ಮಂಗಳೂರು: ಐದು ದಶಕಗಳ ಕಾಲ ಯಕ್ಷಗಾನ ಕ್ಷೇತ್ರಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ಕುಂಬ್ಳೆ ಸುಂದರ ರಾವ್ ಅವರ ಅಗಲುವಿಕೆಯಿಂದ ಯಕ್ಷರಂಗ ಮಹಾನ್ ಕಲಾವಿದನನ್ನು ಕಳೆದುಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್, ಸಂತಾಪ ವ್ಯಕ್ತಪಡಿಸಿದ್ದಾರೆ.
1994 ರಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಐದು ವರ್ಷಗಳ ಕಾಲ ಜನಪರ ಕಾರ್ಯಗಳನ್ನು ಮಾಡಿ ಜನಮನ್ನಣೆಯನ್ನು ಪಡೆದಿದ್ದರು. ಕರಾವಳಿಯಲ್ಲಿ ಬಿಜೆಪಿಯ ಬಲವರ್ಧನೆಗೆ ಮಾರ್ಗದರ್ಶನ ನೀಡಿದವರು. ಸ್ಪೂರ್ತಿಯುತ ಭಾಷಣದಿಂದ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಿದವರು. ವಿಧಾನ ಸೌಧದಯಲ್ಲಿಯೂ ಯಕ್ಷಗಾನ ಆಯೋಜಿಸಿದ ಕೀರ್ತಿ ಅವರದಾಗಿತ್ತು. ಬಹುಭಾಷೆಗಳಲ್ಲಿ ಪಾಂಡಿತ್ಯವನ್ನು ಹೊಂದಿದ್ದ ಕುಂಬ್ಳೆ ಸುಂದರ ರಾಯರು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಅನುಪಮ ಸೇವೆ ಸಲ್ಲಿಸಿದ್ದರು.
ಅತ್ಯುತ್ತಮ ವಾಗ್ಮಿಯಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮ ಜೀವನ ಸವೆಸಿದ್ದ ಕುಂಬ್ಳೆ ಸುಂದರ ರಾಯರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಯಕ್ಷರಂಗಕ್ಕೆ ಹಾಗೂ ಸಮಾಜಕ್ಕೆ ಕುಂಬ್ಳೆ ಅವರು ಸಲ್ಲಿಸಿದ ಸೇವೆ ಸದಾ ಸ್ಮರಣೀಯ ಎಂದು ನಳಿನ್ ಕುಮಾರ್ ಕಟೀಲ್ ಅವರು ಸಂತಾಪದಲ್ಲಿ ತಿಳಿಸಿದ್ದಾರೆ.