ಮಂಗಳೂರು, ಡಿ.14: ಆರೋಗ್ಯವಂತ ದೇಹದಿಂದ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು ಸುಸ್ಥಿರ ಅಭಿವೃದ್ಧಿಗೆ ಆರೋಗ್ಯವಂತ ಸಮಾಜ ಅತೀ ಮುಖ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ತಿಳಿಸಿದರು.
ಅವರು ಡಿ.14ರ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಸೂಟರ್ಪೇಟೆಯ 6ನೇ ಅಡ್ಡ ರಸ್ತೆಯಲ್ಲಿರುವ ಸಮಾಜ ಭವನದಲ್ಲಿ ನಮ್ಮ ಕ್ಲಿನಿಕ್ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಧೃಢ ದೇಹ, ಆರೋಗ್ಯಕರ ಮನಸ್ಸಿದ್ದರೆ ಅದು ಅಭಿವೃದ್ಧಿಗೆ ಪೂರಕ, ಆರೋಗ್ಯವಂತ ಸಮಜದಿಂದ ಆರೋಗ್ಯಕರ ದೇಶ ಸಾಧ್ಯ, ಆರೋಗ್ಯದ ಬಲವರ್ಧನೆಗೆ, ಅಂಗೈಯಲ್ಲಿಯೇ, ಮನೆ ಬಾಗಿಲಲ್ಲಿಯೇ ಆರೋಗ್ಯ ಸೇವೆ ಒದಗಿಸಿಕೊಡುವ ನಿಟ್ಟಿನಲ್ಲಿ ಸರ್ಕಾರದಿಂದ ಈ ರೀತಿಯ ಕ್ರಮವಹಿಸಲಾಗಿದೆ, ರೋಗದಿಂದ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳು ಅಸಾಧ್ಯ, ಬಡವರ, ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯು ಸೇವೆಗಳನ್ನು ನಿರಂತರವಾಗಿ ನೀಡಲು ರಾಜ್ಯದ 114 ನಮ್ಮ ಕ್ಲಿನಿಕ್ಗಳಿಗೆ ಇಂದು ಮುಖ್ಯಮಂತ್ರಿಯವರು ಏಕಕಾಲಕ್ಕೆ ಲೋಕಾರ್ಪಣೆ ಮಾಡಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಕ್ಲಿನಿಕ್ಗಳನ್ನು ಲೋಕಾರ್ಪಣೆ ಮಾಡಲಾಗಿದೆ ಇದರಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದರು.
ರಾಷ್ಟ್ರೀಯ ಆರೋಗ್ಯ ಮಿಷನ್ ಯೋಜನೆಯಡಿ ಕಳೆದ ಒಂದೂವರೆ ವರ್ಷದಲ್ಲಿ ಉಪಕೇಂದ್ರಗಳಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳು ನೇಕವಾಗಿದ್ದು, ಅವರು ಮನೆ ಬಾಗಿಲಿಗೆ ಹೋಗಿ ಆರೋಗ್ಯ ಪರಿಶೀಲಿಸುತ್ತಿದ್ದಾರೆ, ಜಿಲ್ಲೆಯಲ್ಲಿ ಒಟ್ಟು 368 ಸಮುದಾಯ ಆರೋಗ್ಯ ಅಧಿಕಾರಿಗಳ ನೇಮಕವಾಗಿದ್ದು, ನಗರ ಪ್ರದೇಶಗಳಲ್ಲಿ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೇಯರ್ ಜಯಾನಂದ ಅಂಚನ್ ಅವರು ನಮ್ಮ ಕ್ಲಿನಿಕ್ನಲ್ಲಿ ಗರ್ಭಿಣಿಯರ ಆರೈಕೆ, ಬಾಣಂತಿ ಸೇವೆ, ನವಜಾತ ಶಿಶು ಆರೈಕೆ, ಚುಚ್ಚುಮದ್ದು ಸೇವೆ, ಮಕ್ಕಳ ಹಾಗೂ ಅದಿ ಹರಿಯದವರಿಗೆ ನೀಡುವ ಆರೋಗ್ಯ ಸೇವೆಗಳು, ಕುಟುಂಬ ಕಲ್ಯಾಣ ಯೋಜನೆಗಳ ಅನುಷ್ಠಾನ, ಎಲ್ಲಾ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಅಸಂಕ್ರಾಮಿಕ ರೋಗಗಳ ನಿರ್ವಹಣೆ, ಹಿರಿಯ ನಾಗರಿಕರ ಹಾರೈಕೆ ಹಾಗೂ ಉಪಶಾಮಕ ಹಾರೈಕೆ, ಕಣ್ಣಿನ ಆರೋಗ್ಯ ಸೇವೆಯ ಅನುಷ್ಠಾನ ದಂತ ಆರೋಗ್ಯ ಸೇವೆಗಳ ಅನುಷ್ಠಾನ, ತುರ್ತು ವೈದ್ಯಕೀಯ ಸೇವೆಗಳನ್ನು ನೀಡುವುದು, ಮಾನಸಿಕ ಆರೋಗ್ಯ ಸೇವೆಗಳು ಇದಲ್ಲದೆ ನಿರ್ದಿಷ್ಟ ರೋಗ ನಿರ್ಣಯ ಸೇವೆಗಳನ್ನು ನೀಡಲಾಗುವುದು ಇದರ ಸದುಪಯೋಗ ಪಡೆಯುವಂತೆ ಸೂಚಿಸಿದರು.
ಮಂಗಳೂರು ಉಪಮೇಯರ್ ಪೂರ್ಣಿಮಾ, ಮುಖ್ಯ ಸಚೇತಕರಾದ ಪ್ರೇಮಾನಂದ ಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಸ್ಥಳೀಯ ಕಾರ್ಪೋರೇಟರ್ ಭರತ್ ಕುಮಾರ್ ಹಾಗೂ ಮಾಜಿ ಸಚೇತಕರಾದ ಸುಧೀರ್ ಶೆಟ್ಟಿ ಮಾತನಾಡಿದರು.
ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ತಾಲೂಕು ಆರೋಗ್ಯಾಧಾರಿ ಡಾ. ಸುಜಯ್, ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಭಾಗವಹಿಸಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ. ಉಳೆಪಾಡಿ ಸ್ವಾಗತಿಸಿ, ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ನಮ್ಮ ಕ್ಲಿನಿಕ್ ಅನ್ನು ಲೋಕಾರ್ಪಣೆ ಮಾಡಿದರು.