News Kannada
Wednesday, March 22 2023

ಮಂಗಳೂರು

ಉಜಿರೆ: ಸಾಹಿತ್ಯ ಸಮ್ಮೇಳನ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ

Sahitya Sammelan
Photo Credit : By Author

ಉಜಿರೆ: ಶ್ರೀ ಕೃಷ್ಣಾನುಗ್ರಹ ಸಭಾಭವನದ ಕುಂಬ್ಳೆ ಸುಂದರ ರಾವ್ ಪ್ರಾಂಗಣದ ಸಾರಾ ಅಬೂಬಕ್ಕರ್ ವೇದಿಕೆಯಲ್ಲಿ ನಡೆಯುತ್ತಿರುವ ಮೂರು ದಿನಗಳ ದ.ಕ. ಜಿಲ್ಲಾ 25ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ರವಿವಾರ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಸಂವಾದದಲ್ಲಿ ಸಾಹಿತ್ಯ, ರಂಗಭೂಮಿ, ಮಹಿಳಾ ಸಬಲೀಕರಣ ಹಾಗೂ ಶಿಕ್ಷಣದ ಬಗೆಗಿನ ಪ್ರಶ್ನೆಗಳಿಗೆ ಸಮ್ಮೇಳನಾಧ್ಯಕ್ಷೆ ಡಾ. ಹೇಮಾವತಿ ವೀ. ಹೆಗ್ಗಡೆ ಉತ್ತರಿಸಿದರು.

ಮೊದಲಿಗೆ, ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ವಿದ್ಯಾರ್ಥಿ ಶ್ಯಾಮಪ್ರಸಾದ್ ಸಮ್ಮೇಳನಾಧ್ಯಕ್ಷರಿಗೆ ರಂಗಭೂಮಿಯ ಮೇಲಿನ ಆಸಕ್ತಿಯ ಬಗ್ಗೆ ಕೇಳಿದ ಪ್ರಶ್ನೆಗೆ, “ಧರ್ಮಸ್ಥಳದ ಸಿಬ್ಬಂದಿಗಳೆಲ್ಲಾ ಸೇರಿ ವರ್ಷಕ್ಕೊಮ್ಮೆ ನಾಟಕ ಪ್ರದರ್ಶನ ನಡೆಸುತ್ತಿದ್ದರು. ಅದರ ತಯಾರಿಯ ಸಂದರ್ಭದಲ್ಲಿ ನಾನು ಅಲ್ಲಿಗೆ ಹೋಗುತ್ತಿದ್ದು, ಕ್ರಮೇಣ ನಾಟಕದ ಸಂಭಾಷಣೆಗಳು ನನಗೂ ಅಭ್ಯಾಸವಾಗುತ್ತಿತ್ತು. ಹೀಗೆ ಒಂದು ನಾಟಕಕ್ಕೆ ಒಂದು ಪಾತ್ರವನ್ನು ಸೃಷ್ಟಿಸುವ ಅವಕಾಶವೂ ಒದಗಿ ಬಂತು. ಮತ್ತು ಅದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು” ಎಂದು ಸಮ್ಮೇಳನಾಧ್ಯಕ್ಷೆ ಉತ್ತರಿಸಿದರು.

ಮಹಿಳಾ ಪ್ರತಿನಿಧಿಯಾಗಿ ಭಾಗವಹಿಸಿದ್ದ ವೇಣೂರಿನ ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಹಾಗೂ ಸಾಹಿತಿ ಸುಪ್ರಿತಾ ಚರಣ್ ಪಾಲಪ್ಪೆ, “ಸಾಮಾನ್ಯ ಮಹಿಳೆಯರಲ್ಲಿ ಸಾಹಿತ್ಯಿಕ ಆಸಕ್ತಿಯನ್ನು ಮೂಡಿಸಲು ಯಾವ ರೀತಿಯ ಕಾರ್ಯಗಳನ್ನು ಮಾಡುತ್ತೀರಿ?” ಎಂಬ ಪ್ರಶ್ನೆಗೆ, “ಹಿಂದಿನ ಕಾಲದಲ್ಲಿ ಜನಪದರು ಹೆಚ್ಚಾಗಿ ಅನಕ್ಷರಸ್ಥ ಮಹಿಳೆಯರೇ ಸಾಹಿತ್ಯವನ್ನು ರಚಿಸಿದ್ದಾರೆ. ಒಗಟು, ಗಾದೆಗಳು, ಪಾಡ್ದನಗಳು ಮತ್ತು ಅಜ್ಜಿಕತೆ ಮುಂತಾದವುಗಳಲ್ಲಿ ಮಹಿಳೆಯರೇ ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ಅದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜ್ಞಾನವಿಕಾಸದ ಸ್ವಸಹಾಯ ಸಂಘಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ರಂಗ ತರಬೇತಿಗಳನ್ನೂ ನೀಡಲಾಗುತ್ತದೆ. ಜೊತೆಗೆ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಪ್ರೋತ್ಸಾಹಿಸಲಾಗುತ್ತದೆ. ಹೀಗೆ ಸಾಹಿತ್ಯಿಕ ಮತ್ತು ಸಾಂಸ್ಕೃತಿಕವಾಗಿ ತೆರೆದುಕೊಳ್ಳುವ ಅವಕಾಶಗಳನ್ನು ನೀಡಲಾಗುತ್ತಿದೆ” ಎಂದರು.

ಸಾಹಿತ್ಯದಲ್ಲಿ ಪರಭಾಷಾ ಪ್ರಭಾವದ ಬಗೆಗಿನ ಪ್ರಶ್ನೆಗೆ, “ಹಿಂದಿನ ಕಾಲದಲ್ಲಿ ಪ್ರಕಟಗೊಳುತ್ತಿದ್ದ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡು ಓದುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ ಮಕ್ಕಳು ಕನ್ನಡ ಪದಗಳನ್ನು ಓದುವುದೇ ಕಷ್ಟವಾಗಿದೆ. ಆದ್ದರಿಂದ ಮನೆಯಲ್ಲಿ ಒಂದು ಗ್ರಂಥಾಲಯದ ವ್ಯವಸ್ಥೆ ಇರಬೇಕು. ಇದು ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಲು ಸಹಕಾರಿಯಾಗಿದೆ. ಮತ್ತು ಭಾಷೆಯಾವುದೇ ಆಗಲಿ ಸಾಹಿತ್ಯಕ್ಕೆ ತೆರೆದುಕೊಳ್ಳುವುದು ಮುಖ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.

ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಶ್ರೀಧರ ಭಟ್ ಅವರ “ಸಮ್ಮೇಳನಾಧ್ಯಕ್ಷರ ಬಾಲ್ಯದ ಸಾಹಿತ್ಯಾಸಕ್ತಿ ಹೇಗಿತ್ತು?” ಎಂಬ ಪ್ರಶ್ನೆಗೆ, “ಮನೆಯಲ್ಲಿ ಸಾಹಿತ್ಯದ ವಾತಾವರಣವಿತ್ತು. ಮನೆಯ ಹಿರಿಯರು ಸಾಹಿತ್ಯವನ್ನು ಓದಿ ಹೇಳುತ್ತಿದ್ದರು. ಕನ್ನಡ ಮಾಧ್ಯಮ ಶಾಲೆಯಲ್ಲಿ ಅಜ್ಜಿಕತೆಗಳಿಂದ ಹಿಡಿದು ರಾಮಾಯಣದವರೆಗೂ ಸಾಹಿತ್ಯವನ್ನು ತಿಳಿದುಕೊಳ್ಳುವ ಅವಕಾಶಗಳಿತ್ತು. ಇಂತಹ ಅವಕಾಶಗಳು ಈಗಿನ ಮಕ್ಕಳಿಗೆ ಅಷ್ಟಾಗಿ ಸಿಗುತ್ತಿಲ್ಲ. ಅಲ್ಲದೇ ಧರ್ಮಸ್ಥಳಕ್ಕೆ ಬಂದ ನಂತರ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಇನ್ನಷ್ಟು ಅವಕಾಶ ದೊರಕಿತು” ಎಂದು ತಿಳಿಸಿದರು.

See also  ಸಮಾಜವು ಸಾಮಾಜಿಕ ಮೌಲ್ಯಗಳನ್ನು ಮರೆತಿದೆ, ಪಾಲಕರು ಅದನ್ನು ರೂಢಿಸುವಲ್ಲಿ ವಿಫಲರಾಗಿದ್ದಾರೆ: ಎನ್ ಸಂತೋಷ್ ಹೆಗ್ಡೆ

ಮಂಗಳೂರಿನ ಆಗ್ನೆಸ್‌ ಕಾಲೇಜಿನ ಉಪನ್ಯಾಸಕ ಡಾ. ಅರುಣ್ ಉಳ್ಳಾಲ, “ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರತಿ ಸಮ್ಮೇಳನಗಳು ಏಕೆ ಹುಟ್ಟಿಕೊಳ್ಳುತ್ತಿವೆ” ಎಂಬ ಪ್ರಶ್ನೆಗೆ, “ಸಾಹಿತ್ಯ ಪ್ರೇಮಿಗಳಲ್ಲಿ ಒಂದೇ ತರನಾದ ಸಾಹಿತ್ಯ ರುಚಿ ಇರಲು ಸಾಧ್ಯವಿಲ್ಲ. ಆದ್ದರಿಂದ ಸಾಹಿತ್ಯ ಸಮ್ಮೇಳನಗಳಲ್ಲಿ ಭಿನ್ನತೆಯನ್ನು ತೋರದೇ ಸರಿದೂಗಿಸಿಕೊಂಡು ಹೋಗಬೇಕು” ಎಂದು ಉತ್ತರಿದರು.

“ಶಿಕ್ಷಣದ ಮೂಲಕ ಸಂಸ್ಕಾರಯುತ ಶಿಕ್ಷಣ ಇತರ ಭಾರತೀಯರಿಗೂ ಲಭ್ಯವಾಗುವಂತೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಯಾವ ರೀತಿಯಲ್ಲಿ ಪ್ರಯತ್ನಿಸುತ್ತಿದೆ” ಎಂಬ ಪ್ರಶ್ನೆಗೆ, “ಶಾಂತಿವನ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಸಾವಿರಾರು ಪುಸ್ತಕಗಳನ್ನು ರಾಜ್ಯದ ಹಲವು ಕಡೆಗಳಲ್ಲಿ ಮಕ್ಕಳಿಗೆ ಹಂಚಲಾಗುತ್ತಿದೆ. ಜೊತೆಗೆ ಮಕ್ಕಳನ್ನು ಕ್ಷೇತ್ರಕ್ಕೆ ಕರೆಸಿ ಅದರಲ್ಲಿರುವ ಅಂಶಗಳ ಕುರಿತಾಗಿ ಸ್ಪರ್ಧೆಗಳನ್ನು ಆಯೋಜಿಸಿ ಬಹುಮಾನಗಳನ್ನೂ ವಿತರಿಸುವ ಕಾರ್ಯ ನಡೆಯುತ್ತಿದೆ” ಎಂದು ಉತ್ತರಿಸಿದರು.

ಕಾರ್ಯಕ್ರಮವನ್ನು ಬೆಳ್ತಂಗಡಿಯ ರೋಟರಿ ಕ್ಲಬ್‌ ಅಧ್ಯಕ್ಷೆ ಮನೋರಮ ನಿರೂಪಿಸಿದರು.

ವರದಿ: ಪ್ರೀತಿ ಹಡಪದ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು