ಮೂಡುಬಿದಿರೆ: ತಾಲೂಕಿನ ದರೆಗುಡ್ಡೆಯ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಲ ಬದಿಯಲ್ಲಿರುವ, ಸ್ಥಳೀಯರು ಆನೆಕಲ್ಲು ಎಂದು ಕರೆಯುವ ಬಂಡೆಯಲ್ಲಿ ತುಳು ಶಾಸನವೊಂದನ್ನು ಉಡುಪಿಯ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ. ಕೃಷ್ಣಯ್ಯ ಅವರು ಪತ್ತೆ ಮಾಡಿರುತ್ತಾರೆ.
ಈ ಸ್ಥಳದ ಅಧ್ಯಯನ ನಡೆಸಲು ಉಡುಪಿಯ ವೇದಮೂರ್ತಿ ಸಗ್ರಿ ಗೋಪಾಲಕೃಷ್ಣ ಸಾಮಗ ಅವರು ಮಾರ್ಗದರ್ಶನ ನೀಡಿರುವರು ಎಂದು ಕೃಷ್ಣಯ್ಯ ಅವರು ತಿಳಿಸಿರುತ್ತಾರೆ. ದೇವಾಲಯದ ಜೀರ್ಣೋದ್ಧಾರದ ಹಿನ್ನಲೆಯಲ್ಲಿ ಈ ಬಂಡೆಯ ಸುತ್ತಲೂ ಮಣ್ಣು ಜಮಾವಣೆಯಾಗಿದ್ದು, ಪ್ರಸ್ತುತ ಈ ಶಾಸನದಲ್ಲಿ 5 ರಿಂದ 6 ಸಾಲಿನ ಅಸ್ಪಷ್ಟ ತುಳು ಲಿಪಿಯು ಗೋಚರವಾಗಿದ್ದು ಉಳಿದ ಸಾಲುಗಳು ಮಣ್ಣಿನಲ್ಲಿ ಹೂತುಹೋಗಿದೆ.
ಈ ಶಾಸನದ ಹೆಚ್ಚುವರಿ ಅಧ್ಯಯನವನ್ನು ಮುಂದಿನ ದಿನಗಳಲ್ಲಿ ಮಾಡಲಾಗುವುದು ಎಂದು ಕೃಷ್ಣಯ್ಯ ಅವರು ತಿಳಿಸಿದ್ದಾರೆ. ಶಾಸನದ ಪ್ರಾಥಮಿಕ ಅಧ್ಯಯನವನ್ನು ಮಾಡಿರುವ ತುಳುಲಿಪಿ ಶಾಸ್ತ್ರಜ್ಞರಾದ ಡಾ. ರಾಧಾಕೃಷ್ಣ ಬೆಳ್ಳೂರು ಅವರು ಲಿಪಿಯ ಆಧಾರದ ಮೇಲೆ ಈ ಶಾಸನವು 12-13ನೇ ಶತಮಾನಕ್ಕೆ ಸೇರಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಷೇತ್ರಕಾರ್ಯ ಶೋಧನೆಗೆ ರವಿ ಸಂತೋಷ್ ಆಳ್ವ ಮತ್ತು ಸ್ಥಳೀಯರು ಸಹಕಾರ ನೀಡಿರುತ್ತಾರೆ.