ಮಂಗಳೂರು: ಗಾಂಜಾ ಮಾರಾಟಗಾರರ ವಿರುದ್ಧ ಮತ್ತೆ ಸಮರ ಮುಂದುವರೆಸಿರುವ ನಗರ ಪೊಲೀಸರು ಶುಕ್ರವಾರ ಇನ್ನೊಬ್ಬರನ್ನು ಬಂಧಿಸಿದ್ದಾರೆ.
ಶುಕ್ರವಾರ (೧೩-೦೧-೨೦೨೩)ರಂದು ಬೆಳಿಗ್ಗೆ ಕುಂಟಿಕಾನ ಕ್ರಾಸ್ ಬಳಿ ಮಾರುತಿ ಸ್ವಿಫ್ಟ್ ಡಿಸೈರ್ ವಾಹನದಲ್ಲಿ ನಿಷೇದಿತ ಮಾದಕ ವಸ್ತು ಗಾಂಜಾವನ್ನು ಸಾಗಾಟ ಮಾಡುತ್ತಿದ್ದಾಗ ಚಿಕ್ಕಮಗಳೂರು ಜಿಲ್ಲೆಯ ನಿವಾಸಿ ವಿಜಯ ಕುಮಾರ್ ಶೆಟ್ಟಿ ಅವರನ್ನು ಬಂಧಿಸಲಾಗಿದೆ.
ಸಾಗಾಟಕ್ಕೆ ಬಳಸಿದ ಕಾರು ಮತ್ತು ೧೦.೨೦೦ ಕಿಲೋಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಈತ ಆಂಧ್ರಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಸಾಗಾಟ ಮಾಡುತ್ತಿದ್ದ. ಸಿ.ಸಿ.ಬಿ. ಇನ್ಸ್ ಪೆಕ್ಟರ್ ಶ್ಯಾಂಸುಂದರ್ ಎಚ್.ಎಂ. ಆವರ ನೇತೃತ್ವದ ತಂಡ ಈ ಕಾರ್ಯಾಚರಣೆಯನ್ನು ನಡೆಸಿದೆ.
ಮಹೇಶ್ ಪ್ರಸಾದ್, ಪಿ.ಎಸ್.ಐ.ರಾಜೇಂದ್ರ ಬಿ., ಸುದೀಪ್ ಎಂ.ವಿ. ಮತ್ತು ಸಿಬ್ಬಂದಿಗಳು ಈ ತಂಡದಲ್ಲಿದ್ದರು.
ಆರೋಪಿ ವಿಜಯಕುಮಾರ್ ಈ ಹಿಂದೆ ಕೂಡಾ ಗಾಂಜಾ ಸಾಗಾಟ, ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಒಟ್ಟು ಎರಡು ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.
ಬಂಧಿತನಿಂದ ವಶಪಡಿಸಿಕೊಂಡ ಸೊತ್ತುಗಳ ಮೌಲ್ಯ ಒಟ್ಟು ೫,೬೫,೫೦೦ರೂ.ಗಳೆಂದು ಅಂದಾಜಿಸಲಾಗಿದೆ. ಉರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.