ಮಂಗಳೂರು: ಜೀವನದಲ್ಲಿ ಧೈರ್ಯ ಆತ್ಮವಿಶ್ವಾಸದ ಜೊತೆಗೆ ಹೊಸತನಗಳಿಗೆ ಮುನ್ನುಗ್ಗುವ ಮನೋಭಾವ ಬೆಳೆಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ವೃತ್ತಿಜೀವನದಲ್ಲಿ ಇಂದಿನ ಯಶಸ್ಸಿಗೆ ಬಾಲ್ಯದ ದಿನಗಳಲ್ಲಿ ಕಲಿತ ಕೆನರಾ ಶಿಕ್ಷಣ ಸಂಸ್ಥೆಗಳು ನೀಡಿದ ಜೀವನಾನುಭವ ಕಲಿಕೆಯ ಜೊತೆಗೆ ಗಳಿಕೆ ಮೌಲ್ಯಗಳು ಕಾರಣ ಎಂದು ಸೆಂಚುರಿ ಗ್ರೂಪ್ ಅಧ್ಯಕ್ಷ, ಆಡಳಿತ ನಿರ್ದೇಶಕ ಡಾ.ಪಿ.ದಯಾನಂದ ಪೈ ಹೇಳಿದರು.
ಅವರು ಶನಿವಾರ ಸಂಜೆ ಬೆಂಜನಪದವು ಇಂಜಿನಿಯರಿಂಗ್ ಕಾಲೇಜಿನಲ್ಲಿ ನವೀಕೃತ ಅಕಾಡೆಮಿಕ್ ಬ್ಲಾಕ್ ಉದ್ಘಾಟಿಸಿ ಮಾತನಾಡಿದರು. ನಾನು ಕೆನರಾ ಕುಟುಂಬದವನು ಎನ್ನುವುದಕ್ಕೆ ಅಭಿಮಾನ ಮಾತ್ರವಲ್ಲ ಹೆಮ್ಮೆ ಇದೆ ಎಂದ ಅವರು ಕೆನರಾ ಶಿಕ್ಷಣಸಂಸ್ಥೆಗಳು ಬೆಳವಣಿಗೆಯ ವೇಗ ವೃದ್ಧಿಸಿಕೊಳ್ಳಬೇಕು ಶಿಕ್ಷಕರ ಸಹಕಾರಿ ಸೇರಿದಂತೆ ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯಬೇಕು ಎಂದರು. ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಎರಡು ಕೋಟಿ ರೂಪಾಯಿಗಳ ದೇಣಿಗೆಯನ್ನು ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು.
ಉನ್ನತ ಶಿಕ್ಷಣ ಸಂಸ್ಥೆ ಎಂಬಲ್ಲಿ ಬೋಧನೆ ಹಾಗೂ ಕಲಿಕೆಯ ಸಂತಸದ ಸ್ವಯಂ ಶಿಸ್ತಿನ ವಾತಾವರಣ ಇರಬೇಕು ಪದವೀಧರರಾದ ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಯಾವ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ ಎನ್ನುವುದೇ ಶಿಕ್ಷಣ ಸಂಸ್ಥೆಯ ಮಾನದಂಡವಾಗುತ್ತದೆ ಕಲಿಕೆ ಹೆಸರಿನಲ್ಲಿ ಜ್ಞಾನ ತೋರಿಸುವುದಕ್ಕೆ ಸೀಮಿತವಾಗದೆ ಸಂತಸದ ಕಲಿಕೆಗೆ ಆದ್ಯತೆ ನೀಡಬೇಕು ಎಂದು ಮಣಿಪಾಲ ಗ್ಲೋಬಲ್ ಎಜುಕೇಶನ್ ಚೇರ್ಮನ್ ಟಿ.ವಿ. ಮೋಹನದಾಸ್ ಪೈ ಹೇಳಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿದ್ದ ಅವರು ಉನ್ನತ ಗುರಿ ಕನಸಿನ ಜೊತೆಗೆ ಉನ್ನತ ಸಾಧನೆಗೆ ಮುಂದಾಗಬೇಕು. ಬದುಕಿನಲ್ಲಿ ಕುತೂಹಲವನ್ನು ಕಾಯ್ದುಕೊಂಡು ಜೀವನದ ಸವಾಲಿಗೆ ಉತ್ತರವನ್ನು ಕಂಡುಕೊಳ್ಳಬೇಕು ಎಂದರು.
ಒ.ಎನ್.ಜಿ.ಸಿ. ಸಮೂಹ ಸಂಸ್ಥೆಗಳ ಅಧ್ಯಕ್ಷ, ಆಡಳಿತ ನಿರ್ದೇಶಕ ರಾಜೇಶ್ ಕುಮಾರ್ ಶ್ರೀವಾಸ್ತವ ಅವರು ಆನ್ಲೈನ್ ಸಂದೇಶದ ಮೂಲಕ ಶುಭ ಕೋರಿದರು.
ಕೆನರಾ ಹೈಸ್ಕೂಲ್ ಎಸೋಸಿಯೇಶನ್ ಅಧ್ಯಕ್ಷ ಡಿ.ವಾಸುದೇವ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಪದ್ಮನಾಭ ಪೈ, ಗೌರವ ಕಾರ್ಯದರ್ಶಿ ಎಂ. ರಂಗನಾಥ್ ಭಟ್ , ಹಾಂಗ್ಯೋ ಐಸ್ ಕ್ರೀಂ ನ ಆಡಳಿತ ನಿರ್ದೇಶಕ ಪ್ರದೀಪ್ ಜಿ.ಪೈ, ಶ್ರೀಮತಿ ಮೋಹಿನಿ ಡಿ.ಪೈ,ಆಡಳಿತ ಮಂಡಳಿ ಹಾಗೂ ಆಡಳಿತ ಕೌನ್ಸಿಲ್ ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಡಾ.ಗಣೇಶ್ ವಿ.ಭಟ್ ಮತ್ತಿತರರು ಉಪಸ್ಥಿತರಿದ್ದರು.
ಕೆನರಾ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಪ್ರೊ.ಡಾ. ರಾಧಾಕೃಷ್ಣ ಎಸ್. ಐತಾಳ್ ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಅನುಗುಣವಾಗಿ ಸಂಸ್ಥೆಯ ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳ ಮುನ್ನೋಟದ ಕುರಿತು ವಿವರಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಡೀನ್ ಡಾ. ಪ್ರಿಯಾ ವಿ. ಫ್ರ್ಯಾಂಕ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.