ಬೆಳ್ತಂಗಡಿ: ಮುಂಡಾಜೆ ಗ್ರಾಮದ ಕೊಂಬಿನಡ್ಕ ಪರಿಸರದಲ್ಲಿ ಉಪಟಳ ನೀಡಿರುವ ಕಾಡಾನೆ ಇಲ್ಲಿಯ ಯೋಗೀಶ ನಾಯ್ಕ , ಜಗದೀಶ ನಾಯ್ಕ, ನಿರಂಜನ ನಾಯ್ಕ, ಜನಾರ್ದನ ನಾಯ್ಕ, ಶ್ರೀನಿವಾಸ ಕಾಕತ್ಕರ್ ಮೊದಲಾದವರ ತೋಟಗಳಿಗೆ ದಾಳಿ ನಡೆಸಿ ಅಡಕೆ ಗಿಡ, ಬಾಳೆ ಗಿಡ, ಬೈನೆ ಮರಗಳನ್ನು ಡಿ. 31ರ ರಾತ್ರಿ ಧ್ವಂಸ ಗೈದಿವೆ.
ಮುಂಡಾಜೆಯ ದುಂಬೆಟ್ಟು ಪರಿಸರದಲ್ಲಿ ಕಾಡಾನೆಗಳು ಆಗಾಗ ದಾಳಿ ನಡೆಸುತ್ತಿದ್ದರು ಕೊಂಬಿನಡ್ಕ ಪರಿಸರಕ್ಕೆ ಇದೇ ಮೊದಲ ಬಾರಿಗೆ ಲಗ್ಗೆ ಇಟ್ಟಿವೆ.
ಮನೆ ಹತ್ತಿರ ಸುಳಿದಾಟ:
ಕೊಂಬಿನಡ್ಕ ಪರಿಸರದಲ್ಲಿ ಸುಮಾರು 20ರಷ್ಟು ಮನೆಗಳಿದ್ದು ಕಾಡಾನೆ ಮನೆಗಳ ಸಮೀಪ ಸುಳಿದಾಡ ನಡೆಸಿದ್ದು ಪರಿಸರದ ಜನರಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ಇಲ್ಲಿನ ಸಮೀಪದ ಚಿಬಿದ್ರೆಯಲ್ಲಿ ಕಳೆದ ಹತ್ತು ದಿನಗಳ ಹಿಂದೆ ಅರಣ್ಯ ಇಲಾಖೆ ಹಾಗೂ ನಾಗರಹೊಳೆಯ ಕಾವಾಡಿಗರ ತಂಡ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆ ನಡೆಸಿತ್ತು. ಕಾರ್ಯಾಚರಣೆ ಕೊನೆಗೊಂಡ ದಿನವೇ ರಾತ್ರಿ ದುಂಬೆಟ್ಟು ಪರಿಸರಕ್ಕೆ ಕಾಲಿಟ್ಟಿದ್ದ ಕಾಡಾನೆಗಳು ಅಪಾರ ಪ್ರಮಾಣದಲ್ಲಿ ಕೃಷಿಹಾನಿ ಉಂಟು ಮಾಡಿದ್ದವು. ಆ ಬಳಿಕ ಕಂಡು ಬರದ ಕಾಡಾನೆಗಳು ಈಗ ಕೊಂಬಿನಡ್ಕ ಪ್ರದೇಶದಲ್ಲಿ ಪ್ರತ್ಯಕ್ಷವಾಗಿವೆ.