News Kannada
Monday, October 02 2023
ಕ್ಯಾಂಪಸ್

ಉಜಿರೆ: ಡಾ. ಪಿ.ಎನ್. ಉದಯಚಂದ್ರ ಅವರಿಗೆ ಕಾಲೇಜಿನ ಬೋಧಕರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ

Ujire: Dr. Farewell ceremony for P.N. Udayachandra by college faculty association
Photo Credit : News Kannada

ಉಜಿರೆ, ಡಿ.1: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಅವರು ಸೇವಾನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ನ.30ರಂದು ಕಾಲೇಜಿನ ಬೋಧಕರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ‘ಉದಯಾಭಿನಂದನ’ ನಡೆಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್, “ಡಾ. ಪಿ.ಎನ್. ಉದಯಚಂದ್ರ ಅವರು ತಮ್ಮ ವಿದ್ಯಾರ್ಥಿಗಳಿಗೆ ಹಾಗೂ ಸಹೋದ್ಯೋಗಿಗಳಿಗೆ ಬೆಳೆಯುವುದಕ್ಕೆ ಎಲ್ಲ ರೀತಿಯ ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಇದು ಅವರ ದೊಡ್ಡತನ. ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಆಶಿಸುವ ದೊಡ್ಡ ಗುಣ ಅವರಲ್ಲಿದೆ” ಎಂದು ಶ್ಲಾಘಿಸಿದರು.

ಮುಖ್ಯ ಅತಿಥಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅವರು ಮಾತನಾಡಿ, “ವ್ಯಕ್ತಿಯ ಜೀವನದಲ್ಲಿ ದೌರ್ಬಲ್ಯಗಳಿರುವುದಿಲ್ಲ. ಮತ್ತೊಬ್ಬರ ದೃಷ್ಟಿಯಲ್ಲಿ ಅದು ದೌರ್ಬಲ್ಯವಾಗಿರಬಹುದು ಅಷ್ಟೆ. ಜೀವನದಲ್ಲಿ ನಿರುತ್ತೇಜಕ ಮಾತುಗಳು ಕೇಳಿ ಬಂದಾಗ ನಮ್ಮ ಸ್ವಪ್ರಯತ್ನ ಹಾಗೂ ಆತ್ಮವಿಶ್ವಾಸ ತುಂಬ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಸ್ವಪ್ರಯತ್ನದಿಂದ ಸಮಾಜ ಹಾಗೂ ತಮ್ಮ ಸಂಸ್ಥೆಗೆ ಪ್ರಯೋಜನಕಾರಿಯಾಗಿರಬಹುದಾಗಿದೆ” ಎಂದರು.

“ಡಾ. ಪಿ.ಎನ್. ಉದಯಚಂದ್ರ ಅವರು ಓರ್ವ ದೊಡ್ಡ ವಿದ್ವಾಂಸರಾಗಿದ್ದು, ಸಂಶೋಧಕರೂ ಆಗಿದ್ದಾರೆ. ಅವರ ಈ ಎರಡೂ ಸಾಮರ್ಥ್ಯಗಳು ಮುಂದೆಯೂ ಕೂಡ ವಿದ್ಯಾರ್ಥಿಗಳಿಗೆ, ಯುವಕರಿಗೆ ಪ್ರಯೋಜನವಾಗಲಿ. ಸಂಶೋಧನಾ ಮಾರ್ಗದರ್ಶಿಯೂ ಆಗಿರುವ ಅವರು ನಮ್ಮ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶವಿದೆ” ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಂ. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ, “ಪುಸ್ತಕಗಳನ್ನು ಓದುವ ಹವ್ಯಾಸದಲ್ಲಿ ಡಾ. ಪಿ.ಎನ್. ಉದಯಚಂದ್ರ ಅವರು ಇತರರಿಗೆ ಮಾದರಿ” ಎಂದರು.

ಸಮ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಪಿ.ಎನ್. ಉದಯಚಂದ್ರ ಅವರು ಎಸ್.ಡಿ.ಎಂ. ಕಾಲೇಜಿನಲ್ಲಿ ತಮ್ಮ 37 ವರ್ಷಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು. ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಎ. ಜಯಕುಮಾರ ಶೆಟ್ಟಿ ಅವರನ್ನು ಅಭಿನಂದಿಸಿ, ಶುಭ ಹಾರೈಸಿದರು.

ಇಂಗ್ಲಿಷ್ ಕವಿ ಆಲ್ಫ್ರೆಡ್ ಲಾರ್ಡ್ ಟೆನಿಸನ್ ನ ಕವಿತೆಯ “..ಮೆನ್ ಮೇ ಕಮ್ ಆಂಡ್ ಮೆನ್ ಮೇ ಗೋ, ಬಟ್ ಐ ಗೋ ಆನ್ ಫಾರ್ ಎವರ್” ಸಾಲನ್ನು ಉಲ್ಲೇಖಿಸಿದ ಅವರು, “ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ನಾಯಕತ್ವ ಮಾತ್ರ ಹಾಗೆಯೇ ಉಳಿಯುತ್ತದೆ. ಪ್ರಾಂಶುಪಾಲ ಸ್ಥಾನವೂ ಅದೇ ರೀತಿಯಾಗಿದ್ದು, ಸವಾಲುಗಳು, ಅನಿಶ್ಚಿತತೆಗಳು ಇರುತ್ತವೆ. ಎಲ್ಲರ ಸಹಕಾರದಿಂದ, ಕಾಲಾನುಸಾರ ಎಲ್ಲವೂ ಸುಗಮವಾಗಿ ಸಾಗುತ್ತದೆ” ಎಂದು ತಿಳಿಸಿದರು.

ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ. ಎ. ಜಯಕುಮಾರ ಶೆಟ್ಟಿ ಅವರು, “ಎಲ್ಲಿ ಸವಾಲುಗಳಿವೆಯೋ ಅಲ್ಲಿ ಮಾತ್ರ ವಿಜಯದ ಉತ್ಸಾಹವನ್ನು ಅನುಭವಿಸಲು ಸಾಧ್ಯ. ಎಲ್ಲರೂ ಸಂಘಟಿತರಾಗಿ ಮುಂದಕ್ಕೆ ಸಾಗಿದರೆ ಉತ್ಕೃಷ್ಟ ಯಶಸ್ಸು ಸಾಧ್ಯವಿದೆ” ಎಂದರು.

See also  ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಶಿಕ್ಷಣ ಶಿಬಿರದಲ್ಲಿ ಬಸವರಾಜ ಬೊಮ್ಮಾಯಿ

ಅಭಿನಂದನಾ ನುಡಿಗಳನ್ನಾಡಿದ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀನಾರಾಯಣ ಅವರು, ತಮ್ಮ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ಪಿ.ಎನ್. ಉದಯಚಂದ್ರ ಅವರೊಂದಿಗಿನ 15 ವರ್ಷಗಳ ಒಡನಾಟವನ್ನು ಸ್ಮರಿಸಿಕೊಂಡರು. ವಿಭಾಗಕ್ಕೆ ಸೇರುವ ಹೊಸ ಪ್ರಾಧ್ಯಾಪಕರು ತಮ್ಮ ವೃತ್ತಿ ಕ್ಷೇತ್ರದಲ್ಲಿ ಉನ್ನತ ಹಂತಕ್ಕೆ ಏರಲು, ಸಂಶೋಧನೆಗಳಲ್ಲಿ ತೊಡಗಿಕೊಳ್ಳಲು ಉದಯಚಂದ್ರ ಅವರು ಪ್ರೋತ್ಸಾಹಿಸುತ್ತಿದ್ದ ಬಗೆಯನ್ನು, ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಬೆಂಬಲವನ್ನು ಅವರು ವಿವರಿಸಿದರು.

ಡಾ. ಪಿ.ಎನ್. ಉದಯಚಂದ್ರ ಅವರ ಕುರಿತು ಸಂಸ್ಥೆಯ ಸಿಬ್ಬಂದಿ ಹೊರತಂದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಎಂ.ವೈ. ಹರೀಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ, ಕಾಲೇಜಿನ ಸೂಪರಿಂಟೆಂಡೆಂಟ್ ಯುವರಾಜ್ ಪೂವಣಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಡೀನ್ ಡಾ. ವಿಶ್ವನಾಥ್ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ಬೋಧಕರ ಸಂಘದ ಕಾರ್ಯದರ್ಶಿ ಡಾ. ಭಾಸ್ಕರ ಹೆಗ್ಡೆ ಸ್ವಾಗತಿಸಿ, ಪ್ರಸ್ತಾವಿಸಿದರು. ಸಂಘದ ಪದಾಧಿಕಾರಿ ಸುವೀರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು