ಉಳ್ಳಾಲ: ಬಯೋಮಾರ್ಕರ್ ಮಾಪನಗಳು ಆಂಕೋಲಾಜಿ ಔಷಧ ಅಭಿವೃದ್ಧಿಯ ಅತ್ಯಗತ್ಯ ಅಂಶವಾಗಿದ್ದು, ಉದ್ದೇಶಿತ ಚಿಕಿತ್ಸೆಗಳ ಈ ಯುಗದಲ್ಲಿ ಅಂತಹ ಮಾಪನಗಳು ಕ್ಲಿನಿಕಲ್ ಅಧ್ಯಯನಗಳು ನಮ್ಮ ಜೈವಿಕ ಊಹೆಗಳನ್ನು ಪರೀಕ್ಷಿಸುತ್ತಿದೆ ಮತ್ತು ಯಾವ ಔಷ„ಗಳ ಅಭಿವೃದ್ಧಿಯನ್ನು ನಿಲ್ಲಿಸಬೇಕು ಅಥವಾ ಆದ್ಯತೆಯನ್ನು ರದ್ದುಗೊಳಿಸಬೇಕು ಎಂಬುದನ್ನು ಆಯ್ಕೆ ಮಾಡಲು ಕಷ್ಟಕರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಡಾ| ಗೋವಿಂದ ಬಾಬು ಕೆ. ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ತಜ್ಞ ವೈದ್ಯರ ಸಂಘದ ಮಂಗಳೂರು ಘಟಕದ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯುವ ಮಂಗಳೂರು ತಜ್ಞ ವೈದ್ಯರ ಸಮಾವೇಶ ಮತ್ತು ಡಾ| ಅಮರನಾಥ ಹೆಗ್ಡೆ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಆಂಕೊಲಾಜಿಯಲ್ಲಿ ಬಯೋಮಾರ್ಕರ್‍ಗಳ ಪ್ರಭಾವ’ದತ್ತಿ ಉಪನ್ಯಾಸ ನೀಡಿದರು.
ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾ„ಪತಿ ಡಾ| ಶಾಂತಾರಾಮ ಶೆಟ್ಟಿ ಇವರು ಡಾ| ಕೆ. ಪಿ. ಗಣೇಶ್ ಸ್ಮಾರಕ ದತ್ತಿ ಉಪನ್ಯಾಸ ನೀಡಿದರು. ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿಯವರು ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಕೆ. ಎಸ್. ಹೆಗ್ಡೆ ವೈದ್ಯಕೀಯ ವಿದ್ಯಾಲಯದ ಡೀನ್ ಡಾ| ಪಿ. ಎಸ್. ಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಜ್ಞ ವೈದ್ಯರ ಸಂಘದ ಮಂಗಳೂರು ಘಟಕದ ಪದಾ„ಕಾರಿಗಳು ಹಾಗೂ ಕೆ. ಎಸ್ .ಹೆಗ್ಡೆ ಮೆಡಿಕಲ್ ಅಕಾಡೆಮಿ (ಕ್ಷೇಮ) ವೈದ್ಯಕೀಯ ವಿಭಾಗದ ತಜ್ಞರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಮಾವೇಶದಲ್ಲಿ ಭಾಗವಹಿಸಿದ್ದು, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ತಜ್ಞ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಭಂದಗಳನ್ನು ಮಂಡಿಸಿ ವಿಚಾರ ವಿನಿಮಯ ನಡೆಸಿದರು.
ತಜ್ಞ ವೈದ್ಯರ ಸಂಘದ ಮಂಗಳೂರು ಘಟಕದ ಅಧ್ಯಕ್ಷ ಡಾ| ಸುರೇಶ್ ಜಿ. ಸ್ವಾಗತಿಸಿದರು. ಕಾರ್ಯದರ್ಶಿ ಡಾ| ಶ್ಯಾಂ ಪ್ರಕಾಶ್ ಅವರು ಡಾ| ಕೆ.ಪಿ. ಗಣೇಶನ್ ಅವರ ವ್ಯಕ್ತಿಪರಿಚಯ ಮಾಡಿದರು. ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ| ಸುದೀಂದ್ರ ಡಾ| ಅಮರಾನಥ್ ಹೆಗ್ಡೆ ಅವರ ವ್ಯಕ್ತಿಪರಿಚಯ ಮಾಡಿದರು. ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ನಿಕಟ ಪೂರ್ವ ಡೀನ್ ಡಾ| ಜೆ.ಪಿ. ಆಳ್ವ ಇವರು ಡಾ. ವಿವಿ ಮೋದಿ ಸ್ಮಾರಕ ದತ್ತಿ ಉಪನ್ಯಾಸವನ್ನು ಶನಿವಾರ ನೀಡಲಿದ್ದಾರೆ.
ಸಮಾವೇಶ ಆಯೋಜನಾ ಸಮಿತಿಯ ಕಾರ್ಯದರ್ಶಿ ಡಾ| ಸುದೀಪ್ ವಂದಿಸಿದರು. ಡಾ| ಅದಿತಿ ಕಾರ್ಯಕ್ರಮ ನಿರ್ವಹಿಸಿದರು.