ಬಂಟ್ವಾಳ: ಚುನಾವಣೆಯ ದಿನ ಘೋಷಣೆಯಾಗಿಲ್ಲ, ಅಭ್ಯರ್ಥಿಗಳು ಯಾರ್ಯಾರು ಎಂಬುದನ್ನೂ ಪ್ರಮುಖ ಪಕ್ಷಗಳು ಅಧಿಕೃತ ಗೊಳಿಸಿಲ್ಲ, ಆದರೂ ಬಂಟ್ವಾಳದಲ್ಲಿ ಅಘೋಷಿತ ಚುನಾವಣೆಯ ಬಿಸಿ ಕಾವೇರುತ್ತಿದೆ.
ಹೌದು.. ಇದು ದಕ್ಷಿಣ ಕನ್ನಡಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಬಂಟ್ವಾಳ ದ ಪ್ರಸ್ತುತ ನೋಟ. ಹಾಗೆ ನೋಡಿದರೆ ಕಳೆದ 2022 ರಿಂದಲೇ 2023 ರ ಚುನಾವಣೆಗೆ ಕಾಂಗ್ರೇಸ್,ಬಿಜೆಪಿ ಹಾಗೂ ಎಸ್ ಡಿ ಪಿ ಐ ಪಕ್ಷಗಳು ಪೂರ್ವ ಭಾವಿಸಿದ್ಧತೆಗಳನ್ನು ಆರಂಭಿಸಿದ್ದು, ಚುನಾವಣಾ ದಿನ ಘೋಷಣೆಯಾಗಲು ಕೆಲವೇ ದಿನಗಳು ಬಾಕಿ ಇರುವಂತೆಯೇ ಪರಸ್ಪರ ಆರೋಪ ಪ್ರತ್ಯಾರೋಪಗಳೂ ಜೋರಾಗುತ್ತಿದೆ.
ಸಾಮಾಜಿಕ ಜಾಲತಾಣಗಳೇ ಪ್ರಚಾರ ವೇದಿಕೆ
ವರ್ಷದ ಹಿಂದೆಯೇ 2023 ರ ಚುನಾವಣೆ ಎಂದು ಬೊಟ್ಟು ಮಾಡಿಕೊಂಡಿದ್ದ ರಾಜಕೀಯ ಪಕ್ಷಗಳು ಸಾಮಾಜಿಕಜಾಲತಾಣಗಳನ್ನೇ ತಮ್ಮ ಪ್ರಚಾರ ವೇದಿಕೆಯಾಗಿ ಬಳಸಿಕೊಳ್ಳುತ್ತಿದೆ ಮಾತ್ರವಲ್ಲದೆ ಪಕ್ಷಗಳ ಆಂತರಿಕ ಬಲವರ್ಧನೆಗೆ ಬೂತ್ ಮಟ್ಟದಲ್ಲಿ ಹಲವು ಕಾರ್ಯಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಫೇಸ್ ಬುಕ್, ವಾಟ್ಸಾಫ್ ಗ್ರೂಪ್ ಗಳಲ್ಲಿ ಚುನಾವಣೆಯನ್ನು ಸಮೀಕರಣ ಗೊಳಿಸಿ ಪೋಸ್ಟ್ ಗಳನ್ನು ಹಾಕುವ ಪಕ್ಷಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿನ ತಮ್ಮ ಪಕ್ಷಗಳ ಆಗುಹೋಗುಗಳನ್ನೂ ಪ್ರಚಾರಮಾಡುತ್ತಿವೆ..
ರಾಜೇಶ್ ನಾಯ್ಕ್ -ರಮಾನಾಥ ರೈ ನಡುವೆ ಮೂರನೇ ಸ್ಪರ್ಧೆ…??
ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್ ಡಿ ಪಿಐ ಪಕ್ಷ ಅಧಿಕೃತವಾಗಿ ತನ್ನ ಅಭ್ಯರ್ಥಿಯಾಗಿ ಇಲಿಯಾಸ್ ತುಂಬೆ ಅವರ ಹೆಸರನ್ನು ಘೋಷಿಸಿದ್ದು, ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ಒಂದೆಡೆ ಬಿಜೆಪಿಯಿಂದ ಹಾಲಿ ಶಾಸಕ ರಾಜೇಶ್ ನಾಯ್ಕ್ ಅವರೇ ಮತ್ತೆ ಸ್ಪರ್ಧೆಗಳಿಯುವುದು ನಿಶ್ಚಿತವಾಗಿದ್ದು, ಇತ್ತೀಚೆಗೆ ನಡೆದ ಶಾಸಕರ ಪಾದಯಾತ್ರೆ ಸಂದರ್ಭ ಪಕ್ಷದ ಪ್ರಮುಖರು ರಾಜೇಶ್ ನಾಯ್ಕ್ ಮರು ಸ್ಪರ್ಧೆಯ ಸೂಚನೆ ನೀಡಿದ್ದರು. ಮತ್ತೊಂದೆಡೆ ಕಾಂಗ್ರೇಸ್ ನಿಂದ ಮಾಜಿ ಸಚಿವ ಬಿ.ರಮಾನಾಥ ರೈ ಯವರ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗುತ್ತಿದ್ದು ಇದಕ್ಕೆ ಪೂರಕವಾಗಿ ಅವರೂ ಕ್ಷೇತ್ರ ವ್ಯಾಪ್ತಿಯಲ್ಲಿ ಓಡಾಟ ನಡೆಸುತ್ತಿದ್ದಾರೆ. ಕಾಂಗ್ರೇಸ್ ಬಿಜೆಪಿ ಯಿಂದ ಅಭ್ಯರ್ಥಿ ಗಳ ಘೋಷಣೆ ಅಧಿಕೃತ ವಾಗದೇ ಇದ್ದರೂ, ರೈ-ನಾಯ್ಕ್ ಅವರ ಹೆಸರುಗಳೇ ಬಲವಾಗಿ ಕೇಳಿ ಬರುತ್ತಿದೆ. ಒಂದು ವೇಳೆ ಇದು ನಿಜವಾದರೆ ಇದು ಇವರಿಬ್ಬರ ನಡುವಿನ ಮೂರನೇ ಚುನಾವಣಾ ಕಾಳಗ ಎಂದು ಹೇಳಲಾಗುತ್ತಿದೆ.
ಕ್ಷೇತ್ರದಲ್ಲಿ ಕಾಂಗ್ರೇಸ್-ಬಿಜೆಪಿಯದ್ದು “ಹಾವು ಏಣಿ” ಆಟ
ಜಿಲ್ಲೆಯ ಹಿರಿಯ ಕಾಂಗ್ರೇಸ್ ನಾಯಕನಾಗಿ ಗುರುತಿಸಿಕೊಂಡಿರುವ ರಮಾನಾಥ ರೈಯವರನ್ನು 2004 ರ ಚುನಾವಣೆಯಲ್ಲಿ ಬಿಜೆಪಿಯ ನಾಗರಾಜ ಶೆಟ್ಟಿ ಯವರು ಮೊದಲ ಬಾರಿಗೆ ಸೋಲಿಸಿದ್ದು, ಇದಕ್ಕೆ ಪ್ರತಿಯಾಗಿ 2008 ರ ಚುನಾವಣೆಯಲ್ಲಿ ನಾಗರಾಜ ಶೆಟ್ಟಿಯವರನ್ನು ರಮಾನಾಥ ರೈ ಯವರು ಸೋಲಿಸಿ ಮತ್ತೆ ಅಧಿಕಾರ ಪಡೆದುಕೊಂಡಿದ್ದರು.
2013 ರ ಚುನಾವಣೆಯಲ್ಲಿ ರಮಾನಾಥ ರೈ ವಿರುದ್ದ ರಾಜೇಶ್ ನಾಯ್ಕ್ ಅವರು ಮೊದಲ ಬಾರಿಯ ಸ್ಪರ್ಧೆ ನೀಡಿದ್ದು, ರಮಾನಾಥ ರೈ ಮತ್ತೆ ವಿಜಯಿಯಾಗುವ ಮೂಲಕ ತನ್ನ ಹಿರಿಮೆ ಸಾಧಿಸಿದ್ದರು. ಆದರೆ ಮುಯ್ಯಿಗೆ ಮುಯ್ಯಿ ಎಂಬಂತೆ ನಂತರದ 2018 ರ ಚುನಾವಣೆಯಲ್ಲಿ ರಮಾನಾಥ ರೈ ಯವರನ್ನು ಸೋಲಿಸಿದ ರಾಜೇಶ್ ನಾಯ್ಕ್ ಅವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ವಿಧಾನ ಸಭೆ ಪ್ರವೇಶಿಸಿದರು.
ಇದೀಗ ಮತ್ತೆ 2023ರ ಚುನಾವಣೆ ಹತ್ತಿರ ಬರುತ್ತಿದ್ದು, ಅಭ್ಯರ್ಥಿಗಳ ಅಧಿಕೃತ ಘೋಷಣೆಯಾದ ಬಳಿಕ ಚುನಾವಣೆಯ ಕಾವು ಮತ್ತಷ್ಟು ಏರಲಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ನಾಮಪತ್ರ ಎಸ್ ಡಿ ಪಿಐ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತಾದರೂ ಕೊನೇ ಕ್ಷಣದಲ್ಲಿ ನಾಮಪತ್ರವನ್ನು ವಾಪಸು ಪಡೆದಿತ್ತು. ಹೀಗಾಗಿ ರೈ- ನಾಯ್ಕ್ ನಡುವೆ ಮುಖಾಮುಖಿಸ್ಪರ್ಧೆ ನಡೆದಿತ್ತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ ಎಂದು ಎಸ್ ಡಿಪಿ ಐ ಹೇಳಿಕೊಂಡಿದ್ದು, ಮುಂದಿನ ಬೆಳವಣಿಗೆಗಳನ್ನು ಕಾದುನೋಡಬೇಕಾಗಿದೆ.