಂದರು.

ಇಲ್ಲಿ ಕೃಷಿ ಕೇವಲ ಒಂದು ವೃತ್ತಿಯಾಗದೆ ಅದೊಂದು ಸಂಸ್ಕ್ರತಿಯಾಗಿದ್ದು,ಕೃಷಿಯ ಅಭಿವೃದ್ಧಿಯೊಂದಿಗೆ ಸಂಸ್ಕ್ರತಿ, ಸಂಸ್ಕಾರ, ಶಿಕ್ಷಣ, ಉದ್ಯಮಶೀಲತೆ ಎಲ್ಲವೂ ಬೆಳೆಯುತ್ತದೆ. ರೈತರೂ ಗಾಳಿ ಮಳೆ ಉರಿಬಿಸಿಲೆನ್ನದೆ ತಮ್ಮ ಹೊಲಗಳಲಿ ದುಡಿಯುತ್ತಾರೆ. ಅವರ ತ್ಯಾಗ ಅನನ್ಯವಾದುದು. ಅವರು ನಮ್ಮ ದೇಶದ ಗಡಿಪ್ರದೇಶದಲ್ಲಿ ದೇಶ ಹಾಗೂ ಜನರನ್ನು ಸಂರಕ್ಷಿಸುವ ಸೈನಿಕರಿಗೆ ಸಮಾನ.ಆದುದರಿಂದಲೇ ಅವರನ್ನು ರಾಷ್ಟ್ರದ ರಕ್ಷಣಾ ವ್ಯೂಹದ ಎರಡನೇ ಸಾಲಿನ ಸೈನಿಕರು ಎನ್ನುತ್ತಾರೆ.

ಬಂಟ್ವಾಳ ತಾಲೂಕು ಬಹಳ ಹಿಂದಿನಿಂದಲೂ ಕೃಷಿಯಲ್ಲಿ ದೊಡ್ಡ ಅಭಿವೃದ್ದಿಯನ್ನು ಮಾಡುತ್ತಾ ಬಂದಿದೆ.ಬಂಟ್ವಾಳ ತಾಲೂಕಿನ ವಗ್ಗ ಪ್ರದೇಶದಲ್ಲಿ ರೈತರು ಬೆಳೆಸಿತ್ತಿದ್ದ ಒಂದು ಬಗೆಯ ಅಕ್ಕಿ ಮೂಲ್ಕಿಯಲ್ಲಿ ಇದ್ದ ಬಂದರು ಮೂಲಕ ಮಸ್ಕತ್ ಸೇರಿದಂತೆ ಅರಬ್ ದೇಶಗಳಿಗೆ ರಪ್ತಾಗುತ್ತಿತ್ತು. ಆದುದರಿಂದಲೇ ಆ ಅಕ್ಕಿಯನ್ನು ಮಸ್ಕತ್ ಅಕ್ಕಿ ಎಂದು ಕರೆಯುತ್ತಿದ್ದರು. ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ನಿರಂತರವಾಗಿ ನಡೆಯುತ್ತಿದೆ ವಿಟ್ಲದಲ್ಲಿರುವ ಕೇಂದ್ರ ಸರಕಾರದ ಕೃಷಿ ಸಂಶೋಧನ ಕೇಂದ್ರ ತೋಟದ ಬೆಳೆ, ಮಿಶ್ರ ಬೆಳೆ, ಹೊಸ ತಳಿಮೊದಲಾದ ವಿಷಯಗಳಲ್ಲಿ ತಾಲೂಕಿನ ರೈತರಿಗೆ ಉಪಯುಕ್ತ ಮಾಹಿತಿ ಹಾಗೂ ಮಾರ್ಗದರ್ಶನ ನೀಡುತ್ತಿದೆ ಎಂದ ಅವರು, ಬೆಟ್ಟ ಅಗಿದು ಗದ್ದೆ ತೋಟಗಳನ್ನು ಮಾಡಿ ಸುರಂಗ ತೋಡಿ ಅವುಗಳಿಗೆ ನೀರು ಹಾಯಿಸಿ ಕೃಷಿಯಲ್ಲಿ ಅದ್ಭುತ ಸಾಧನೆ ಮಾಡಿದ ಪದ್ಮಶ್ರೀ ಪರರಸ್ಕೃತ ಅಮೈ ಮಹಾಲಿಂಗ ನಾಯ್ಕ್ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು.

See also  ಬೆಳ್ತಂಗಡಿ: ಪ್ರತಿಭಾ ಕಾರಂಜಿ ಸ್ಪರ್ಧೆಯ ಉದ್ಘಾಟನೆ

ಸಮ್ಮೇಳನ ಉದ್ಘಾಟನೆ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡ  ರಾಜ್ಯೋತ್ಸವದ ಅಂಗವಾಗಿ ಸರ್ಕಾರ ಕೋಟಿ ಕಂಠ ಗಾಯನವನ್ನು ಆಯೋಜಿಸುವ ಮೂಲಕ ಹೊಸ ದಾಖಲೆಯನ್ನು‌ ನಿರ್ಮಿಸಿದ್ದು, ಕನ್ನಡ ಸಾಹಿತ್ಯ ಸಮ್ಮೇಳನದಿಂದ ಕನ್ನಡಕ್ಕೆ ಹೊಸ ಚೈತನ್ಯ ಸಿಗುವಂತಾಗಲಿ ಎಂದರು. ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತದೆ ಎನ್ನುವುದಕ್ಕೆ ಅಮ್ಮುಂಜೆಯ ಸಮ್ಮೇಳನವೇ ಸಾಕ್ಷಿ ಎಂದರು.

ಸಾಹಿತಿ ಸಂಧ್ಯಾ ಶೆಣೈ ದಿಕ್ಸೂಚಿ ಭಾಷಣ ಮಾಡಿ, ನಾವು ಶ್ರೇಷ್ಠ  ಸಾಹಿತಿಗಳಾಗುವ ಮೊದಲು ಶ್ರೇಷ್ಠ ಮಾನವರಾಗಬೇಕು ಎಂದರು. ಹಿರಿಯ ಸಾಹಿತಿಗಳು ಕಿರಿಯ ಸಾಹಿತಿಗಳನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು. ಭಾಷೆ ಬಳಸಿದಷ್ಟೂ ಅದಕ್ಕೆ ಬಲ ಬರುತ್ತದೆ, ಕನ್ನಡಕ್ಕೆ ಇಂತಹಾ ಬಲ‌ ಬರಬೇಕಾದರೆ ನಾವು ಆಂಗ್ಲ ವ್ಯಾಮೋಹ ಬಿಟ್ಟುಬಿಡಬೇಕು ಎಂದರು. ಭಾಷೆ ಬೇಕಿರುವುದು ಹೃದಯಕ್ಕೆ  ಹಾಗಾಗಿ ನಾವು ಹೃದಯದ ಭಾಷೆಯಿಂದ ಮಾತನಾಡುವ ಎಂದ‌ಅವರು ,ಸಮ್ಮೇಳನ ಎಲ್ಲಾ ಒಳ್ಳೆಯತನಗಳ ಸಹಮಿಲನಕ್ಕೆ ಕಾರಣವಾಗಲಿ ಎಂದರು.

ಬಂಟ್ವಾಳ ತಾಪಂ ಇಒ ರಾಜಣ್ಣ, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ,  ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ. ಎಂ.ಸುರೇಶ ನೆಗಳಗುಳಿ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳ ಆಡಳಿತ ಮೊಕ್ತೇಸರ ಡಾ. ಎ.ಮಂಜಯ್ಯ ಶೆಟ್ಟಿ, ವಿಶ್ರಾಂತ ಪ್ರಾಂಶುಪಾಲ ಗುಂಡಿಲಗುತ್ತು ಶಂಕರ ಶೆಟ್ಟಿ, ತಾಲೂಕು ಬಿಲ್ಲವ ಸಮಾಜ ಸೇವಾ ಸಮಿತಿ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಅಮ್ಮುಂಜೆಗುತ್ತು ಜೀವರಾಜ ಶೆಟ್ಟಿ, ದೇವದಾಸ ಹೆಗ್ಡೆ, ಬಿಜೆಪಿ ಬಂಟ್ವಾಳ ಅಧ್ಯಕ್ಷ ದೇವಪ್ಪ ಪೂಜಾರಿ, ಪಿಡಿಓ ತ್ರಿವೇಣಿ, ಮಲ್ಲಿಕಾ,ಕ.ಸಾ.ಪ. ರಾಜ್ಯಪ್ರತಿನಿಧಿ ಮಾಧವ ಎಂ.ಕೆ.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಆಶಯ ನುಡಿಗಳನ್ನಾಡಿದರು. ತಾಲೂಕು ಅಧ್ಯಕ್ಷ ವಿಶ್ವನಾಥ ಬಂಟ್ವಾಳರ ಧರ್ಮಪತ್ನಿ ರೇಖಾ ವಿಶ್ವನಾಥ್ ಪ್ರಸ್ತಾವನೆಗೈದರು. ಪತ್ರಕರ್ತ ಇಬ್ರಾಹಿಂ ಅಡ್ಕಸ್ಥಳ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಸ್ವಾಗತ ಸಮಿತಿ ಪ್ರಧಾನ ಸಂಚಾಲಕ ಅಬುಬಕರ್ ಅಮ್ಮುಂಜೆ, ಜನಾರ್ದನ ಅಮ್ಮುಂಜೆ  ನೇತೃತ್ವ ವಹಿಸಿದ್ದರು. ರಮಾನಂದ ನೂಜಿಪ್ಪಾಡಿ, ರವೀಂದ್ರ ಕುಕ್ಕಾಜೆ  ಕಾರ್ಯಕ್ರಮ ನಿರೂಪಿಸಿದರು.

ಅಪರಾಹ್ನ 3.30 ಕ್ಕೆ ಬಡಕಬೈಲು ಪೇಟೆಯ ಬಡಕಬೈಲು ಪರಮೇಶ್ವರ ರಾವ್ ಮಹಾದ್ವಾರದಿಂದ ಸಮ್ಮೇಳನ ನಡೆಯುವ ವೀರಯೋಧ ಯಾದವ ಪೂಜಾರಿ ಸಭಾಂಗಣ, ಪೊಳಲಿ ಶೀನಪ್ಪ ಹೆಗ್ಡೆ ಪ್ರಾಂಗಣ ಹಾಗೂ ಅಮ್ಮುಂಜೆಗುತ್ತು ಸಿದ್ಧಣ್ಣ ಶೆಟ್ಟಿ ಮುಖ್ಯದ್ವಾರದವರೆಗೆ ವೈಭವಯುತವಾದ ಮೆರವಣಿಗೆ ನಡೆಯಿತು.

ಮೆರವಣಿಗೆಗೆ ಪೊಳಲಿ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ಅಮ್ಮುಂಜೆ ಸೈಂಟ್ ಮೈಕಲ್ ಚರ್ಚ್ ತೆಂಕಬೆಳ್ಳೂರಿನ ಧರ್ಮಗುರು ವಂ.ಪ್ಯಾಟ್ರಿಕ್ ಸಿಕ್ವೇರ, ಬಡಕಬೈಲು ಬದ್ರಿಯಾ ಜುಮ್ಮಾ ಮಸೀದಿ ಖತೀಬರಾದ ಬಹು.ಕೆ.ಇಲ್ಯಾಸ್ ಸಅದಿ ಯವರು ಚಾಲನೆ ನೀಡಿದರು. ಕನ್ನಡ ಭುವನೇಶ್ವರಿಗೆ ಅಮ್ಮುಂಜೆ ಗ್ರಾಪಂ ಅಧ್ಯಕ್ಷರಾದ ವಾಮನ ಆಚಾರ್ಯ, ಕರಿಯಂಗಳ ಗ್ರಾಪಂ ಅಧ್ಯಕ್ಷ ಚಂದ್ರಹಾಸ ಪಲ್ಲಿಪ್ಪಾಡಿ ಪುಷ್ಪಾರ್ಚನೆಗೈದರು.ಕಸಾಪ ಮಾರ್ಗದರ್ಶಕ ಸರಪಾಡಿ ಅಶೋಕ ಶೆಟ್ಟಿಯವರು ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸುವ ಕಾರ್ಯ ಯಕ್ಷಗಾನದಿಂದ ನಡೆಯುತ್ತಿರುವುದು ಅಭಿಮಾನದ ವಿಚಾರ ಎಂದರು.

See also  ಬೆಂಗಳೂರು: ದೇಶದ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದ ಬಿಜೆಪಿ

ಮುಖ್ಯ ಅತಿಥಿಗಳಾಗಿ ಗಣ್ಯರಾದ ಸಂಕಪ್ಪ ಶೇಖ ಮುಳಿಯಗುತ್ತು ಮತ್ತು ಬಟ್ಲಬೆಟ್ಟು ಬಿ.ಮುಹಮ್ಮದ್ ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಕಂಬಳದ ಕೋಣಗಳು, ಗೊಂಬೆ ಕುಣಿತ,ಕಂಗೀಲು ನೃತ್ಯ, ಹುಲಿವೇಷಧಾರಿಗಳ ಕುಣಿತ, ಕೊಳಲು-ಡೋಲುವಾದ್ಯ, ಬಣ್ಣದ ಕೊಡೆಗಳು ಗಮನಸೆಳೆದವು.

ಅಮ್ಮುಂಜೆ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ಎ.ನಾಗೇಶ ರಾವ್ ವಸ್ತುಪ್ರದರ್ಶನ ಮಳಿಗೆ ಹಾಗೂ ಸಾಹಿತಿ ರಮೇಶ್ ಅಮ್ಮುಂಜೆ ಪುಸ್ತಕಗಳ ಮಳಿಗೆ ಉದ್ಘಾಟಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

153
Mounesh V

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು