ಮಂಗಳೂರು: ವಿದ್ಯಾರ್ಥಿಗಳು ಕೇವಲ ಪಠ್ಯ ಶಿಕ್ಷಣಕ್ಕೆ ಸೀಮಿತವಾಗಬಾರದು ಶಿಸ್ತು, ಸಮಯ ಪಾಲನೆ, ಸ್ವಚ್ಛತೆಯಂತಹ ನೈತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಮಂಗಳೂರು ವಿ.ವಿ.ಯ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು ಮಂಗಳಗಂಗೋತ್ರಿ ಇದರ ಯೂತ್ ರೆಡ್ ಕ್ರಾಸ್ ವತಿಯಿಂದ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಬುಧವಾರ ಮಂಗಳೂರು ವಿ.ವಿ.ಯ ಮಂಗಳಾ ಸಭಾಂಗಣದ ಮುಂಭಾಗದ ಬಸ್ ತಂಗುದಾಣವನ್ನು ಆಯೋಜಿಸಿದ ‘ ಸ್ವಚ್ಛ ಸುಂದರ ಮಂಗಳೂರು ‘ಸ್ವಚ್ಛತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪರಿಸರದ ನೈರ್ಮಲ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳು ಭವಿಷ್ಯದ ರೂವಾರಿಗಳಾಗಿದ್ದು ಯೂತ್ ರೆಡ್ ಕ್ರಾಸ್‌ನ ಸದಸ್ಯರು ಬಸ್ ನಿಲ್ದಾಣ ಸ್ವಚ್ಛತೆ ಹಮ್ಮಿಕೊಂಡಿರುವುದು ಮಾದರಿ ಕಾರ್ಯಕ್ರಮವಾಗಿದೆ ಎಂದು ಅವರು ಶ್ಲಾಘಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಮಂಗಳೂರು ವಿ.ವಿ.ಯ ಯೂತ್ ರೆಡ್‌ಕ್ರಾಸ್ ನೋಡಲ್ ಅಧಿಕಾರಿ ಡಾ.ಗಣಪತಿ ಗೌಡ, ದ.ಕ.ರೆಡ್‌ಕ್ರಾಸ್ ಸೊಸೈಟಿಯ ಆಡಳಿತ ಮಂಡಳಿ ನಿರ್ದೇಶಕ ಪಿ.ಬಿ.ಹರೀಶ್ ರೈ, ರವೀಂದ್ರನಾಥ ಉಚ್ಚಿಲ, ಸಂಸ್ಥೆಯ ಪ್ರಾಂಶುಪಾಲೆ ಡಾ.ಕೆ.ಪ್ರಿಯಾ , ಯೂತ್ ರೆಡ್‌ಕ್ರಾಸ್‌ನ ನೋಡಲ್ ಅಧಿಕಾರಿ ಉಪನ್ಯಾಸಕಿ ಜ್ಯೋತಿ ಡಿ.ಎಂ. ಮುಖ್ಯ ಅತಿಥಿಗಳಾಗಿದ್ದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ, ಸದಸ್ಯ ರಾಜೇಶ್ ಶೆಟ್ಟಿ ದಡ್ಡಂಗಡಿ, ಕಾಲೇಜಿನ ಉಪನ್ಯಾಸಕಿಯರಾದ ಸಹನಾ, ಅಮಿತಾ.ಎಸ್., ಮಧುಶ್ರೀ, ಮಿಯಾಝ್, ಭವಾನಿ, ಅಜಯ್, ಶ್ರುತಿ .ಎನ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಅಲಂಕರಿಸಿದರು. ಹೂವಿನ ಕುಂಡಗಳನ್ನು ಅಳವಡಿಸಿದರು.