ಬಂಟ್ವಾಳ: ಬಂಟ್ವಾಳ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಹಾಗೂ ಚಿಣ್ಣರಲೋಕ ಸೇವಾಬಂಧು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ೨೦ ದಿನಗಳ ಕಾಲ ಬಿ.ಸಿ.ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ನಡೆಯಲಿರುವ ಕರಾವಳಿ ಕಲೋತ್ಸವ-೨೦೨೩ ಸಾಂಸ್ಕೃತಿಕ ಕಾರ್ಯಕ್ರಮ ಶುಕ್ರವಾರ ಸಂಜೆ ಉದ್ಘಾಟನೆಗೊಂಡಿತು.
ಕಲೋತ್ಸವವನ್ನು ಉದ್ಘಾಟಿಸಿದ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಒಳಿತಿನ ಪ್ರಾಮಾಣಿಕ ಪ್ರಯತ್ನದಲ್ಲಿ ಅಪಮಾನ, ಅಪವಾದಗಳು ಸಾಮಾನ್ಯವಾಗಿದ್ದು, ಈ ಸಮಾಜ ಅಪವಾದದಲ್ಲಿ ಯಾರನ್ನೂ ಬಿಟ್ಟಿಲ್ಲ. ಅದು ಕಾಲಚಕ್ರದ ಮಹಿಮೆಯಾಗಿದೆ. ಇಂತಹ ಅಪವಾದಗಳ ಮಧ್ಯೆಯೂ ಚಿಣ್ಣರಲೋಕ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದಿರುವುದೇ ದೊಡ್ಡ ಸಾಧನೆಯಾಗಿದೆ ಎಂದರು.
ಸಮಾರಂಭದಲ್ಲಿ ಯುವ ಭಾಗವತ, ಯಕ್ಷಧ್ರುವ ಪಟ್ಲ ಫೌಂಡೇಶನ್ ಸಂಸ್ಥಾಪಕ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಹಾಗೂ ಯುವ ಪ್ರತಿಭೆ ಶ್ರೀನಿಧಿ ಬಿ.ಸಿ.ರೋಡು ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿಣ್ಣರ ಅಧ್ಯಕ್ಷೆ ಸಾನ್ವಿ ಸುಧೀರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೊಡಂಕಾಪು ಇನೆಂಟ್ ಜೀಸಸ್ ಶಾಲೆಯ ಮುಖ್ಯಸ್ಥ ಫಾ| ಮೆಲ್ವಿನ್ ಲೋಬೊ, ಮಿತ್ತಬೈಲು ಅಲ್ ಜಝರಿ ಇರ್ಷಾದ್ ಹುಸೈನ್ ದಾರಿಮಿ, ಕಲೋತ್ಸವ ಅಧ್ಯಕ್ಷ ಸುದರ್ಶನ್ ಜೈನ್, ಉದ್ಯಮಿ ಜಗನ್ನಾಥ ಚೌಟ ಬದಿಗುಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಎಂ.ಪಿ., ಬೋಳಂತೂರು ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಲೀನಾ ಐರಿನ್ ಗೋವಿಯಸ್ ಮೊದಲಾದವರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬಂಟ್ವಾಳ ಚಿಣ್ಣರಲೋಕ ಸೇವಾಬಂಧು ಸಂಸ್ಥೆಯು ಬೋಳಂತೂರು ಸರಕಾರಿ ಶಾಲೆಯನ್ನು ದತ್ತು ಸ್ವೀಕಾರ ಮಾಡಿತು. ಟ್ರಸ್ಟ್ ಸಂಚಾಲಕ ಮೋಹನದಾಸ ಕೊಟ್ಟಾರಿ ಅವರು ಪ್ರಸ್ತಾವನೆಗೈದರು.
ಸಂಯೋಜನ ಸಮಿತಿಯ ಸದಸ್ಯೆ ಶೈಲಜಾ ರಾಜೇಶ್ ಸನ್ಮಾನ ಪತ್ರ ವಾಚಿಸಿದರು. ಸಂಸ್ಥೆಯ ಗೌರವಾಧ್ಯಕ್ಷ ಜಯರಾಮ ರೈ ಸ್ವಾಗತಿಸಿದರು. ನಿರ್ದೇಶಕ ಟಿ.ತಾರಾನಾಥ ಕೊಟ್ಟಾರಿ ವಂದಿಸಿದರು. ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.