ಮಂಗಳೂರು: ಭಾರತೀಯ ಉದ್ಯಮಗಳ ಒಕ್ಕೂಟದ ಯಂಗ್ ಇಂಡಿಯನ್ಸ್ ಮಂಗಳೂರು ಘಟಕ ತನ್ನ ರಾಷ್ಟ್ರೀಯ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ತಟಸ್ಥ್ ಶೀರ್ಷಿಕೆಯಡಿ ಕಡಲ ಕಿನಾರೆಯಲ್ಲಿ ಸರ್ಫಿಂಗ್ ಆಯೋಜಿಸಿತ್ತು. ಜೊತೆಗೆ ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ಪ್ರತಿನಿಧಿಗಳಿಗೆ ಕರಾವಳಿ ಶೈಲಿಯ ಆತಿಥ್ಯದ ಪರಿಚಯವನ್ನೂ ಮಾಡಿಕೊಡಲಾಯಿತು.
ಕರಾವಳಿಯ ಕಲೆಗಳನ್ನು ಪ್ರದರ್ಶಿಸಲಾಯಿತು ಮತ್ತು ಆ ಮೂಲಕ ದೇಶದ ವಿವಿಧೆಡೆಯಿಂದ ಬಂದಿದ್ದ ಪ್ರತಿನಿಧಿಗಳಿಗೆ ಇಲ್ಲಿಯ ಜನಜೀವನದ ಪರಿಚಯವನ್ನು ಮಾಡಿಕೊಡಲಾಯಿತು. ನವೆಂಬರ್ ೨೬ರಂದು ಮಂಗಳೂರು ಸಮೀಪದ ಸುರತ್ಕಲ್ ಕಡಲ ಕಿನಾರೆಯಲ್ಲಿ ಮಂಗಳೂರು ಘಟಕದ ವಾರ್ಷಿಕೋತ್ಸವ ನಡೆಯಿತು. ಬಳಿಕ ನಡೆದ ಸಭೆಯಲ್ಲಿ ಮಂಗಳೂರು ಘಟಕಕ್ಕೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಸಮೀಕ್ಷಾ ಶೆಟ್ಟಿ, ಹಾಗು ಉಪಾಧ್ಯಕ್ಷರಾಗಿ ಸಲೋಮಿ ಲೋಬೋ ಪಿರೇರಾ ಹಾಗು ಗೌರವ ಸದಸ್ಯರಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಯ್ಕೆಯಾದರು. ರಾಜೇಶ್ ಅವರು ರಾಷ್ಟ್ರೀಯ ವೀಕ್ಷಕರಾಗಿದ್ದರು. ಕಲ್ಬಾವಿ ಕ್ಯಾಶ್ಯುನ ಪ್ರಕಾಶ್ ಕಲ್ಬಾವಿ ಮುಖ್ಯ ಅತಿಥಿಯಾಗಿದ್ದರು. ಹಿಂದಿನ ಅವಧಿಯಲ್ಲಿ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ನಿರ್ಗಮನ ಅಧ್ಯಕ್ಷ ಅಶಿತ್ ಹೆಗ್ಡೆ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಒಕ್ಕೂಟವು ದೇಶಾದ್ಯಂತ ೫೭ ಘಟಕಗಳನ್ನು ಹೊಂದಿದೆ ಮತ್ತು ಮಂಗಳೂರು ಘಟಕವು ಎರಡು ವರ್ಷಗಳ ಹಿಂದೆ ಸ್ಥಾಪನೆಯಾದ ಘಟಕವಾಗಿದೆ. ಎರಡೇ ವರ್ಷದಲ್ಲಿ ಅದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಆತಿಥ್ಯ ವಹಿಸಿಕೊಂಡು ಯಶಸ್ವಿಯಾಗಿ ಸಂಘಟಿಸಿದೆ.