ಬೆಳ್ತಂಗಡಿ: ವಿಕಲಾಂಗತೆಯೆಂಬುದು ಕೆಲವರಿಗೆ ಹುಟ್ಟಿನಿಂದ ಬಂದರೆ, ಇನ್ನಷ್ಟು ಮಂದಿ ಆರೋಗ್ಯವಾಗಿದ್ದಾಗಲೆ ಕಾಯಿಲೆಗೆ ತುತ್ತಾದಾಗ ಬರಬಹುದು. ಹೀಗಾದಾಗ ಅಂತಹವರಿಗೆ ಮನೆಯವರಿಂದ ಹಾಗೂ ಕುಟುಂಬದಿಂದ ಬೇಕಿರುವುದು ಮನೋಧೈರ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ದೇವರಾಜ್ ಎಚ್.ಎಂ. ಹೇಳಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ, ಬೆಳ್ತಂಗಡಿ ವಕೀಲರ ಸಂಘ ಬೆಳ್ತಂಗಡಿ, ಹಳೆಪೇಟೆ ಸರಕಾರಿ ಪ್ರೌಢ ಶಾಲೆ ಸಂಯುಕ್ತ ಆಶ್ರಯದಲ್ಲಿ ಡಿ.3 ರಂದು ಹಳೆಪೇಟೆ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಕಾನೂನು ಅರಿವು ಕಾರ್ಯಕ್ರಮ ಹಾಗೂ ತಾಲೂಕು ಮಟ್ಟದ ವಿಶೇಷ ಚೇತನ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ವಿಕಲಾಂಗರಿಗೆ ಕರುಣೆಗಿಂತ ಮಾನಸಿಕ ಧೈರ್ಯ ತುಂಬಿದಾಗ, ಅವರು ಸಮಾಜದಲ್ಲಿ ಉನ್ನತ ಹುದ್ದೆಗೇರಲು ಸಾಧ್ಯ. ಉತ್ತಮ ಮಾರ್ಗದರ್ಶನ ನೀಡಿದರೆ ಅವರ ಸಾಮರ್ಥ್ಯ ಮತ್ತಷ್ಟು ಉನ್ನತಮಟ್ಟಕ್ಜೇರುತ್ತದೆ. ಅದಕ್ಕೆ ನಮ್ಮೆಲ್ಲರ ಪಾತ್ರ ಮುಖ್ಯ ಎಂದು ಹೇಳಿದರು.
ತಾ.ಪಂ. ಇ.ಒ. ಕುಸುಮಾಧರ್ ಬಿ. ಮಾತನಾಡಿ, ಸಮುದಾಯ ಮೂಲವಾಗಿಸಿ ಅಂಗವಿಕಲರಿಗೆ ಸರಕಾರ ಅನೇಕ ಯೋಜನೆಗಳನ್ನು ನೀಡುತ್ತಾ ಬಂದಿದೆ. ಪ್ರಮುಖವಾಗಿ ಎಂಡೋಪೀಡಿತರಿಗೆ ಮಾಸಾಶನ ಒದಗಿಸಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಪ್ರತಿಯೊಬ್ಬ ವಿಶೇಷ ಚೇತನರಿಗೂ ಡಿಜಿಟಲ್ ಗುರುತಿನ ಚೀಟಿ ಒದಗಿಸಲಾಗುತ್ತಿದೆ ಎಂದು ಹೇಳಿದರು.
ಉಜಿರೆ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಕೆ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಕೆ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವಿಜಯೇಂದ್ರ ಟಿ.ಎಚ್., ವಕೀಲರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಎಸ್., ಪ್ರಧಾನ ಕಾರ್ಯದರ್ಶಿ ಶೈಲೇಶ್ ಆರ್.ಠೋಸರ್, ಅಕ್ಷರದಾಸೋಹ ಸಹಾಯಕ ನಿರ್ದೇಶಕಿ ತಾರಕೇಸರಿ, ಶಿಕ್ಷಣ ಸಮನ್ವಯಾಧಿಕಾರಿ ಶಂಭೂಶಂಕರ್, ಪ್ರಮುಖರಾದ ಕಿಶೋರ್, ರಮೇಶ್ ಮಯ್ಯ, ಹಿಲ್ಡಾ ರೋಡ್ರಿಗಸ್ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಶಿವಕುಮಾರ್ ಎಸ್.ಎಂ. ವಿಶ್ವ ವಿಶೇಷ ಚೇತನರ ದಿನಾಚರಣೆ ಕುರಿತು ಮಾತನಾಡಿದರು.
ಸರಿಕಾ ಪ್ರಾಸ್ತಾವಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್. ಸ್ವಾಗತಿಸಿದರು. ವಿಶೇಷ ಚೇತನರಾದ ಶಿವಯ್ಯ ಹಿರೇಮಠ ಹಾಡು ಹಾಡಿದರು. ಸೀತಾ ಆರ್.ಶೇಟ್ ಕಾರ್ಯಕ್ರಮ ನಿರೂಪಿಸಿದರು. ಚಂದ್ರಶೇಖರ ವಂದಿಸಿದರು.
ಜಾತಿ ಸಂಘಟನೆಗಲ್ಲ ಅಶಕ್ತರಿಗೆ ಸಿಗಲಿ ಸೌಲಭ್ಯ
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮ್ ದೇವರಾವ್ ರನ್ನು ಸಮ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ಸಿಗಬೇಕಾದ ಎಲ್ಲ ಸವಲತ್ತುಗಳು ಸಮಾಜದ ಹಿಂದುಳಿದ ಬಡವರ ಮನೆಗೆ ತಲುಪಬೇಕಿದೆ. ಜನಪ್ರತಿನಿಧಿಗಳು ಜಾತಿ ಸಂಘಟನೆಗಳಿಗೆ ನೀಡುವ ಒತ್ತಿಗಿಂತ ಹೆಚ್ಚು ಅಶಕ್ತರಿಗೆ ಸವಲತ್ತು ಸಿಗುವಲ್ಲಿ ಪ್ರಯತ್ನಿಸಬೇಕಾಗಿದೆ ಎಂದರು.