ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಜ.21 ರಿಂದ 29ರ ವರೆಗೆ ಬೂತ್ ಮಟ್ಟದ ವಿಜಯ ಸಂಕಲ್ಪ ಅಭಿಯಾನ ನಡೆಯಲಿದೆ. ಬೂತ್ ಮಟ್ಟದ ಪ್ರತಿ ಮನೆಗಳಿಗೆ ತೆರಳಲಿರುವ ಬಿಜೆಪಿ ಕಾರ್ಯಕರ್ತರು ಡಬಲ್ ಇಂಜಿನ್ ಸರಕಾರದ ಸಾಧನೆ ಕರಪತ್ರ, ಫಲಾನುಭವಿಗಳ ಪರಿಚಯ ಹಾಗೂ ವಾಹನಗಳಿಗೆ ಸ್ಟಿಕರ್ ಅಂಡಿಸುವ ಕಾರ್ಯ ನಡೆಯಲಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ತಿಳಿಸಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿ ಜ. 21ರಂದು ರಾಜ್ಯಾದ್ಯಂತ ವಿಜಯ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರತಿಯೊಂದು ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆಯನ್ನು ನಡೆಸಲಾಗಿದೆ. ಕಾರ್ಯಕ್ರಮ ಪ್ರಯುಕ್ತ ಪ್ರತಿಯೊಂದು ಬೂತ್ ನಲ್ಲಿ ಕಾರ್ಯಕ್ರಮ ಉದ್ಘಾಟನೆಯನ್ನು ನಡೆಸಲಾಗುತ್ತದೆ. ಕೇಂದ್ರದ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಕಾರ್ಯ ಸಾಧನೆಗಳನ್ನು ಕರಪತ್ರದ ಮೂಲಕ ಮನೆ ಮನೆಗೂ ತಲುಪಿಸಲಾಗುವುದು ಎಂದರು.
ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಕ್ಷೇತ್ರ ಉಪಾಧ್ಯಕ್ಷ ಯಶವಂತ್ ಅಮೀನ್, ವಿಜಯ ಸಂಕಲ್ಪ ಅಭಿಯಾನದ ಮೂಲಕ ಪ್ರತಿಯೊಂದು ವಾಹನಗಳ ಮೇಲೆ ಸ್ಟಿಕರ್ ಗಳನ್ನು ಅಂಟಿಸಲಾಗುವುದು. ಅಷ್ಟೇ ಅಲ್ಲದೇ ಪ್ರತಿಯೊಂದು ಮನೆಗಳಲ್ಲಿಯೂ ಸ್ಟಿಕರ್ ಗಳನ್ನು ಅಂಟಿಸುವ ಮೂಲಕ ಗಮನ ಸೆಳೆಯಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಯೋಜನೆ ಮತ್ತು ಸಾಧನೆಗಳ ಕರಪತ್ರವನ್ನು ಪ್ರತಿ ಮನೆಗಳಿಗೆ ಹಂಚುವುದು ಹಾಗೂ ಸರಕಾರದ ಯೋಜನೆಗಳ ಪಲಾನುಭವಿಗಳ ಮನೆಗೆ ಭೇಟಿ ನೀಡಿ ಅವರಿಗೆ ಸರಕಾರದ ಯೋಜನೆಗಳಿಂದ ಆಸ ಪ್ರಯೋಜಗಳ ಮಾಹಿತಿಯನ್ನು ಪಡಯುವುದಾಗಿದೆ . ದೇಶದಲ್ಲಿ 19ಕೋಟಿ ಕಾರ್ಯಕರ್ತರು ನೋಂದಾವಣೆಗೊಂಡ ಬೃಹತ್ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಆನ್ಲೈನ್ ಮೂಲಕ ನೋಂದಣಿಯೂ ಮತ್ತೆ ಆರಂಭಗೊಂಡಿದ್ದು, ಮಿಸ್ಡ್ ಕಾಲ್ ಕೊಡುವ ಮೂಲಕ ಸದಸ್ಯತ್ವ ನೋಂದಣಿಯಾಗಲಿದೆ ಎಂದರು.
ಕ್ಷೇತ್ರ ಪ್ರಭಾರ ರಣದೀಪ್ ಅಂಚನ್, ಅಭಿಯಾನ ಸಂಚಾಲಕ ನವೀನ್ ಪಾದಲ್ಪಾಡಿ, ಕ್ಷೇತ್ರ ಕಾರ್ಯದರ್ಶಿ ಆನಂದ್ ಶೆಟ್ಟಿ, ಅಭಿಯಾನದ ಮಂಗಳೂರು ಮಂಡಲ ಸಹಸಂಚಾಲಕ ಜೀವನ್ ಕುಮಾರ್ ತೊಕ್ಕೊಟ್ಟು ಉಪಸ್ಥಿತರಿದ್ದರು.