ಮಂಗಳೂರು: ಮಂಗಳೂರಿನ ಕೆನರಾ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ಸ್‌ನ ಸಹಭಾಗಿತ್ವದಲ್ಲಿ ಜ.15ರಂದು ನಗರದ ಡೊಂಗರಿಕೇರಿ ಕೆನರಾ ಹೈಸ್ಕೂಲ್ ಮೈದಾನದಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಶಾಜ್ಯೋತಿ ಅಧ್ಯಕ್ಷ ವಿ.ಮುರಳೀಧರ ನ್ಯಾಕ್ ಹೇಳಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೇವಾಭಾರತಿ ಮಂಗಳೂರು ಕಳೆದ 30 ವರ್ಷಗಳಿಂದ ದಿವ್ಯಾಂಗರ ಜೀವನ ಸುಧಾರಿಸಲು ಶ್ರಮಿಸುತ್ತಿದೆ. ತನ್ನ ಅಂಗ ಸಂಸ್ಥೆಗಳ ಮೂಲಕ ಅವರಿಗೆ ಅವಶ್ಯವಿರುವ ಶಿಕ್ಷಣ, ತರಬೇತಿ, ಚಿಕಿತ್ಸೆ ಇತ್ಯಾದಿ ಸೌಕರ್ಯಗಳನ್ನು ಒದಗಿಸಿ ಕೊಟ್ಟು ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ.
ಈ ನಿಟ್ಟಿನಲ್ಲಿ ವಿಶಿಷ್ಟರಿಗಾಗಿ ವಿಶಿಷ್ಟ ಮೇಳ ಕಾರ್ಯಕ್ರಮ ನಡೆಸಲಾಗುತ್ತದೆ. ಬೆಳಿಗ್ಗೆ 9:30ಕ್ಕೆ ಮೇಳದ ಉದ್ಘಾಟನೆ ನಡೆಯಲಿದ್ದು, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಉಪಸ್ಥಿತರಿರುವರು. ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದ ವಿಶೇಷ ವಿದ್ಯಾರ್ಥಿ ಅನ್ವಿತ್ ಜಿ.ಕುಮಾರ್ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೇವಾಭಾರತಿ ಮಂಗಳೂರು ಅಧ್ಯಕ್ಷೆ ಸುಮತಿ ವಿ.ಶೆಣೈ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಕಾರ್ಯದರ್ಶಿ ರಂಗನಾಥ ಭಟ್, ಆಶಾಜ್ಯೋತಿ ಉಪಾಧ್ಯಕ್ಷರಾದ ಸಾವಿತ್ರಿ ರಾವ್, ಕಾರ್ಯದರ್ಶಿ ಎಸ್.ರವಿನಾಥ ಕುಡ್ವ, ಜತೆ ಕಾರ್ಯದರ್ಶಿ ಕೆ.ಇ.ಫಣೀಂದ್ರ, ಖಜಾಂಚಿ ಕೆ ವಿಶ್ವನಾಥ ಪೈ ಇದ್ದರು.