News Kannada
Thursday, December 08 2022

ಮಂಗಳೂರು

ಕನ್ನಡದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿದರೆ ಅಸಾಮಾನ್ಯವಾದದನ್ನು ಸಾಧಿಸಬಲ್ಲರು: ಬಿ.ಸಿ‌.ನಾಗೇಶ್

Kannada children can achieve extraordinary things if they instill confidence in them: B C Nagesh
Photo Credit : News Kannada
ಮಂಗಳೂರು: ಶಿಕ್ಷಣದಲ್ಲಿ ಭಾರತೀಯತೆಯನ್ನು ತರುವ ಉದ್ಧೇಶದಿಂದ ಮತ್ತು ಮಕ್ಕಳ ಕೇಂದ್ರಿತ ಶಿಕ್ಷಣವನ್ನು ನೀಡುವ ಧ್ಯೇಯದೊಂದಿಗೆ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತರಲಾಗಿದೆ. ಮಾತೃ ಭಾಷೆ ಮತ್ತು ಸ್ಥಾನೀಯ ಭಾಷೆಯಲ್ಲೇ ಶಿಕ್ಷಣ ನೀಡುವ ಮೂಲಕ ಮಕ್ಕಳಲ್ಲಿ ಅದಾಗಲೇ ಅಡಗಿರುವ ಸೂಪ್ತ ಪ್ರತಿಭೆಯ ಅನಾವರಣಗೊಳಿಸುವ ಪ್ರಯತ್ನವಾಗುತ್ತಿದೆ. ಸರ್ಕಾರದ ಈ ಪ್ರಯತ್ನಗಳ ಜೊತೆಗೆ ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಕನ್ನಡ ಶಾಲಾ ಮಕ್ಕಳ ಹಬ್ಬದ ಮೂಲಕ ಕನ್ನಡ ಮಾಧ್ಯಮದ ಮಕ್ಕಳಿಗೆ ಆತ್ಮವಿಶ್ವಾಸ ತುಂಬುವುದಕ್ಕಾಗಿ ಕೈಗೊಂಡಿರುವ ಕಾರ್ಯ ಗಮನಾರ್ಹ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ಕೇಶವ ಸ್ಮೃತಿ ಸಂವರ್ಧನ ಸಮಿತಿ (ನೋಂ.) ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜಿಸಿದ ಎರಡು ದಿನಗಳ ಕನ್ನಡ ಶಾಲಾ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.
ಪ್ರಸ್ತುತ ಪೋಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಲು ತಯಾರಿದ್ದಾರೆ. ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದುವುದಕ್ಕೆ ಸಿದ್ಧರಿದ್ದಾರೆ. ಹಾಗಾಗಿ ಸರ್ಕಾರದ ವತಿಯಿಂದ ಕನ್ನಡ ಮಾದರಿ ಶಾಲೆಗಳ ರೂಪುರೇಶೆ, ಶಾಲೆಯ ಕೊರೆತೆಗಳ ಪೂರೈಕೆ, ಮೂಲಭೂತ ಸೌಕರ್ಯಗಳ ಅನುಷ್ಠಾನ, ಶಿಕ್ಷಕರ ನೇಮಕಾತಿ ಮುಂತಾದ ಕಾರ್ಯಗಳನ್ನು ಶೀಘ್ರವಾಗಿ ಮಾಡಲಾಗುತ್ತದೆ‌. ರಾಜಕೀಯದ ಹೊರತಾಗಿ ಕಟ್ಟಕಡೆಯ ಮಗುವನ್ನು ತಲುಪಿ, ಭಾಷೆಯ ಮೂಲಕ ಸಂಸ್ಕೃತಿ ಉಳಿಸುವಲ್ಲಿ ನಾವು ಕಾರ್ಯಪ್ರವೃತ್ತರಾಗುತ್ತೇವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಾತನಾಡಿ ಕನ್ನಡ ಪರಿಪೂರ್ಣ, ವೈಜ್ಞಾನಿಕ ಮತ್ತು ಮನೋಜ್ಞವಾದ ಭಾಷೆ. ಅಂತಹ ಭಾಷೆಯ ಮೂಲಕ ಭಕ್ತಿಯ ಶಕ್ತಿ ಅನಾವರಣಗೊಂಡ ನಾಡಿನಲ್ಲಿ ಕನ್ನಡವನ್ನು ಉಸಿರಾಗಿಸುವ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ನಮ್ಮ ಶಕ್ತಿಯ ಅರಿವಾದಾಗ ಕನ್ನಡವನ್ನು ತ್ರಿವಿಕ್ರಮನಂತೆ ಶಕ್ತಿಯುತಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮಾತೃಭಾಷೆಯಲ್ಲೇ ಶಿಕ್ಷಣ ಪಡೆದು ಸಾಧಕರಾದವರು ಮತ್ತು ಕನ್ನಡ ಮಾತೃಭಾಷೆಯಲ್ಲದೆಯೂ ಕನ್ನಡಕ್ಕೆ ಅಪಾರ ಕೊಡುಗೆ ನೀಡಿದವರು ನಮಗೆ ಆದರ್ಶವಾಗಬೇಕು. ಅಂತಹ ನಿದರ್ಶನಗಳನ್ನು ತಿಳಿಸಿಕೊಟ್ಟು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯ ಶಿಕ್ಷಕರಿಂದಾಗಬೇಕು. ಕನ್ನಡದ ಮಕ್ಕಳು ಕನ್ನಡದಲ್ಲೇ ಶಿಕ್ಷಣವನ್ನು ಪಡೆದು ಕನ್ನಡಕ್ಕೆ ಭದ್ರವಾದ ಬುನಾದಿಯನ್ನು ಹಾಕುತ್ತಾರೆ ಎನ್ನುವ ನಂಬಿಕೆ ಇದೆ ಎಂದು ನುಡಿದರು‌.
ಕಾರ್ಯಕ್ರಮದ ಮತ್ತೋರ್ವ ಮುಖ್ಯ ಅತಿಥಿ ಐಎಎಸ್ ಅಧಿಕಾರಿ ನಂದಿನಿ ಕೆ.ಆರ್ ಮಾತನಾಡಿ ನಮ್ಮ ಸತ್ವ ಪರಿಚಯವಾದಾಗ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಪ್ರತಿ ಭಾಷೆಯೂ ಬದಲಾವಣೆಗೆ ಅನುಗುಣವಾಗಿ ಬೆಳೆಯಬೇಕು. ತಂತ್ರಜ್ಞಾನದ ಸಹಾಯದೊಂದಿಗೆ ನಮ್ಮ ಭಾಷೆಯ ಶ್ರೇಷ್ಠತೆ ಅರಿಯುವ ಕಾರ್ಯವಾಗಬೇಕು ಎಂದು ಹೇಳಿದರು.
ಕನ್ನಡವನ್ನು ಹಲವು ಮಜಲುಗಳಲ್ಲಿ ಕಟ್ಟಿದವರು ಅನೇಕರಿದ್ದಾರೆ. ಕೇವಲ ಭಾಷೆ ಮಾತ್ರವಲ್ಲದೆ ಸಂಸ್ಕೃತಿಯೂ ಬದಲಾಗುವಂತಹ ಪ್ರಮೇಯಗಳ ನಡುವೆ ಪ್ರಸ್ತುತ ಕನ್ನಡವನ್ನು ಉಳಿಸುವ ಗುರುತರವಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಕನ್ನಡವನ್ನು ವಿಶ್ವಸಂಸ್ಥೆಯಾದಿಯಾಗಿ ಉಲ್ಲೇಖಗಳನ್ನು ನೀಡಿ ಬಳಸುತ್ತಿರುವಾಗ ನಮ್ಮಲ್ಲಿ ಹಿಂಜರಿಕೆ ಬೇಡ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಆಶಯ ಭಾಷಣವನ್ನು ಮಾಡಿದ ಡಾ.ಧನಂಜಯ ಕುಂಬ್ಳೆ ಮಾತನಾಡಿ ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಮಹತ್ವವನ್ನು ಪಡೆದ ಮಣ್ಣಿನಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬವನ್ನು ಆಯೋಜಿಸಲಾಗಿದೆ‌. ಕನ್ನಡ ಮಾಧ್ಯಮ ಶಾಲೆಗಳು ಮಂಕಾದಂತಿರುವ ಸಂದರ್ಭದಲ್ಲಿ ಕನ್ನಡ ಶಾಲಾ ಮಕ್ಕಳಲ್ಲಿ ಆತ್ಮವಿಶ್ವಾಸ, ನಾಡು, ನುಡಿಯ ಕುರಿತು ಅಭಿಮಾನವನ್ನು ತುಂಬುವ ಧ್ಯೇಯವನ್ನು ಒಳಗೊಂಡಿದೆ. ನಾಡಿನ ಇತಿಹಾಸ, ಹಿರಿಯರ ಚಿಂತನೆ, ಕಲಾ ಕಾರ್ಯಕ್ರಮಗಳು, ಉದ್ಯೋಗ ಮಾರ್ಗದರ್ಶನಗಳ ಮೂಲಕ, ಮೌಲ್ಯವನ್ನು ಎತ್ತಿ ಹಿಡಿದ ಕನ್ನಡದ ಮಕ್ಕಳು ನಾವು ಎಂಬ ಆದರ್ಶವನ್ನು ನಾಡಿನಾದ್ಯಂತ ವಿಸ್ತರಿಸುವುದು ಈ ಕಾರ್ಯಕ್ರಮದ ಉದ್ಧೇಶ‌ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್ ಆಳ್ವ ಮಾತನಾಡಿ ಕನ್ನಡ ಶಾಲೆಗಳಲ್ಲಿ ಓದಿದ ಹಲವು ಮಕ್ಕಳ ಸಾಧನೆ ಜಗತ್ಪ್ರಸಿದ್ಧಿ ಪಡೆದಿದೆ. ಸರ್ಕಾರವೂ ಕನ್ನಡ ಶಾಲೆಯನ್ನು ಉಳಿಸುವ ಕೆಲಸ ಇಂದಿಗೂ ಮಾಡುತ್ತಿದೆ‌. ಆದರೆ ಕಾಲ ಬದಲಾಗುತ್ತಾ ಹೋದಾಗ ಕನ್ನಡ ಶಾಲೆಗಳನ್ನು ಮೇಲ್ದರ್ಜೆಗೆ ಕೊಂಡೊಯ್ಯುವ ಕೆಲಸದಲ್ಲಿ ನಾವು ಸೋತಿದ್ದೇವೆ. ಆದ್ದರಿಂದ ಆದರ್ಶವಾದ ಕನ್ನಡ ಶಾಲೆಗಳನ್ನು ಖಾಸಗಿಯಾಗಿಯೂ ಕಟ್ಟುವ ಅನಿವಾರ್ಯತೆ ಪ್ರಸ್ತುತ ಇದೆ ಎಂದು ನುಡಿದರು.
ಇಂಗ್ಲೀಷಿನ ದಾಳಿ ನಮ್ಮ ಮೇಲೆ ಮಾತ್ರ ಆದದಲ್ಲ. ಜಗತ್ತಿನ ಉಳಿದ ರಾಷ್ಟ್ರಗಳ ಮೇಲೂ ಆಗಿದೆ. ಆದರೆ ಅವರೆಲ್ಲರೂ ತಮ್ಮ ನೆಲದ ಭಾಷೆಯನ್ನೇ ಪ್ರಮುಖ ಭಾಷೆಯನ್ನಾಗಿಸಿದ ಕಾರಣ ಆಯಾ ದೇಶಗಳಲ್ಲಿ ಪ್ರಾದೇಶಿಕ ಭಾಷೆಗಳೇ ಮಹತ್ವವನ್ನು ಪಡೆದಿವೆ. ನಮ್ಮ ರಾಷ್ಟ್ರದಲ್ಲಿ ನಾವು ಪ್ರಾದೇಶಿಕ ಭಾಷೆಗೆ ಮಹತ್ವ ನೀಡದ ಕಾರಣ ನಮ್ಮಲ್ಲಿ ಹಲವು ಗೊಂದಲಗಳಾಗುತ್ತಿವೆ ಎಂದು ಅಭಿಪ್ರಾಯಪಟ್ಟರು.
ಕನ್ನಡ ಶಾಲೆಯ ಸೋಲು, ಶ್ರೀಸಾಮಾನ್ಯರ ಸೋಲು, ಹಳ್ಳಿಯ ಸೋಲು, ಸಂಸ್ಕೃತಿಯ ಸೋಲು ಎನ್ನುವುದನ್ನು ಗಮನಿಸಬೇಕು. ಇದನ್ನು ಮನಗಂಡು ರಾಜ್ಯಾದ್ಯಾಂತ ಈ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆಗೆ ಒಗ್ಗಿಕೊಂಡು ಹಲವು ಕನ್ನಡ ಮಾಧ್ಯಮ ಶಾಲೆಗಳು ತಲೆ ಎತ್ತಿ ನಿಂತಿವೆ. ಕನ್ನಡ ಶಾಲೆಯನ್ನು ಸಮರ್ಥವಾಗಿ ಕಟ್ಟಿದರೆ ಅದಕ್ಕೆ ಸಮಾಜ ಸ್ಪಂದಿಸುತ್ತದೆ ಎನ್ನುವುದಕ್ಕೆ ನಿದರ್ಶನವಾಗಿವೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ(ನೋಂ.)ಯ ಅಧ್ಯಕ್ಷ ವಾಮನ್ ಶೆಣೈ, ಕನ್ನಡ ಶಾಲಾ ಮಕ್ಕಳ ಹಬ್ಬದ ಸ್ವಾಗತ ಸಮಿತಿಯ ಉಪಾಧ್ಯಕ್ಷ ಕೆ.ಸಿ.ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಧನೆ ಮಾಡಿದ ನಾಲ್ಕು ಕನ್ನಡ ಮಾಧ್ಯಮ ಶಾಲೆಗಳಿಗೆ ಸನ್ಮಾನ ಮಾಡಲಾಯಿತು. ಸ್ವಾಗತ ಸಮಿತಿಯ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕೇಶವ ಸ್ಮೃತಿ ಸಂವರ್ಧನ ಸಮಿತಿಯ ಸಹ ಕಾರ್ಯದರ್ಶಿ ರಮೇಶ್ ವಂದಿಸಿದರು. ಎಸ್ ಡಿ ಎಂ ಕಾನೂನು ಕಾಲೇಜಿನ ಉಪನ್ಯಾಸಕಿ ಡಾ. ಮೀನಾಕ್ಷಿ ರಾಮಚಂದ್ರ ಕಾರ್ಯಕ್ರಮವನ್ನು ನಿರೂಪಿಸಿದರು.
See also  ಮಂಗಳೂರು: ಹಿಂದುತ್ವ ಸಿದ್ದಾಂತದ ಕಾರ್ಯಕ್ರಮ ರದ್ದುಗೊಳಿಸುವಂತೆ ಕ್ಯಾಂಪಸ್ ಫ್ರಂಟ್ ಮನವಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12792
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು