ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಎಳನೀರಿನ ಬಂಗಾರಪಲ್ಕೆ ಎಂಬಲ್ಲಿ ಕಿಂಡಿ ಅಣೆಕಟ್ಟಿನ ಸಮೀಪದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದಲ್ಲಿಗೆ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ವೇಳೆ ಟ್ಯಾಕ್ಟರ್ ಪಲ್ಟಿಯಾಗಿ ಗಂಭೀರ ಗಾಯಗೊಂಡ ಕಾರ್ಮಿಕ ಕಳಸ ಸಮುದಾಯ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆ ಬುಧವಾರ ಸಂಭವಿಸಿದೆ.
ಮೃತ ವ್ಯಕ್ತಿ ಚಿಕ್ಕಮಗಳೂರು ಮೂಲದ ಲೋಕೇಶ್ (32) ಎಂಬವರಾಗಿದ್ದಾರೆ . ಚಾಲಕ ದೀಪಕ್(31) ಹಾಗೂ ಇನ್ನೋರ್ವ ಕಾರ್ಮಿಕ ಫಕಿರೇಶ್(30) ಗ ಗಾಯಗೊಂಡಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಟ್ರ್ಯಾಕ್ಟರ್ ನಲ್ಲಿ ಕಬ್ಬಿಣದ ರಾಡುಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಅದರ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಲೋಕೇಶ್ ಅವರ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಟ್ಯಾಕ್ಟರ್ ಮಗುಚಿ ಬಿದ್ದು ಅದರಡಿ ಸಿಲುಕಿಕೊಂಡು ಗಂಭೀರ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು. ಟ್ರ್ಯಾಕ್ಟರ್ ಮಗುಚಿದ ರಭಸಕ್ಕೆ ಇಂಜಿನ್ ಟ್ರಾಲಿಯಿಂದ ಕಳಚಿಕೊಂಡು ಪಕ್ಕದ ತೋಟಕ್ಕೆ ಉರುಳಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ದುರ್ಗಮ ಸ್ಥಳ
ಕಾಮಗಾರಿ ನಡೆಯುವ ಸ್ಥಳದ ರಸ್ತೆ ಅಗಲ ಕಿರಿದಾಗಿದ್ದು, ಹೆಚ್ಚಿನ ಏರಿಳಿತಗಳಿಂದ ಕೂಡಿದೆ. ಸರಕು ಇದ್ದ ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿದೆ ಎಂದು ಹೇಳಲಾಗಿದೆ.
ಎಳನೀರು, ಬಂಗಾರ ಪಲ್ಕೆ ಮೊದಲಾದ ಸ್ಥಳಗಳು ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯಲ್ಲಿದ್ದರೂ ಚಿಕ್ಕಮಗಳೂರು ಜಿಲ್ಲೆಗೆ ತೀರಾ ಸಮೀಪ ಇವೆ.
ಇಲ್ಲಿನ ಕಾಮಗಾರಿಗಳಿಗೆ ಚಿಕ್ಕಮಗಳೂರು ಭಾಗದಿಂದ ಲಾರಿಗಳಲ್ಲಿ ಸಾಮಾಗ್ರಿಗಳನ್ನು ಸಂಸೆಗೆ ತರಿಸಿ ಬಳಿಕ ಅಲ್ಲಿಂದ ಅಗಲ ಕಿರಿದಾದ ರಸ್ತೆಗಳಲ್ಲಿ ಕಾಮಗಾರಿ ನಡೆಯುವ ಸ್ಥಳಕ್ಕೆ ಟ್ರಾಕ್ಟರ್ ಮೂಲಕ ಸಾಗಿಸಲಾಗುತ್ತದೆ.ಇಲ್ಲಿನ ಸ್ಥಳಗಳು ದುರ್ಗಮವಾಗಿದ್ದು, ಸರಿಯಾದ ಮೊಬೈಲ್ ಸಂಪರ್ಕ ಕೂಡ ಲಭ್ಯ ಇರುವುದಿಲ್ಲ.
ಕಳೆದ ಎರಡು ದಿನಗಳ ಹಿಂದೆ ಚಾರ್ಮಾಡಿ ಘಾಟಿಯ ಬಿದಿರುತಳ ಸಮೀಪ ರಸ್ತೆ ಕಾಮಗಾರಿಗೆ ನೀರು ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಓರ್ವ ಕಾರ್ಮಿಕ ಮೃತಪಟ್ಟಿದ್ದ.