ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ವಿದ್ಯಾರ್ಥಿನಿ ಸಂಘ, ಎನ್‌ಸಿಸಿ, ಎನ್ ಎಸ್ ಎಸ್, ರೆಡ್‌ಕ್ರಾಸ್ ಹಾಗೂ ರೇಂಜರ್ಸ್ ಘಟಕಗಳ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮೂಡುಬಿದಿರೆಯ ಸಮುದಾಯ ಆರೋಗ್ಯ ಕೇಂದ್ರದ ಇಂಟಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಪರೀಕ್ಷಾ ಕೇಂದ್ರದ ಸಲಹೆಗಾರರಾದ ದಿವ್ಯಾ ಎಂ.ಪಿ., ಎಚ್‌ಐವಿಯ ಗುಣಲಕ್ಷಣಗಳು, ಹರಡುವ ವಿಧಾನಗಳು, ಈ ಕಾಯಿಲೆಯಿಂದಾಗುವ ಪರಿಣಾಮಗಳು ಮತ್ತು ಮುಂದಿನ ಜೀವನ ಸುರಕ್ಷಿತವಾಗಿರಲು ತೆಗೆದುಕೊಳ್ಳಬೇಕಾದ ಜಾಗ್ರತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮೂಡುಬಿದಿರೆ ಸಮುದಾಯ ಆರೋಗ್ಯಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲಾ ಕೆ. ಹದಿಹರೆಯದ ಹೆಣ್ಣುಮಕ್ಕಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಾಸಿಕ ಋತುಚಕ್ರ ನಿರ್ವಹಣೆ, ನೈರ್ಮಲ್ಯ ಹಾಗೂ ಶುಚಿತ್ವದ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.
ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ಐಕ್ಯೂಎಸಿ ಮತ್ತು ವಿದ್ಯಾರ್ಥಿನಿ ಸಂಘದ ಸಂಚಾಲಕಿ ನಳಿನಿ, ಎನ್‌ಸಿಸಿ ಅಧಿಕಾರಿ ವಿಜಯಲಕ್ಷಿ, ಪದವಿಕಾಲೇಜಿನ ಎನ್ ಎಸ್ ಎಸ್ ಅಧಿಕಾರಿ ಶಾರದಾ, ರೇಂಜರ್ಸ್ ಅಧಿಕಾರಿ ರಶ್ಮಿತಾ, ಪದವಿಪೂರ್ವ ಎನ್ ಎಸ್ ಎಸ್ ಅಧಿಕಾರಿ ಪೂರ್ಣಿಮಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಿಂಚನಾ ಸ್ವಾಗತಿಸಿ, ಹೆನ್ವಿಲ್ ಕಾರ್ಯಕ್ರಮ ನಿರೂಪಿಸಿದರು.