ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನ.೧೯ ರಿಂದ ೨೪ ರವರೆಗೆ ನಡೆಯಲಿರುವ ಲಕ್ಷದೀಪೋತ್ಸವ ಪ್ರಯುಕ್ತ ಸೋಮವಾರ ಬೆಳ್ತಂಗಡಿ ತಾ.ಪಂ. ಸಭಾಂಗಣದಲ್ಲಿ ಶಾಸಕ ಹರೀಶ್ ಪೂಂಜ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖಾಧಿಕಾರಿಗಳ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ನಾಡಿನ ಪ್ರಸಿದ್ದ ಕ್ಷೇತ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನ.೧೯ ರಿಂದ ೨೪ ರ ವರೆಗೆ ನಡೆಯುವ ಲಕ್ಷ ದೀಪೋತ್ಸವಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳಿಂದ ಬರುವ ಭಕ್ತರ ಹಿತದೃಷ್ಟಿಯಿಂದ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ತಾಲೂಕು ಆಡಳಿತದ ಸಹಕಾರ ಅಗತ್ಯವಾಗಿದೆ. ತಾಲೂಕಿನ ಪೋಲಿಸ್, ಸಾರಿಗೆ, ಆರೋಗ್ಯ ಸೇರಿದಂತೆ ಪ್ರಮುಖ ಇಲಾಖೆಗಳು ನಮ್ಮ ಊರಿನ ಹಬ್ಬ ಎಂಬ ರೀತಿಯಲ್ಲಿ ಸಮರ್ಥವಾಗಿ ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
* ಸಾರಿಗೆ ವ್ಯವಸ್ಥೆ: ರಾಜ್ಯ ಹೊರ ರಾಜ್ಯಗಳಿಗೆ ಬಸ್ ಸೌಕರ್ಯ ಕುರಿತು ಕೆ.ಎಸ್.ಆರ್.ಟಿ. ಅಧಿಕಾರಿಗಳಿಂದ ಮಾಹಿತಿ ಪಡೆದ ಶಾಸಕರು, ನ.೧೯ ರಿಂದ ನ.೨೪ ರವರೆಗೆ ನಾರಾವಿ, ಮೂಡುಬಿದಿರೆ, ಪುತ್ತೂರು, ಕೊಕ್ಕಡ, ಚಾರ್ಮಾಡಿ ಮಾರ್ಗವಾಗಿ ರಾತ್ರಿ ೧೧ ಗಂಟೆವರೆಗೆ ತಲಾ ಎರಡು ಬಸ್‌ನಂತೆ ನಿಯೋಜಿಸಬೇಕು. ಹೆಚ್ಚುವರಿ ಬಸ್‌ಗಳನ್ನು ಹಾಕಬೇಕು. ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಇಲಾಖೆ ನಿಗಾ ವಹಿಸಬೇಕು. ಜತೆಗೆ ನಾಲ್ಕು ದಿನಗಳಲ್ಲಿ ಬಸ್ ಸಂಚಾರ ಸಮಯವನ್ನು ನ.೧೭ ರಂದು ಪತ್ರಿಕಾ ಪ್ರಕಟನೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
*ಆರೋಗ್ಯ ಇಲಾಖೆ: ಭಕ್ತರ ಆರೋಗ್ಯ ರಕ್ಷಣೆ ಸಲುವಾಗಿ ಧರ್ಮಸ್ಥಳ ಆರೋಗ್ಯ ಇಲಾಖೆಗೆ ಹೆಚ್ಚುವರಿ ವೈದ್ಯರ ನಿಯೋಜಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ೨೪ ತಾಸು ವೈದ್ಯರು ಇರುವಂತೆ ನೋಡಿಕೊಳ್ಳಿ. ಬಿಪಿ, ಮಧುಮೇಹ ತಪಾಸಣೆ ಹಾಗೂ ಅದಕ್ಕೆ ಪೂರಕ ಔಷಧ ದಾಸ್ತಾನು ಇರಿಸಿಕೊಳ್ಳಬೇಕು. ವಸ್ತು ಪ್ರದರ್ಶನ ಮಂಟಪ, ಮುಖ್ಯ ದ್ವಾರ ಹಾಗೂ ಸಮ್ಮೇಳನ ನಡೆಯುವ ಸ್ಥಳದಲ್ಲಿ ಆರೋಗ್ಯ ತಪಾಸಣೆ ಸ್ಟಾಲ್ ಅಳವಡಿಸುವಂತೆ ಸೂಚಿಸಿದರು. ನ.೧೯ ರಿಂದ ೨೪ ರವರೆಗೆ ಸಿಬಂದಿಗಳನ್ನು ಸ್ವಚ್ಛತೆ ಹಾಗೂ ದಿನದಲ್ಲಿ ಬೆಳಗ್ಗೆ ರಾತ್ರಿ ೨ ತಾಸು ಫಾಗಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ತಾಲೂಕು ವೈದಾಧಿಕಾರಿ ತಿಳಿಸಿದರು.
* ಮೆಸ್ಕಾಂ ಇಲಾಖೆ: ದೀಪೋತ್ಸವದ ಸಂದರ್ಭ ವಿದ್ಯುತ್ ಕಡಿತವಾಗದಂತೆ ಎಚ್ಚರ ವಹಿಸಬೇಕು. ಲೋವೋಲ್ಟೇಜ್ ಸಮಸ್ಯೆ ಬಾರದ ರೀತಿ ಗಮನಹರಿಸಿ ಎಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
* ಸಂಚಾರ-ಭದ್ರತೆ ನಿರ್ವಹಣೆ: ಸಂಚಾರ ಹಾಗೂ ಭದ್ರತೆ ದೃಷ್ಟಿಯಿಂದ ಪೋಲಿಸರ ಹಾಗೂ ಹೋಂ ಗಾರ್ಡ್‌ಗಳ ನಿಯೋಜನೆ ಕುರಿತು ಉನ್ನತ ಅಧಿಕಾರಿಗಳಿಗೆ ತಿಳಿಸುತ್ತೇನೆ. ಸ್ನಾನಘಟ್ಟದ ಬಳಿ ಲಕ್ಷದೀಪೋತ್ಸವ ಸಂದರ್ಭ ಸಿಬಂದಿಗಳ ನೇಮಕ, ಜತೆಗೆ ಪಿಕ್ ಪಾಕೆಟ್ ಮಾಡುವಂತ ಘಟನೆಗಳು ಸಂಭವಿಸದಂತೆ ನಿಗಾವಹಿಸಲು ಪೊಲೀಸ್ ಇಲಾಖೆ, ಟ್ರಾಫಿಕ್ ಇಲಾಖೆ, ಹೋಮ್ ಗಾರ್ಡ್ ನಿಯೋಜನೆಗೆ ಸೂಚಿಸಲಾಗುವುದು ಎಂದು ಹೇಳಿದರು.
* ಲೋಕೋಪಯೋಗಿ ಇಲಾಖೆ: ರಸ್ತೆಗಳಲ್ಲಿ ಚಾರ್ಮಾಡಿ ಘಾಟ್, ಉಜಿರೆ ಪೇಟೆ, ಕೊಕ್ಕಡ ರಸ್ತೆ, ಚಾರ್ಮಾಡಿ ರಸ್ತೆಯ ಧರ್ಮಸ್ಥಳ ಮುಂಡಾಜೆ ಕ್ರಾಸ್ ಸೂಚನ ಫಲಕ ಅಳವಡಿಸಬೇಕು. ಜತೆಗೆ ಉಬ್ಬು ತಗ್ಗುಗಳಿಗೆ ಹಾಗೂ ರಸ್ತೆ ಅಂಚಿನಲ್ಲಿ ವಾಹನ ಸವಾರರಿಗೆ ಕಾಣಿಸುವಂತೆ ಮಾರ್ಕಿಂಗ್ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಯಿತು.
ತಾಲೂಕಿನ ವಿವಿಧ ಇಲಾಖೆಗಳು ಲಕ್ಷ ದೀಪೋತ್ಸವದ ಸಂದರ್ಭ ಸ್ಟಾಲ್‌ಗಳನ್ನು ಅಳವಡಿಸುವಂತೆ ಸೂಚಿಸಿದರು. ವಿವಿಧ ಜಿಲೆಗಳಿಂದ ಬರುವ ಯಾತ್ರಾರ್ಥಿಗಳಿಗೆ ಸ್ಟಾಲ್‌ಗಳಿಂದ ಉಪಯುಕ್ತ ಮಾಹಿತಿ ದೊರೆಯುತ್ತದೆ. ನಾಮಕಾವಸ್ಥೆಗೆ ಮಾತ್ರ ಸ್ಟಾಲ್ ಹಾಕಬೇಡಿ. ಆನರಿಗೆ ಪ್ರಯೋಜನ ಆಗುವ ರೀತಿಯಲ್ಲಿ ಸ್ಟಾಲ್ ಅಳವಡಿಸಿ, ಕ್ಷೇತ್ರದಿಂದ ಸಹಕಾರ ನೀಡುತ್ತಾರೆ ಎಂದು ಶಾಸಕರು ಸಭೆಯಲ್ಲಿ ಪ್ರಸ್ತಾವಿಸಿದರು.
ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರು, ಶಾಸಕರ ಮುತುವರ್ಜಿಯಂತೆ ಪುಣ್ಯಕಾರ್ಯದ ಯಶಸ್ಸಿಗೆ ಎಲ್ಲರೂ ಸಹಕರಿಸುವಂತೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪರವಾಗಿ ವಿನಂತಿಸಿಕೊಂಡರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ. ಉಪಸ್ಥಿತರಿದ್ದರು. ತಾ.ಪಂ. ಸಂಯೋಜಕ ಜಯಾನಂದ್ ನಿರೂಪಿಸಿದರು.