ಮಂಗಳೂರು: ವಾಹನವೊಂದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತುಳುನಾಡಿನ ಹಾಸ್ಯ ಕಲಾವಿದ ಅರವಿಂದ ಬೋಳಾರ್ (Aravind Bolar) ಅವರು ಚಲಾಯಿಸುತ್ತಿದ್ದ ಬೈಕ್ ಸ್ಕಿಡಾಗಿ ಅಪಘಾತ ಸಂಭವಿಸಿದೆ. ಪರಿಣಾಮ ಅವರ ಕಾಲಿಗೆ ಗಾಯವಾಗಿದ್ದು ಅವರನ್ನು ಸ್ಥಳೀಯ ಆಸ್ಫತ್ರೆಗೆ ದಾಖಲು ಮಾಡಲಾಗಿದೆ.
ಅರವಿಂದ ಬೋಳಾರ್ ಅವರು ಕಾರ್ಯನಿಮಿತ್ತ ಮಂಗಳೂರು ನಗರದ ಪಂಪ್ ವೆಲ್ ಬಳಿ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಎದುರುಗಡೆಯಿಂದ ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ವಾಹನವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ ನಟ ಸಡನ್ ಆಗಿ ಬ್ರೇಕ್ ಹಾಕಿದ್ದಾರೆ. ಈ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದಿದೆ. ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕದಿರುತ್ತಿದ್ದರೆ ಎದುರಿನಿಂದ ವೇಗವಾಗಿ ಬರುತ್ತಿದ್ದ ವಾಹನ ಅವರ ಮೇಲೆ ಹರಿಯುವ ಸಾಧ್ಯತೆಯಿತ್ತು ಎಂದು ಹೇಳಲಾಗುತ್ತಿದೆ.
ಅಪಘಾತದಲ್ಲಿ ಬೋಳಾರ್ ಅವರ ಕೈ- ಕಾಲುಗಳಿಗೆ ಗಾಯವಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳವಾರ ಅರವಿಂದ್ ಬೋಳಾರ್‌ರ ಕಾಲಿನ ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ನಟನ ಸಂಬಂಧಿಕರು ತಿಳಿಸಿದ್ದಾರೆ
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಬೋಳಾರ್ ಅವರನ್ನು ಖಾಸಗಿ ಆಸ್ಫತ್ರೆಗೆ ದಾಖಲಿಸಲಾಗಿದೆ. ಅವರ ಬಲ ಕಾಲಿನ ಮೂಳೆ ಮುರಿತ ಉಂಟಾಗಿದೆ ಎಂದು ತಿಳಿಸಿದ್ದಾರೆ. ಮಂಗಳೂರು ನಗರದ ಸಂಚಾರಿ ಡಿಸಿಪಿಯವರು ಆಸ್ಫತ್ರೆಗೆ ತೆರಳಿ ಹಾಸ್ಯ ನಟನ ಯೋಗ ಕ್ಷೇಮ ವಿಚಾರಿಸಿದರು. ಈ ವೇಳೇ ಅವರು ಹೆಲ್ಮೆಟ್ ಧರಿಸಿದ್ದರಿಂದ ಆಪಾಯ ತಪ್ಪಿತ್ತು ಎಂದು ತಿಳಿಸಿರುವುದಾಗಿ ವರದಿಯಾಗಿದೆ.