ಮಂಗಳೂರು: ಭೋಪಾಲ್ ನಲ್ಲಿ ಸಶಸ್ತ್ರ ಸೀಮಾ ಬಲ್ ನಲ್ಲಿ ಕರ್ತವ್ಯದಲ್ಲಿದ್ದ ಮಂಗಳೂರಿನ ಶಕ್ತಿನಗರ ನಿವಾಸಿ ಯೋಧ ಮುರಲೀಧರ ರೈ(37) ಹೃದಯಾಘಾತದಿಂದ ಸಾವನ್ನಪ್ಪಿದ್ದು ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿದೆ.
ಮಧ್ಯಪ್ರದೇಶದ ಭೋಪಾಲದಲ್ಲಿ ಕರ್ತವ್ಯದಲ್ಲಿದ್ದು ನಿನ್ನೆ ಮುಂಜಾನೆ ಮಲಗಿದ್ದಾಗಲ್ಲೇ ಹೃದಯಾಘಾತದಿಂದ ಮುರಲೀಧರ ರೈ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು ನಿಲ್ದಾಣ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.ಸೇರಿದಂತೆ ಅಧಿಕಾರಿಗಳು ಭಾಗಿಯಾಗಿ ಗೌರವ ಸಲ್ಲಿಸಿದ್ದಾರೆ. ಆ ಬಳಿಕ ಎ.ಜೆ ಆಸ್ಪತ್ರೆಯ ಶವಗಾರಕ್ಕೆ ಮೃತ ಯೋಧನ ಪಾರ್ಥಿವ ಶರೀರ ರವಾನಿಸಲಾಗಿದೆ.
ಶಕ್ತಿನಗರದ ಯೋಧನ ಮನೆಯಲ್ಲಿ ಅಂತಿಮ ದರ್ಶನ ಮತ್ತು ಅಂತ್ಯ ಸಂಸ್ಕಾರದ ವಿಧಿಗಳು ನಡೆಯಲಿದೆ. 2007 ರಲ್ಲಿ ಕಾನ್ಸ್‌ಟೇಬಲ್ ಆಗಿ ಸಶಸ್ತ್ರ ಸೀಮಾ ಬಲ್ ಗೆ ಸೇರ್ಪಡೆಯಾಗಿದ್ದ ಮುರಲೀಧರ್ ರೈ, ಹವಾಲ್ದಾರ್ ಆಗಿ ಭೋಪಾಲ್ ನಲ್ಲಿ ಕರ್ತವ್ಯದಲ್ಲಿದ್ದರು. ತಿಂಗಳ ರಜೆಯ ಮೇಲೆ ಜ.24ರಂದು ಊರಿಗೆ ಬರುವವರಿದ್ದರು. ಮುರಲೀಧರ್ ಅವರು ಪತ್ನಿ ಮತ್ತು ಆರು ತಿಂಗಳ ಮಗುವನ್ನು ಅಗಲಿದ್ದಾರೆ.