ಮಂಗಳೂರು,ಡಿ.17: ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ವಾರ್ಷಿಕೋತ್ಸವವನ್ನು ದೀಪ ಬೆಳಗಿಸುವುದರ ಮೂಲಕ ಎಕ್ಸ್ಲೆಂಟ್ ಪಪೂ ಕಾಲೇಜಿನ ಅಧ್ಯಕ್ಷರಾದ ಯುವರಾಜ್ ಜೈನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಮಕ್ಕಳ ಪೋಷಕರು ಮಕ್ಕಳು ಬಾಲ್ಯದಲ್ಲಿ ತಪ್ಪು ಮಾಡಿದಾಗ ಅವರನ್ನು ತಿದ್ದಿ ಸರಿಪಡಿಸಬೇಕು. ಒಂದು ವೇಳೆ ಅವನು ಅದರಲ್ಲಿ ಸರಿಯಾಗದಿದ್ದಾಗ ಮುಂದೆ ಶಿಕ್ಷಕರು ಆ ವಿದ್ಯಾರ್ಥಿಯ ತಪ್ಪನ್ನು ತಿದ್ದುವ ಗುಣವನ್ನು ಹೊಂದಬೇಕು. ಇಲ್ಲವಾದಲ್ಲಿ ಅವನ ವಿದ್ಯಾಭ್ಯಾಸದ ನಂತರ ಸಮಾಜದಲ್ಲಿ ಸರಿಯಾಗಲು ಸಾಧ್ಯವಿಲ್ಲ. ಇದನ್ನು ಸರಿಪಡಿಸಲು ಪೋಷಕರು ಶಾಲೆಯ ಶಿಕ್ಷಕರ ಜೊತೆ ನಿಲ್ಲಬೇಕೆಂದು ಕರೆ ನೀಡಿದರು.
ನಾವು ಶಾಲೆಯಲ್ಲಿ ವಿದ್ಯಾರ್ಥಿಗೆ ಓದುವ ಜೊತೆಗೆ ಇತರೆ ಪಠ್ಯೇತರ ಚಟುವಟಿಕೆಯ ಮಾರ್ಗದರ್ಶನ ನೀಡಬೇಕೆಂದರು. ದೇಶದ ಪ್ರಗತಿಯ ಬಗ್ಗೆ ಯೋಚನೆ ಮಾಡುವ ಗುಣವನ್ನು ಹೊಂದುವಂತೆ ಮಾಡುವ ಕರ್ತವ್ಯ ಶಾಲೆಯದಾಗಬೇಕು. ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ಸಂಸ್ಕಾರವನ್ನು ಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಸಂಜೀತ್ ನಾಯ್ಕ್ ಮಾತನಾಡಿ ಶಕ್ತಿ ವಿದ್ಯಾ ಸಂಸ್ಥೆಯು ವಿದ್ಯಾರ್ಥಿಗಳನ್ನು ಶಿಕ್ಷಣ, ಸಂಸ್ಕಾರ, ಸೇವಾ ಮನೋಭಾವನೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಮಂಚೂಣಿಯಲ್ಲಿ ತರುವ ಪ್ರಯತ್ನವನ್ನು ಮಾಡುತ್ತಿದೆ. ಇದರ ಪರಿಣಾಮವಾಗಿ ಇಂದು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ ನಾಯ್ಕ್ , ಪ್ರಧಾನ ಸಲಹೆಗಾರ ರಮೇಶ ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕಿ ನಝ್ರೀನ್ ಇವರು, ವರದಿ ವಾಚನವನ್ನು ಸಂಸ್ಥೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಧನ್ಯವಾದವನ್ನು ಶಕ್ತಿ ಪ ಪೂ ಕಾಲೇಜು ಪ್ರಾಂಶುಪಾಲರಾದ ಪೃಥ್ವಿರಾಜ್ ಹಾಗೂ ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕಿ ಚೈತ್ರ ಯು ಭಂಡಾರಿ ಇವರು ನೆರವೇರಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನಾ ಕಾರ್ಯಕ್ರಮ ನೆರವೇರಿತು.