ಬೆಳ್ತಂಗಡಿ: ಚಿಬಿದ್ರೆ ಹಾಗೂ ತೋಟತ್ತಾಡಿ ಗ್ರಾಮಗಳಲ್ಲಿ ಅರಣ್ಯ ಇಲಾಖೆ ವತಿಯಿಂದ ನಡೆದಿದ್ದ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯನ್ನು ಸೋಮವಾರ ಸಂಜೆ ಮುಕ್ತಾಯಗೊಳಿಸಲಾಗಿದೆ.
ಕಾರ್ಯಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಸಮೀಪದ ಮುಂಡಾಜೆ ಗ್ರಾಮದಲ್ಲಿ ಸೋಮವಾರ ರಾತ್ರಿ ಕಾಡಾನೆ ಕೃಷಿ ತೋಟಗಳಲ್ಲಿ ವಿಪರೀತ ದಾಂಧಲೆ ನಡೆಸಿದೆ.
ಚಿಬಿದ್ರೆ ಹಾಗೂ ತೋಟತ್ತಾಡಿ ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಒಂಟಿ ಸಲಗದ ಕಾಟ ವಿಪರೀತವಾಗಿತ್ತು. ಗ್ರಾಮಗಳ ಹಲೆವೆಡೆ ರಾತ್ರಿ ಸಮಯ ತೋಟಗಳಿಗೆ ನುಗ್ಗುತ್ತಿದ್ದ ಒಂಟಿ ಸಲಗ ಹೆಚ್ಚಿನ ಕೃಷಿ ಹಾನಿಗೆ ಕಾರಣವಾಗಿತ್ತು.
ಕಾಡಾನೆ ಕಾಟ ತಪ್ಪಿಸಲು ಅರಣ್ಯ ಇಲಾಖೆ ಕಳೆದ ಹತ್ತು ದಿನಗಳಿಂದ ಕಾಡನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿತ್ತು. ಎರಡು ಪಾಳಿಗಳ ಮೂಲಕ ಇದನ್ನು ನಡೆಸಲಾಗುತ್ತಿತ್ತು. ಕಳೆದ ಐದು ದಿನಗಳ ಹಿಂದೆ ನಾಗರಹೊಳೆಯಿಂದ ನುರಿತ ಆನೆಕಾವಾಡಿಗರು ಆಗಮಿಸಿ ಕಾರ್ಯಾಚರಣೆಗೆ ಬಲ ತುಂಬಿದ್ದರು. ಕಾರ್ಯಾಚರಣೆಯ ಮೊದಲ ಹಲವು ದಿನಗಳಲ್ಲಿ ತಂಡಕ್ಕೆ ಒಂಟಿ ಸಲಗ ಸತತವಾಗಿ ಕಂಡುಬಂದಿತ್ತು. ಒಂದು ಬಾರಿ ಕಾರ್ಯಾಚರಣೆ ನಡೆಸುವ ಸಂದರ್ಭ ಕಾಡಿನಲ್ಲಿ ಕಂಡುಬಂದಿದ್ದ ಕಾಡಾನೆ ಕಾರ್ಯಾಚರಣೆ ತಂಡದ ಮೇಲೆ ದಾಳಿ ನಡೆಸಲು ಪ್ರಯತ್ನ ಪಟ್ಟಿತ್ತು.
ಆದರೆ ಕಾರ್ಯಾಚರಣೆ ಬಿಗಿಗೊಳ್ಳುತ್ತಿದ್ದಂತೆ ಬಳಿಕ ಕಾಡಾನೆ ನಾಲ್ಕು ದಿನಗಳಿಂದ ಕಂಡುಬರದ ಕಾರಣ ಕಾರ್ಯಾಚರಣೆಯನ್ನು ಸೋಮವಾರ ಸಂಜೆಗೆ ಮುಕ್ತಾಯಗೊಳಿಸಲಾಗಿತ್ತು.
ಒಂಟಿ ಸಲಗ
ರಾಷ್ಟ್ರೀಯ ಹೆದ್ದಾರಿ ಹಾಗೂ ಮೃತ್ಯುಂಜಯ ನದಿಯನ್ನು ದಾಟಿ ಇನ್ನೊಂದು ಪ್ರದೇಶದ ಕಾಡಿನ ಹೋಗಿರುವ ಕುರುಹುಗಳು ಕಂಡುಬಂದಿತ್ತು. ಆದರೆ ಬಳಿಕ ಈ ಪ್ರದೇಶದಲ್ಲೂ ಕಾಡಾನೆ ಪತ್ತೆಯಾಗಿರಲಿಲ್ಲ.
ಮತ್ತೆ ಕಾರ್ಯಾಚರಣೆ
ಕಾಡಾನೆ ಕಂಡು ಬರದಿದ್ದರೂ ಶನಿವಾರದಿಂದ ಸೋಮವಾರ ಸಂಜೆ ತನಕ ಗ್ರಾಮಗಳ ನಾನಾ ಸ್ಥಳಗಳಲ್ಲಿ ತಂಡವು ಕಾರ್ಯಾಚರಣೆ ಮುಂದುವರಿಸಿತ್ತು.ಆದರೆ ಆನೆಯ ಸುಳಿವು ಪತ್ತೆಯಾಗಿರಲಿಲ್ಲ.
ಈ ವೇಳೆ ಆನೆಕಾವಾಡಿಗ ವೆಂಕಟೇಶ್ ಅವರು ಆನೆ ತಂಡದ ಮೇಲೆ ದಾಳಿ ನಡೆಸಲು ಸಜ್ಜಾದ ಸಂದರ್ಭ ಕಳೆದುಕೊಂಡಿದ್ದ ನಗದು,ಎಟಿಎಂ ಕಾರ್ಡ್ ಇದ್ದ ಪರ್ಸ್ ಸಿಕ್ಕಿತ್ತು. 5ದಿನಗಳಿಂದ ಮಳೆಯೂ ಇಲ್ಲದ ಕಾರಣ ಕಾರ್ಯಾಚರಣೆಗೆ ಹೆಚ್ಚಿನ ವೇಗ ಸಿಕ್ಕಿತ್ತು.
ಡಿ ಎಫ್ ಒ ಡಾ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಆರ್ ಎಫ್ ಒ ತ್ಯಾಗರಾಜ್ ನಿರ್ದೇಶನದಲ್ಲಿ ಡಿಆರ್ ಎಫ್ ಒಗಳಾದ ಭವಾನಿ ಶಂಕರ, ರವೀಂದ್ರ ಅಂಕಲಗಿ, ಯತೀಂದ್ರ, ಹರಿಪ್ರಸಾದ್, ಗಸ್ತು ಅರಣ್ಯ ರಕ್ಷಕರಾದ ಪಾಂಡುರಂಗ ಕಮತಿ, ಸಂತೋಷ್, ಶರತ್ ಶೆಟ್ಟಿ, ರವಿ,ಬಾಲಕೃಷ್ಣ, ವಾಸು ಇವರೊಂದಿಗೆ ನಾಗರಹೊಳೆ ಆನೆ ಕಾವಾಡಿಗರಾದ ವೆಂಕಟೇಶ, ಓಂಕಾರ್, ಗಣೇಶ, ವಿಶ್ವ ಹಾಗೂ ಸ್ಥಳೀಯ ಅನೇಕರು ಭಾಗವಹಿಸಿದ್ದರು.
ಸುಳ್ಯ ಅರಣ್ಯ ಉಪ ವಿಭಾಗದ ಸುಬ್ರಹ್ಮಣ್ಯ ವಲಯದಲ್ಲಿ ಕಾಡಾನೆಗಳ ಕಾಟ ಹೆಚ್ಚಿದ್ದು ನಾಗರಹೊಳೆಯ ನುರಿತ ಆನೆಕಾವಾಡಿಗರ ತಂಡ ಸೋಮವಾರ ಸಂಜೆ ಸುಬ್ರಮಣ್ಯಕ್ಕೆ ಪಯಣಿಸಿದೆ.
ಮುಂಡಾಜೆಯಲ್ಲಿ ದಾಳಿ
ಆನೆ ಕಾರ್ಯಾಚರಣೆ ಮುಕ್ತಾಯಗೊಳ್ಳುತ್ತಿದ್ದಂತೆ ಸೋಮವಾರ ರಾತ್ರಿ ಒಂಟಿ ಸಲಗ ಮುಂಡಾಜೆ ಗ್ರಾಮದ ದುಂಬೆಟ್ಟು ಪರಿಸರದಲ್ಲಿ ಭಾರಿ ಧಾಂಧಲೆ ನಡೆಸಿದೆ.
ಇಲ್ಲಿನ ಕಜೆ ವೆಂಕಟೇಶ್ವರ ಭಟ್ ಅವರ ತೋಟದ 50 ಅಡಕೆ ಗಿಡ, ಅಪಾರ ಪ್ರಮಾಣದ ಬಾಳೆಗಿಡ, ನೀರಾವರಿ ಸ್ಪ್ರಿಂಕ್ಲರ್ ಪೈಪ್ ಲೈನ್ ನಿರ್ಮಲಾ ಭಿಡೆಯವರ 5 ಅಡಕೆ ಗಿಡ,ಬಾಳೆ ಗಿಡ, ನೀರಾವರಿ ಸ್ಪ್ರಿಂಕ್ಲರ್, ಪೈಪ್ ಲೈನ್, ಸಚಿನ್ ಭಿಡೆಯವರ ಕಾರ್ಗಿಲ್ ವನದ ಬೇಲಿ,ಗಿಡ ಗಳಿಗೆ, ತೋಟದ ಅಡಕೆ ಗಿಡ, ಬಾಳೆ ಕೃಷಿಗೆ ಭಾರಿ ಪ್ರಮಾಣದಲ್ಲಿ ಹಾನಿ ಉಂಟು ಮಾಡಿದೆ. ಡಿ ಆರ್ ಎಫ್ ಒ ಹರಿಪ್ರಸಾದ್ ಹಾಗೂ ಸಿಬ್ಬಂದಿ ತೋಟಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
“ಮುಂಡಾಜೆ ಪ್ರದೇಶದಲ್ಲಿ ಕಾಡಾನೆ ಹಾವಳಿ ನಡೆಸಿರುವ ಕುರಿತು ಮಾಹಿತಿ ಪಡೆಯಲಾಗಿದೆ. ಅಗತ್ಯವಿದ್ದರೆ ಸುಬ್ರಮಣ್ಯಕ್ಕೆ ತೆರಳಿರುವ ಆನೆಕಾವಾಡಿಗರನ್ನು ವಾಪಾಸು ಕರೆಸಿ ಕಾರ್ಯಾಚರಣೆ ಮುಂದುವರಿಸಲಾಗುವುದು.”- ತ್ಯಾಗರಾಜ್, ಆರ್ ಎಫ್ ಒ, ಅರಣ್ಯ ಇಲಾಖೆ ಬೆಳ್ತಂಗಡಿ.