ಮಂಗಳೂರು: ತುಂಬೆ ಯಲ್ಲಿ ಜನವರಿಯಲ್ಲೇ ಒಳ ಹರಿವು ಕ್ಷೀಣಿಸುತ್ತಿದ್ದು, ಮುಂದಿನ ಬೇಸಗೆಯಲ್ಲಿ ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿ ಸಮಸ್ಯೆ ತಲೆದೋರುವ ಸಾಧ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಈಗಿಂದಲೇ ನಿಗಾವಹಿಸಲು ಪಾಲಿಕೆ ಚಿಂತನೆ ನಡೆಸಿದೆ. ಹಿಂದಿನ ಎರಡು-ಮೂರು ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಮಳೆಯೂ ಬೇಗ ನಿಂತಿದೆ. ಇದರಿಂದಾಗಿ ನದಿಯಲ್ಲಿ ನೀರು ಹಾಗೂ ತುಂಬೆ ಅಣೆಕಟ್ಟಿಗೆ ಬರುವ ಒಳ ಹರಿವಿನ ಪ್ರಮಾಣ
ಕ್ಷೀಣಿಸುತ್ತಿದೆ. ಎಪ್ರಿಲ್ ಅಂತ್ಯ ಮೇ ತಿಂಗಳಲ್ಲಿ ಘಟ್ಟದ ತಪ್ಪಲಿನ ಭಾಗದಲ್ಲಿ ಒಂದಷ್ಟು ಉತ್ತಮ ಮಳೆಯಾಗದಿದ್ದರೆ ನೀರು ಪೂರೈಕೆಯಲ್ಲಿ ಮತ್ತೆರೇಷಂಗ್ ವ್ಯವಸ್ಥೆ ಅಳವಡಿಸಬೇಕಾದಅನಿವಾರ್ಯ ಎದುರಾಗಬಹುದು ಎನ್ನುವ ಆತಂಕ ಎದುರಾಗಿದೆ
ಸದ್ಯ ತುಂಬೆ ಅಣೆಕಟ್ಟಿನ ಎಲ್ಲ ಗೇಟ್ ಗಳನ್ನು ಮುಚ್ಚಲಾಗಿದ್ದು, 6 ಅಡಿಗಳಷ್ಟು ನೀರು ಸಂಗ್ರಹವಿದೆ. ಸಣ್ಣ ಪ್ರಮಾಣದಲ್ಲಿ ಹೊರ ಹರಿವು ಇದೆ. ಬಿಸಿಲು ಹೆಚ್ಚಾಗಿರುವುದರಿಂದ ಸ್ವಲ್ಪ ಮಟ್ಟದಲ್ಲಿ ನೀರಿನ ಅವಿಯಾಗುವಿಕೆಯೂ ಕಂಡು ಬರುತ್ತಿದೆ. ಈ ಬಾರಿ ನೀರಿನ ಬಳಕೆಯೂ ಜನವರಿಯಿಂದಲೇ ಹೆಚ್ಚಾಗಿದೆ. ಆದ್ದರಿಂದ ಸಾರ್ವಜನಿಕರು ನೀರಿನ ಬಳಕೆ ಕುರಿತಂತೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು, ಇದೇ ವೇಳೆ ಎಎಂಆರ್ ಅಣೆಕಟ್ಟಿನಲ್ಲಿ 18.9 ಮೀ. (ಸಮುದ್ರ ಮಟ್ಟದಿಂದ) ನೀರಿನ ಸಂಗ್ರಹವಿದೆ.ಕೈಗಾರಿಕೆಗಳಿಗೂ ನೀರು ಮಂಗಳೂರು ನಗರಕ್ಕೆ ಪ್ರಸ್ತುತ ದಿನಕ್ಕೆ 160 ಎಂಎಲ್ಡಿ (ಮಿಲಿಯನ್ ಲೀಟರ್ ಪರ್ ಡೇ) ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ ಸುಮಾರು 50 ಎಂಎಲ್ಡಿ ನೀರು ಟ್ಯಾಪಿಂಗ್ ಮತ್ತು ಇತರ ಕಾರಣಗಳಿಗೆ ಲೀಕೇಜ್ ಆಗುತ್ತಿದೆ. ಉಳಿದಂತೆ ಎಂಸಿಎಫ್ಗೆ 2 ಎಂಜಿಡಿ (ಮಿಲಿಯನ್ ಗ್ಯಾಲನ್ಸ್), ಎನ್ ಎಂಪಿಟಿಗೆ 0.5 ಎಂಜಿಡಿ ಹಾಗೂ ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಸರಬರಾಜಾಗುತ್ತದೆ. ಬಂಟ್ವಾಳದ ಬಳಿಯ ಎಎಂಆರ್ ಅಣೆಕಟ್ಟಿನಿಂದ ಎಂಆರ್ಪಿಎಲ್ ಮತ್ತು ವಿಶೇಷ ಆರ್ಥಿಕ ವಲಯಕ್ಕೆ ೮ ಎಂಜಿಡಿ ನೀರು ಪೂರೈಕೆಯಾಗುತ್ತದೆ. ಮಂಗಳೂರು ನಗರಕ್ಕೆ ಹೊರತುಪಡಿಸಿದಂತೆ 18 ಎಂಜಿಡಿಯಷ್ಟು ಕೈಗಾರಿಕೆಗಳಿಗೆ ಪೂರೈಕೆಯಾಗುತ್ತದೆ.
ನಗರದಲ್ಲಿ 2016ರಲ್ಲಿ ಭೀಕರ ನೀರಿನ ಕೊರತೆ ಕಾಡಿತ್ತು. ಇದರಿಂದ ನೀರಿನ ಲೇಷನಿಂಗ್ ವ್ಯವಸ್ಥೆಯ ಮೊರೆ ಹೋಗಲಾಗಿತ್ತು. ಟ್ಯಾಂಕರ್ ಗಳ ಮೂಲಕವೂ ನೀರಿನ ಸರಬರಾಜು ಮಾಡಲಾಗಿತ್ತು. ಖಾಸಗಿ ಬಾವಿ, ಕುದುರೆಮುಖದ ಲಕ್ಕಾ ಡ್ಯಾಂ ಹೀಗೆ ವಿವಿಧೆಡೆಯಿಂದ ನೀರು ಪೂರೈಕೆಗೂ ಕ್ರಮಕೈಗೊಳ್ಳಲಾಗಿತ್ತು. 2017ರಲ್ಲೂ ರೇಷನಿಂಗ್ ವ್ಯವಸ್ಥೆಯ ಮೂಲಕವೇ ಬೇಸಗೆಯಲ್ಲಿ ನೀರು ಪೂರೈಕೆ ಮಾಡಲಾಗಿತ್ತು. ಕೈಗಾರಿಕೆಗಳಿಗೆ ನೀರು ಪೂರೈಸುವುದನ್ನೂ ಕಡಿತಗೊಳಿಸಲಾಗಿತ್ತು. 2019ರಲ್ಲಿ ಕೈಗಾರಿಕೆಗಳಿಗೆ ನೀರು ಪೂರೈಕೆ ಮಾಡುವ ಪ್ರಮಾಣವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿತ್ತು.ನಂತರದ ವರ್ಷಗಳಲ್ಲಿ ಬೇಸಿಗೆ ಮಳೆ ಉತ್ತಮವಾಗಿ ಸುರಿದು ನೀರಿನ ಕೊರತೆ ಉಂಟಾಗಿರಲಿಲ್ಲ.