ಮಂಗಳೂರು: ಅದಾನಿ ಫೌಂಡೇಶನ್ ಫಾರ್ಚೂನ್ ಸುಪೋಶನ್ ಯೋಜನೆ ಮೂಲಕ ಮಕ್ಕಳ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆಯಡಿ ಉತ್ತಮ ಕಾರ್ಯ ಹಮ್ಮಿಕೊಂಡಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಶ್ಲಾಘಿಸಿದರು.
ಜಿಲ್ಲಾ ಪಂಚಾಯಿತಿ ನೇತ್ರಾವತಿ ಸಭಾಂಗಣದಲ್ಲಿ ಮಂಗಳವಾರ ಅದಾನಿ ಫೌಂಡೇಶನ್ನಿಂದ ಫಾರ್ಚೂನ್ ಸುಪೋಶನ್ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಐದು ವರ್ಷದೊಳಗಿನ ಮಕ್ಕಳು ಮಾತ್ರವಲ್ಲದೆ ಹದಿ ಹರೆಯದ ಬಾಲಕಿಯರು ಹಾಗೂ ಗರ್ಭಿಣಿ ಮಹಿಳೆಯರ ಪೌಷ್ಠಿಕಾಂಶದ ಸಮಸ್ಯೆಯನ್ನು ಸುಧಾರಿಸಲು ಈ ಯೋಜನೆ ಮೂಲಕ ಸಾಧ್ಯವಾಗಲಿದೆ. ಸರ್ಕಾರದ ಯೋಜನೆಗಳ ಜತೆ ಖಾಸಗಿ ಸಂಸ್ಥೆಗಳು ತಮ್ಮ ಹೊಣೆಗಾರಿಕೆ ಅರಿತು ಇಂತಹ ಸಾಮಾಜಿಕ ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಅವಶ್ಯ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಾಪಬೋವಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್, ಗ್ರಾಮಾಂತರ ಸಿಡಿಪಿಒ ಶೈಲಾ ಕಾರಗಿ ಅತಿಥಿಗಳಾಗಿದ್ದರು.
ಅದಾನಿ ಫೌಂಡೇಶನ್ನ ಪ್ರಾಜೆಕ್ಟ್ ಮ್ಯಾನೇಜರ್ ವಿವೇಕ್ ಯಾದವ್ ಮಾತನಾಡಿ, ಪ್ರಸ್ತುತ ಪ್ರಾಜೆಕ್ಟ್ ಫಾರ್ಚೂನ್ ಸುಪೋಶನ್ ಭಾರತದ 12 ರಾಜ್ಯಗಳಾದ್ಯಂತ 1200 ಕ್ಕೂ ಹೆಚ್ಚು ಹಳ್ಳಿಗಳು, ಸ್ಲಮ್ಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯ ವಿಸ್ತರಣೆಯ ಭಾಗವಾಗಿ, ನಾವು ನಾಲ್ಕು ವರ್ಷಗಳ ಅವಧಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರ ಬ್ಲಾಕ್ನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ನಮ್ಮ ಸುಪೋಶನ್ ಅಧಿಕಾರಿಯ ಸಹಾಯದಿಂದ ನಾವು ಜಿಲ್ಲಾ ಮತ್ತು ಬ್ಲಾಕ್ ಮಟ್ಟದ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸುಪೋಶನ್ ಯೋಜನೆಯ ಕುರಿತು ಚರ್ಚೆ ನಡೆಸಿ, ಕಾರ್ಯೋನ್ಮುಖವಾಗಿದ್ದೇವೆ ಎಂದರು.
ಯುನಿಟ್ ಹೆಡ್ ಮನೋಜ್ ಶ್ರೀವಾಸ್ತವ, ಪ್ಲಾೃಂಟ್ ಎಚ್ಆರ್ ಆ್ಯಂಡ್ ಎಡ್ಮಿನ್ ಶಾಂತ ಕುಮಾರ್ ಟಿ.ಎಂ. ಉಪಸ್ಥಿತರಿದ್ದರು. ಪ್ರೇಮಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.