ಉಳ್ಳಾಲ: ವೈಟ್ ಸಿಮೆಂಟ್ ತುಂಬಿದ್ದ ಟ್ರಕ್ ನ ಟಯರ್ ಬ್ಲಾಸ್ಟ್ ಆದ ಪರಿಣಾಮ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದ ಘಟನೆ ರಾ.ಹೆ 66 ರ ಜಪ್ಪಿನಮೊಗರು ಎಂಬಲ್ಲಿ ಇಂದು ಸಂಜೆ ಸಂಭವಿಸಿದ್ದು ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನು ಸ್ಥಳೀಯರು ಮತ್ತು ಅಗ್ನಿ ಶಾಮಕದಳದ ಸಿಬ್ಬಂದಿ ಒಂದೂವರೆ ತಾಸುಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ತಮಿಳು ನಾಡು ಮೂಲದ ನಾಗರಾಜ್ ಎಂಬ ಟ್ರಕ್ ಚಾಲಕನನ್ನು ರಕ್ಷಿಸಲಾಗಿದೆ.ಮಂಗಳೂರಿನಿಂದ ಕೇರಳದ ಕಡೆಗೆ ವೈಟ್ ಸಿಮೆಂಟ್ ಹೊತ್ತು ಸಾಗುತ್ತಿದ್ದ ತಮಿಳು ನಾಡು ನೋಂದಣಿಯ ಟ್ರಕ್ನ ಟಯರ್ ಜಪ್ಪಿನ ಮೊಗರು ಯೆನೆಪೋಯ ಶಾಲೆಯ ಮುಂಭಾಗದಲ್ಲಿ ಬ್ಲಾಸ್ಟ್ ಆಗಿದೆ.ನಿಯಂತ್ರಣ ತಪ್ಪಿದ ಟ್ರಕ್ ಹೆದ್ದಾರಿ ಬದಿಯ ಕಮರಿಗೆ ಉರುಳಿ ಬಿದ್ದಿದೆ.
ಟ್ರಕ್ ನಲ್ಲಿದ್ದ ಕ್ಲೀನರ್ ತಕ್ಷಣ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದು, ಚಾಲಕ ನಾಗರಾಜ್ ಮಾತ್ರ ಟ್ರಕ್ ಒಳಗಡೆ ಸಿಲುಕಿದ್ದು ಆತನ ಮೇಲೆ ಸಿಮೆಂಟ್ ಮೂಟೆಗಳು ರಾಶಿ ಬಿದ್ದಿತ್ತು.ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಮೂಟೆಗಳನ್ನು ಎತ್ತಿ ಖಾಲಿ ಮಾಡಿದ್ದಾರೆ.ಅಗ್ನಿಶಾಮಕ ದಳದ ಸಿಬ್ಬಂದಿ ಗ್ಯಾಸ್ ಕಟ್ಟರ್ ಇನ್ನಿತರ ಸಲಕರಣೆಗಳಿಂದ ನಿರಂತರ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ ಚಾಲಕನನ್ನು ರಕ್ಷಿಸಿದ್ದಾರೆ.
ತಮಿಳು ನಾಡು ಮೂಲದ ಚಾಲಕ ನಾಗರಾಜ್ ಅವರು ಸಣ್ಣ,ಪುಟ್ಟ ಗಾಯಗೊಂಡು ಪವಾಡ ಸದೃಶರಾಗಿ ಪಾರಾಗಿದ್ದು ,ಚಾಲಕ ಮತ್ತು ಕ್ಲೀನರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಗ್ನಿಶಾಮಕ ದಳ ಮತ್ತು ಸ್ಥಳೀಯರ ರಕ್ಷಣಾ ಕಾರ್ಯ ಎಲ್ಲರ ಶ್ಲಾಘನೆಗೆ ವ್ಯಕ್ತವಾಯಿತು.