ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಶ್ರೀರಾಮ ಪ್ರೌಢಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಮುಂಬಯಿ ಹೇರಂಬಾ ಇಂ.ಲಿ.ಚಯರ್ಮನ್ ಸದಾಶಿವ ಕೆ. ಶೆಟ್ಟಿ, ಕನ್ಯಾನ ಇವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಸುಸಂಸ್ಕೃತಿಯ, ಶಿಸ್ತಿನ ಶಿಕ್ಷಣ ನೀಡುವ ಐತಿಹಾಸಿಕ ಅನೇಕ ಕ್ಷಣಗಳಿಗೆ ಸಾಕ್ಷಿಯಾದ ಕಲ್ಲಡ್ಕ ಶ್ರೀರಾಮ ವಿದ್ಯಾಲಯ ನಿಜಕ್ಕೂ ಅದ್ಭುತವಾಗಿದೆ. ಇಂತಹ ಸರ್ವ ಶಿಕ್ಷಣ ನೀಡುವ ವಿದ್ಯಾಕೇಂದ್ರವನ್ನು ನಾನು ಕಂಡಿಲ್ಲ ಎಂದು ಅವರು ಹೇಳಿದರು.
ಶಿಕ್ಷಣ ಮಹತ್ತರವಾದದ್ದು, ಶಿಕ್ಷಣವೇ ಜೀವನ ರೂಪಿಸುತ್ತದೆ, ಹಾಗಾಗಿ ಗುಣಮಟ್ಟದ ಶಿಕ್ಷಣದ ಅಗತ್ಯವಿದೆ, ಪಾಠದ ಜೊತೆಯಲ್ಲಿ ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ಮೌಲ್ಯಯುತವಾದ ಶಿಕ್ಷಣ ಶ್ರೀರಾಮ ವಿದ್ಯಾಕೇಂದ್ರದ ಶಿಕ್ಷಣ ಸಂಸ್ಥೆಯಲ್ಲಿ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಸ್ಪರ್ಧಾತ್ಮಕ ಶಿಕ್ಷಣದ ವ್ಯವಸ್ಥೆಯಡಿಯಲ್ಲಿ ಶಿಕ್ಷಣ ನೀಡುವ ಕೇಂದ್ರಗಳು ಉನ್ನತ ಮಟ್ಟದಲ್ಲಿರಬೇಕು. ಆ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಕೇಂದ್ರವೂ ಎತ್ತರದ ಸ್ಥಾನದಲ್ಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇದರ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಇವರು ಮಾತನಾಡಿ, ವಿದ್ಯಾರ್ಥಿಗಳ ಜೀವನಕ್ಕೆ ಪೂರಕವಾದ ಚಿಂತನೆಗೆ ಹೊಸ ರೂಪ ನೀಡುವ ಕೆಲಸ ಶಿಕ್ಷಣದಿಂದ ಆಗಬೇಕಾಗಿದೆ. ದೇಶದ ಸಂಸ್ಕೃತಿಯನ್ನು, ಜೀವನ ಮೌಲ್ಯಗಳನ್ನು ತಿಳಿಸಿಕೊಡುವ ಕೆಲಸ ಶಿಕ್ಷಣದ ಮೂಲಕ ಸಿಗಬೇಕು. ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಮಾದರಿ ಶಿಕ್ಷಣ ಸಂಸ್ಥೆಯಾಗಿ ಮೂಡಿಬರಬೇಕು ಎಂಬ ದೃಷ್ಟಿಯ ಯೋಚನೆ ಫಲವಾಗಿ ಇಂದು ಅತ್ಯಂತ ಎತ್ತರಕ್ಕೆ ಬೆಳೆದುನಿಂತಿದೆ ಎಂಬ ಸಂತಸ ಇದೆ ಎಂದರು.
ಉದ್ಯಮಿ ಬಾಲಕೃಷ್ಣ ಭಂಡಾರಿ, ಶ್ರೀರಾಮ ವಿದ್ಯಾಕೇಂದ್ರ, ಕಲ್ಲಡ್ಕ, ಇದರ ಅಧ್ಯಕ್ಷ ಬಿ. ನಾರಾಯಣ ಸೋಮಯಾಜಿ , ಸಹಸಂಚಾಲಕ ರಮೇಶ್, ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕೇತರರು, ಹಾಗೂ ವಿದ್ಯಾರ್ಥಿಗಳು-ಹಿರಿಯ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.
ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ವಸಂತ ಮಾಧವ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಗೋಪಾಲ ಎಂ. ವಂದಿಸಿದರು.
ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.