ಬೆಳ್ತಂಗಡಿ: ವೇಣೂರು ಹೋಬಳಿಯ ಕರಿಮಣೇಲು ಗ್ರಾಮದಲ್ಲಿರುವ ಶ್ರೀಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನವು ಸಂಪೂರ್ಣ ನವೀಕರಣಗೊಂಡಿದ್ದು ದೇವರ ಪುನರ್ಪ್ರತಿಷ್ಠೆ ಹಾಗೂ ಬ್ರಹ್ಮಕಲಶಾಭಿಷೇಕೋತ್ಸವವು ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಉದಯ ಪಾಂಗಾಣ್ಣಾಯಯರ ನೇತೃತ್ವದಲ್ಲಿ ಹಾಗೂ ಕ್ಷೇತ್ರದ ಪ್ರಧಾನ ಅರ್ಚಕ ಡಿ. ಚಂದ್ರಶೇಖರ ಅಸ್ರಣ್ಣರ ಪೌರೋಹಿತ್ಯದಲ್ಲಿ ಡಿ.24 ರಿಂದ 30 ರವರೆಗೆ ಸಂಪನ್ನಗೊಳ್ಳಲಿದೆ.
ಸರಿಸುಮಾರು 500 ವರ್ಷಗಳ ಇತಿಹಾಸವನ್ನು ಹೊಂದಿರುವ ದೇವಸ್ಥಾನದಲ್ಲಿ 20 ವರ್ಷಗಳ ಹಿಂದೆ ಸುತ್ತುಗೋಪುರವನ್ನು ನವೀಕರಿಸಿ ಬ್ರಹ್ಮಕಲಶೋತ್ಸವ ನೆರವೇರಿಸಲಾಗಿತ್ತು. ಇದೀಗ ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಗೌರವಾಧ್ಯಕ್ಷತೆಯಲ್ಲಿ, ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರ ಹಾಗೂ ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲರ ಗೌರವ ಮಾರ್ಗದರ್ಶನದೊಂದಿಗೆ, ದಡ್ಡು, ಕರಿಮಣೇಲು ಬಾಲಕೃಷ್ಣ ಭಟ್ ಅವರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷತೆಯಲ್ಲಿ ದೇವರ ಗರ್ಭಗುಡಿ, ನಂದಿಮಂಟಪ ಹಾಗೂ ಮುಖಮಂಟಪವನ್ನು ಶಿಲಾಮಯವಾಗಿ ನವೀಕರಿಸಲಾಗಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಗೌರವಾಧ್ಯಕ್ಷತೆಯಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ನೆರವೇರಲಿದೆ.
ಡಿ. 24 ರಂದು ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು ಮಧ್ಯಾಹ್ನ 2 ಗಂಟೆಗೆ ಅದರ ಉದ್ಘಾಟನೆಯನ್ನು ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ವಿ. ಪ್ರವೀಣ ಕುಮಾರ್ ಇಂದ್ರ ಉದ್ಘಾಟಿಸಲಿದ್ದಾರೆ. ಸಂಜೆ 5 ಗಂಟೆಗೆ ಉಗ್ರಾಣ ಮೂಹೂರ್ತ ನಡೆಯಲಿದೆ. ಸಂಜೆ 6 ಗಂಟೆಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ ಮಾಡಲಿದ್ದಾರೆ. ಶಾಸಕ ಹರೀಶ ಪೂಂಜ ಸಭಾಧ್ಯಕ್ಷತೆ ವಹಿಸಲಿದ್ದಾರೆ ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಪೆರಿಂಜೆಯ ಅನುವಂಶೀಯ ಆಡಳಿತಗಾರ ಎ. ಜೀವಂಧರ ಕುಮಾರ್ ಅವರು ಕಾರ್ಯಾಲಯ ಉದ್ಘಾಟಿಸಲಿದ್ದಾರೆ.
ಉದ್ಯಮಿ ಕೆ. ಶ್ರೀಪತಿ ಭಟ್ ಅನ್ನ ಛತ್ರದ ಉದ್ಘಾಟನೆಯನ್ನು, ಉದ್ಯಮಿ ಯು. ರಾಜಗೋಪಾಲ ಭಟ್ ಉಗ್ರಾಣದ ಉದ್ಘಾಟನೆಯನ್ನು, ವೇಣೂರು ಪ್ರಾ.ಕೃ.ಪ.ಸಹಕಾರಿ ಬ್ಯಾಂಕ್ ಅಧ್ಯಕ್ಷ ಸುಂದರ ಹೆಗ್ಡೆ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ರಾತ್ರಿ 8.30 ಗಂಟೆಯಿಂದ ಲಾಯಿಲದ ಓಂ ಶಕ್ತಿ ಗೆಳೆಯರ ಬಳಗದಿಂದ ತುಂಗಭದ್ರ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ.
ಡಿ.25 ರಂದು ಮಧ್ಯಾಹ್ನ ಕುಣಿತ ಭಜನೆ, ಸಂಜೆ 6 ಗಂಟೆಗೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸುಕೀರ್ತಿರಾಜ ಅಜ್ರಿ ಅವರು ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮತ್ತಿತರರು ಅತಿಥಿಗಳಾಗಿರುತ್ತಾರೆ. ಸಂಜೆ 5 ಗಂಟೆಗೆ ವಿದ್ವಾನ್ ವಸಂತ ಕುಮಾರ್ ಗೋಸಾಡ ಕಾಸರಗೋಡು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 7 ಗಂಟೆಯಿಂದ ಪಿಂಗಾರ ಕಲಾವಿದರು ಬೆದ್ರ ಇವರಿಂದ ಭರಣಿ ಕೃತಿಕೆ ನಾಟಕ, ರಾತ್ರಿ 10 ಗಂಟೆಯಿಂದ ವಿವಿಧ ತಂಡಗಳಿಂದ ಭಜನಾ ಸತ್ಸಂಗ ನೆರವೇರಲಿದೆ.
ಡಿ. 26 ರಂದು ಪೂರ್ವಾಹ್ನ ಗಂಟೆ 11 ಕ್ಕೆ ಕುಂಭ ಲಗ್ನದಲ್ಲಿ ಮಹಾದೇವ ದೇವತಾ ಪ್ರತಿಷ್ಠೆ, ಪ್ರಸನ್ನ ಪೂಜೆ, ಪಲ್ಲಪೂಜೆ ನೆರವೇರಲಿದೆ. ಸಂಜೆ 6 ಗಂಟೆಗೆ ದ.ಕ.ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರ ಸಭಾಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರು ಧಾರ್ಮಿಕ ಪ್ರವಚನ ಮಾಡಲಿದ್ದಾರೆ. ಅತಿಥಿಗಳಾಗಿ ಸಾಂಸದ ನಳೀನ್ ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಗೆ ಪ್ರಜ್ಞಾ ಪ್ರಭು ವೇಣೂರು ಇವರಿಂದ ಕಥಾ ಶ್ರವಣ, ಗಂಟೆ 8 ರಿಂದ ಶ್ರುತಿ ನಂದಕಿಶೋರ್ ಮತ್ತು ಶ್ರುತಿ ಶ್ರವಣ ಇವರಿಂದ ಭಕ್ತಿ ಸಂಗೀತ ನಡೆಯಲಿದೆ.
ಡಿ.27 ರಂದು ಸಂಜೆ 5 ಗಂಟೆಗೆ ಸೇವಾಶರಧಿ ವಿಶ್ವಸ್ಥ ಮಂಡಳಿ ವೇಣೂರು, ಪ್ರವರ್ತಿತ ಸಾಂದೀಪನಿ ಶಿಶುಮಂದಿರ, ಗಾಂಧಿನಗರ ಹಾಗೂ ಭಾರತೀ ಶಿಶುಮಂದಿರ ವೇಣೂರು ಇಲ್ಲಿನ ಪುಟಾಣಿಗಳಿಂದ ನೃತ್ಯ ಕಾರ್ಯಕ್ರಮ, 6 ಗಂಟೆಗೆ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಭಾರತ ಜನನಿ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಡಿ.28 ರಂದು ಸಂಜೆ ಗಂಟೆ 5 ರಿಂದ ಕಟೀಲು ಶ್ರೀ ಪ್ರಕಾಶ್ ಸಪ್ರೆ ಮತ್ತು ಬಳಗದವರಿಂದ ಭಜನ್ ಸಂಧ್ಯಾ, ಸಂಜೆ ಗಂಟೆ 6 ರಿಂದ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ.
ಡಿ. 29 ರಂದು ಬೆಳಿಗ್ಗೆ 7 ಗಂಟೆಯಿಂದ ಗಣಯಾಗ, ರುದ್ರಯಾಗ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂಪನ್ನಗೊಳ್ಳಲಿದೆ. ಸಂಜೆ 6 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವದಿಸಲಿದ್ದಾರೆ. ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಅಳದಂಗಡಿ ಅರಮನೆ ಡಾ| ಪದ್ಮಪ್ರಸಾದ ಅಜಿಲ, ಶಾಸಕ ಹರೀಶ ಪೂಂಜ, ಕರ್ನಾಟಕ ಬ್ಯಾಂಕ್ ಅಧ್ಯಕ್ಷ ಮಹಾಬಲೇಶ್ವರ ಎಂ.ಎಸ್., ಮತ್ತಿತರರು ಉಪಸ್ಥಿತರಿರಲಿದ್ದಾರೆ. ಸಂಜೆ ಗಂಟೆ 4.30 ರಿಂದ ಚಂದ್ರಕಾಂತ ಭಟ್ ಅಶ್ವತ್ಥಪುರ ಇವರಿಂದ ಗಜಗೌರಿ ವ್ರತ ಹರಿಕಥಾ ಸತ್ಸಂಗ ನಡೆಯಲಿದೆ. ಬಳಿಕ ಕಲ್ಲಡ್ಕ ವಿಠಲ ನಾಯಕ್ ಅವರಿಂದ ಗೀತಾ-ಸಾಹಿತ್ಯ-ಸಂಭ್ರಮವಿರಲಿದೆ. ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.