ಮಂಗಳೂರು: ಜನವರಿ 27 ರಂದು ಹೋಟೆಲ್ ಓಶಿಯನ್ ಪರ್ಲ್ನಲ್ಲಿ ನಡೆದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್, ಮಂಗಳೂರು- ಮಣಿಪಾಲ್ ಸೆಂಟರ್‌ನ ಸಭೆಯಲ್ಲಿ ಗೋವಾ ಮೂಲದ ಇಪಿ ಕಾಮತ್ ಗ್ರೂಪ್ ತನ್ನ ಹಸಿರು ತಂತ್ರಜ್ಞಾನ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಕರಾವಳಿ ಕರ್ನಾಟಕಕ್ಕೆ ಕಾಲಿಟ್ಟಿತು.
ಇಪಿ ಕಾಮತ್ ಗ್ರೂಪ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಜ್‌ಕುಮಾರ್ ಕಾಮತ್ ಅವರು ತಮ್ಮ ಸಂಸ್ಥೆಯು ತ್ಯಾಜ್ಯ ವಿಲೇವಾರಿಗಾಗಿ ಒದಗಿಸುವ ಜೈವಿಕ ಪರಿಹಾರಗಳಾದ ಜೈವಿಕ- ಡೈಜೆಸ್ಟರ್ ಶೌಚಾಲಯಗಳು ಮತ್ತು ಕೊಳಚೆ ಸಂಸ್ಕರಣಾ ಘಟಕಗಳ ಬಗ್ಗೆ ಮಾಹಿತಿ ನೀಡಿದರು.
ಇವು ತ್ಯಾಜ್ಯವನ್ನು ಆಹಾರವಾಗಿ ಸೇವಿಸುವ ಇನಾಕ್ಯುಲಮ್ ಬ್ಯಾಕ್ಟೀರಿಯಾವನ್ನು ಬಳಸಿ ತ್ಯಾಜ್ಯ ಫಿಲ್ಟರ್ ಮಾಡಿ ತೋಟಗಾರಿಕೆ ಮತ್ತು ಟಾಯ್ಲೆಟ್ ಫ್ಲಶಿಂಗ್‌ಗಾಗಿ ಮರುಬಳಕೆ ಮಾಡಬಹುದಾದ ಶುದ್ಧ ನೀರನ್ನು ನೀಡುತ್ತವೆ ಎಂದು ಅವರು ಹೇಳಿದರು.
ಇಂಜಿನಿಯರಿಂಗ್ ಉತ್ಪನ್ನಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಉತ್ಸುಕರಾಗಿರಿ ಎಂದು ಅವರು ವಾಸ್ತುಶಿಲ್ಪಿಗಳಲ್ಲಿ ಕರೆಯಿತ್ತರು. ಬೆಂಗಳೂರಿನ ಪ್ರಶಸ್ತಿ ವಿಜೇತ ಭೂದೃಶ್ಯ ವಾಸ್ತುಶಿಲ್ಪಿ ವರ್ಣಾ ಶಶಿಧರ್ ಅವರನ್ನು ಒಳಗೊಂಡ ‘ಆರ್ಕಿಟೆಕ್ಟ್ನೊಂದಿಗೆ ಒಂದು ಸಂಜೆ’ ಸಂವಾದದೊಂದಿಗೆ ಸಭೆ ಪ್ರಾರಂಭವಾಯಿತು. ಪ್ರಾದೇಶಿಕ ಸಂದರ್ಭೋಚಿತ ಭೂದೃಶ್ಯಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ವರ್ಣಾ ಶಶಿಧರ್ ತಮ್ಮ ಉಪನ್ಯಾಸದಲ್ಲಿ, ವಾಸ್ತುಶಿಲ್ಪಿಗಳು ತಮ್ಮ ಕೆಲಸದಲ್ಲಿ ಸಾಂಸ್ಕೃತಿಕ ಭೂದೃಶ್ಯಗಳ ಸಂಪ್ರದಾಯವನ್ನು ಆಚರಿಸಬೇಕೆಂದು ಮನವಿ ಮಾಡಿದರು.
“ಭಾರತವು ಸಾಂಸ್ಕೃತಿಕ ಭೂದೃಶ್ಯಗಳ ಆಳವಾದ ಸಂಪ್ರದಾಯವನ್ನು ಹೊಂದಿದೆ, ಅಲ್ಲಿ ನೀವು ಪವಿತ್ರ ತೋಪುಗಳು ಮತ್ತು ಜನರಿಗೆ ಆಧ್ಯಾತ್ಮಿಕ ಸಂರಕ್ಷಣೆಯಾಗಿರುವ ಜೀವಗೋಳಗಳ ಉಪಸ್ಥಿತಿಯನ್ನು ಕಾಣಬಹುದು. ವಾಸ್ತುಶಿಲ್ಪಿಗಳಾದ ನಾವು ಇದನ್ನು ನಮ್ಮ ಕೆಲಸದಲ್ಲಿ ಆಚರಿಸಬೇಕಾಗಿದೆ” ಎಂದು ಅವರು ಅಭಿಪ್ರಾಯಪಟ್ಟರು.
ಹಾರ್ವರ್ಡ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಡಿಸೈನ್‌ನಿಂದ ಭೂದೃಶ್ಯ ವಾಸ್ತುಶಿಲ್ಪದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ವರ್ಣಾ ಶಶಿಧರ್, ಅಮೇರಿಕಾ, ಶ್ರೀಲಂಕಾ ಮತ್ತು ಭಾರತದಲ್ಲಿ ವ್ಯಾಪಕವಾದ ಪ್ರಾಯೋಗಿಕ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. ತನ್ನದೇ ಆದ ಸವಾಲಿನ ಕಾರ್ಯಯೋಜನೆಗಳಿಂದ ಕೇಸ್ ಸ್ಟಡಿಗಳನ್ನು ಪ್ರಸ್ತುತಪಡಿಸಿದ ಅವರು, ಒಳನೋಟವುಳ್ಳ ವಿನ್ಯಾಸದೊಂದಿಗೆ ಮತ್ತು ಪರಾಗಸ್ಪರ್ಶ ಮಾಡುವ ಹೂವುಗಳು, ಖಾದ್ಯ ಮತ್ತು ಔಷಧೀಯ ಸಸ್ಯಗಳು, ಪಕ್ಷಿಗಳು ಮತ್ತು ಪ್ರಾಣಿಗಳನ್ನು ಆಕರ್ಷಿಸುವ ಸ್ಥಳೀಯ ಸಸ್ಯಗಳನ್ನು ನೆಡುವದರೊಂದಿಗೆ ಸುಂದರವಲ್ಲದ ಭೂದೃಶ್ಯಗಳನ್ನು ಹೇಗೆ ಜೀವಂತಗೊಳಿಸಬಹುದು ಎಂದು ತೋರಿಸಿದರು.
ಇಪಿ ಕಾಮತ್ ಗ್ರೂಪ್‌ನ ಮಾರ್ಕೆಟಿಂಗ್ ಮತ್ತು ಅಂತರರಾಷ್ಟಿçÃಯ ವ್ಯಾಪಾರದ ನಿರ್ದೇಶಕ ಶ್ರೇಯಸ್ ನಾಡಕರ್ಣಿ ತಮ್ಮ ಸಂಸ್ಥೆ ಡಿಆರ್‌ಡಿಒ, ಐಐಟಿ ಮದ್ರಾಸ್ ಮತ್ತು ಆರ್‌ವಿ ಟಿಫಾಕ್‌ನಂತಹ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಅಭಿವೃದ್ಧಿಪಡಿಸಿದ ಇತ್ತೀಚಿನ ತಂತ್ರಜ್ಞಾನವನ್ನು ಬಳಸುತ್ತದೆ ಎಂದು ಹೇಳಿದರು.
ತ್ಯಾಜ್ಯ ನೀರು ಸಂಸ್ಕರಣಾ ವಿಭಾಗದ ಮುಖ್ಯಸ್ಥ ಮಹೇಶ ಬಾಕಲ್ ಮಾತನಾಡಿ, ತ್ಯಾಜ್ಯವನ್ನು ಮೂಲದಲ್ಲಿಯೇ ಸಂಸ್ಕರಿಸುವುದು ಮುಖ್ಯ ಎಂದರು. “ಇಂದು ಪ್ರಶ್ನೆಯು ತ್ಯಾಜ್ಯ ಸಂಸ್ಕರಣೆಯ ಬಗ್ಗೆ ಅಲ್ಲ ಆದರೆ ಬಳಸಿದ ನೀರನ್ನು ಎಲ್ಲಿ ಎಸೆಯಬೇಕು ಎಂಬುದರ ಬಗ್ಗೆ. ಮೂಲ ಹಂತದಲ್ಲಿ ಅನ್ವಯಿಸಲಾದ ಜೈವಿಕ ಪರಿಹಾರಗಳು ನೀರನ್ನು ಮರುಬಳಕೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಬಹುದು” ಎಂದು ಅವರು ಹೇಳಿದರು.
ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್ ಮಂಗಳೂರು-ಮಣಿಪಾಲ ಕೇಂದ್ರದ ಅಧ್ಯಕ್ಷ ವೆಂಕಟೇಶ್ ಪೈ ಸ್ವಾಗತಿಸಿದರು. ವ್ರಕ್ಷಾ ಬಾಳಿಗಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಸುಪ್ರೀತ್ ಆಳ್ವ, ಮೋನಿಕಾ ಕಾಮತ್ ಮತ್ತು ಸರೀನಾ ಭಂಡಾರಿ ಗಣ್ಯರಿಗೆ ಪುಷ್ಪನಮನ ಸಲ್ಲಿಸಿದರು. ಸುನೀಲ್ ತಾಳಿತ್ತಾಯ ವಂದಿಸಿದರು.
ನಿಖಿಲ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ಇ.ಪಿ.ಕಾಮತ್ ಗ್ರೂಪ್ ನ ಪ್ರಾದೇಶಿಕ ಅಧಿಕಾರಿ ವಿವೇಕ್ ರಾಜ್ ಟಿ.ಕೆ ಉಪಸ್ಥಿತರಿದ್ದರು.