ಮಂಗಳೂರು: ಮಂಗಳೂರಿನ ಸಮಾನ ಮನಸ್ಕ 3 ಜನ ಯುವಕರು ಸೇರಿಕೊಂಡು ಹುಟ್ಟು ಹಾಕಿದ ಸಂಸ್ಥೆ ‘ಟೀಮ್ ಬ್ಲ್ಯಾಕ್ ಅಂಡ್ ವೈಟ್ ಮಂಗಳೂರು’, 2016ರಲ್ಲಿ ಮಂಗಳೂರು ಪುರಭವನದಲ್ಲಿ ಹಾಡು ಹುಟ್ಟಿದ ಸಮಯ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಉದ್ಘಾಟನೆಗೊಂಡಿತು. ನಂತರದ ದಿನಗಳಲ್ಲಿ ತಂಡದ ಜೊತೆ ನೂರಾರು ಯುವಕರು ಸೇರಿಕೊಂಡರು.ಅನೇಕ ಸಮಾಜ ಗಣ್ಯರು ಸಹಕಾರ ನೀಡಿದರು.
ಈ ಕಾರ್ಯಕ್ರಮದ ಯಶಸ್ಸು 2019 ರಲ್ಲಿ ಮತ್ತೊಂದು ವಿನೂತನ ಕಾರ್ಯಕ್ರಮ ಆಯೋಜಿಸಲು ಪ್ರೇರೆಪಿಸಿತು ಅದೇ ಅಮರ್ ಜವಾನ್, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ವರೆಗೆ ಹುತಾತ್ಮರಾದ ಯೋಧರ ಮನೆಯವರನ್ನು ಒಟ್ಟುಗೂಡಿಸಿ ಆಯೋಜಿಸಿದ ಭಾವನಾತ್ಮಕ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯ ವಿದ್ಯಾರ್ಥಿ ಸಮೂಹವು ಜೊತೆಯಾಗಿತ್ತು.
ಕೆಲವು ವರ್ಷಗಳ ವಿರಾಮದ ನಂತರ ಶ್ರಮ ಮೇವ ಜಯತೇ ಎನ್ನುವ ಕಾರ್ಯಕ್ರಮವನ್ನು ಇದೇ ಬರುವ ಜನವರಿ 29 ಆದಿತ್ಯವಾರ ಸಂಜೆ 5ಕ್ಕೆ ಮಂಗಳೂರು ಪುರಭವನದಲ್ಲಿ ಆಯೋಜಿಸಲು ಸಿದ್ದವಾಗಿದೆ.
ನಮ್ಮ ಸಮಾಜದ ನರನಾಡಿಯಂತಿರುವ ಶ್ರಮಿಕ ವರ್ಗವಿದೆ,ಇವರ ಸೇವೆಯಿಲ್ಲದೆ ಸಮಾಜವನ್ನು ಊಹಿಸಲು ಸಾಧ್ಯವಿಲ್ಲ. ಪ್ರಮುಖವಾಗಿ ಸ್ವಚ್ಛತಾಕರ್ಮಿಗಳು, ಲೈನ್ ಮ್ಯಾನ್, ಪೋಸ್ಟ್ ಮ್ಯಾನ್, ಸಾರಿಗೆ ಸಿಬ್ಬಂದಿಗಳು , ಸಂಚಾರಿ ಪೂಲೀಸರು,ಆರೋಗ್ಯ ಕಾರ್ಯಕರ್ತರು,ಸ್ಮಶಾನದಲ್ಲಿ ಕೆಲಸ ಮಾಡುವವರು ಹೀಗೆ ಅನೇಕರು. ಇಂತಹ ನಗರ ರೂಪಕರನ್ನು ಗುರುತಿಸಿ ಇವರ ಸೇವೆಯ ಮೌಲ್ಯವನ್ನು ಗೌರವಿಸಬೇಕೆನ್ನುವ ಆಲೋಚನೆ ನಮ್ಮದು. ಅದರ ಜೊತೆಗೆ ಅವರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಬೇಕೆನ್ನುವ ಪ್ರಯತ್ನ ನಮ್ಮದು ಎಂದರು.