ಬಂಟ್ವಾಳ: ತಾಲೂಕು ಕೇಪು ಗ್ರಾಮದ ಕಲ್ಲಂಗಳ ನಿವಾಸಿಯಾಗಿರುವ ರಾಜೇಶ್ ರೈ ಕಲ್ಲಂಗಳ (48) ಇವರು ರಾಜ್ಯಪಾಲರಿಂದ ಸಂಜೆ 6.30 ಗಂಟೆಗೆ ಸರಿಯಾಗಿ ರಾಜಭವನದ ಗಾಜಿನ ಮನೆಯಲ್ಲಿ ಮುಖ್ಯಮಂತ್ರಿಗಳ ಮತ್ತು ಮುಖ್ಯ ನ್ಯಾಯಮೂರ್ತಿಗಳ ಉಪಸ್ಥಿತಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಜೇಶ್ ರೈ ಕಲ್ಲಂಗಳ ಅವರು ಕಲ್ಲಂಗಳ ಗುತ್ತು ದಿ.ವಾಸಪ್ಪ ಪೆರ್ಗಡೆ ಮತ್ತು ದಿ.ಜಲಜಾಕ್ಷಿ ಶೆಟ್ಟಿಯವರ ತೃತೀಯ ಪುತ್ರರಾಗಿದ್ದು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೇಪು ಮತ್ತು ಪ್ರೌಢ ಶಿಕ್ಷಣವನ್ನು ಪದವಿಪೂರ್ವ ಕಾಲೇಜು ವಿಟ್ಲ ಪದವಿ ಶಿಕ್ಷಣವನ್ನು ಸೈಂಟ್ ಕಿಲೋಮಿನ ಕಾಲೇಜ್ ಪುತ್ತೂರು, ತದನಂತರ ತನ್ನ ಕಾನೂನು ಪದವಿಯನ್ನು ವಿವೇಕಾನಂದ ಕಾನೂನು ಕಾಲೇಜು ಪುತ್ತೂರು ಇಲ್ಲಿ ಮುಗಿಸಿರುತ್ತಾರೆ.
ತದನಂತರ ಬೆಂಗಳೂರಿನಲ್ಲಿ ತನ್ನ ವಕೀಲ ವೃತ್ತಿಯನ್ನು ಆರಂಭಿಸಿ ರಾಜ್ಯ ಸರಕಾರದ ವಕೀಲರಾಗಿ, ಕೇಂದ್ರ ಸರಕಾರದ ಹಿರಿಯ ವಕೀಲರಾಗಿ, ಜಾರಿ ನಿರ್ದೇಶನಾಲಯ ಮತ್ತು ಎನ್ ಸಿಬಿ ಇದರ ಉಚ್ಚ ನ್ಯಾಯಾಲಯದ ವಿಶೇಷ ಅಭಿ ಯೋಜನಾಧಿಕಾರಿಯಾಗಿ ಕಳೆದ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು ಮಾತ್ರವಲ್ಲದೇ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ವಕೀಲರಾಗಿ ಸೇವೆ ಸಲ್ಲಿಸಿದ್ದಾರೆ.
ಬಾಲ್ಯದಿಂದಲೇ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದು ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು.
ಕಲಾ ಪೋಷಕರಾಗಿದ್ದು ಯಕ್ಷಗಾನ ಮತ್ತು ಇತರೆ ಕಲೆಗಳ ಬಗ್ಗೆ ಬಹಳಷ್ಟು ಅಭಿಮಾನ ಹೊಂದಿರುತ್ತಾರೆ, ರಾಜೇಶ್ ರೈ ಕಲ್ಲಂಗಳ ಇವರು ಬೆಂಗಳೂರಿನಲ್ಲಿ ಕಳೆದ 23 ವರ್ಷಗಳಿಂದ ವಾಸವಾಗಿದ್ದು, ಪತ್ನಿ ರೇಷ್ಮಾ ರಾಜೇಶ್ ಮತ್ತು ಇಬ್ಬರು ಮಕ್ಕಳು ಸಾನಿಧ್ಯ ಆರ್ ರೈ ಮತ್ತು ಶಾಶ್ವತ್ ಆರ್ ರೈ ಜೊತೆಯಲ್ಲಿ ವಾಸವಾಗಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅತಿ ಸಣ್ಣ ವಯಸ್ಸಿನಲ್ಲಿ ಆಯ್ಕೆಗೊಂಡ ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಪ್ರಥಮ ಮತ್ತು ಅತಿ ಚಿಕ್ಕ ವಯಸ್ಸಿನ ಹೈಕೋರ್ಟ್ ನ್ಯಾಯಮೂರ್ತಿ ಎಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತಿಹಾಸದಲ್ಲಿ ನೇರವಾಗಿ ಅತಿ ಸಣ್ಣ ವಯಸ್ಸಿನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡ ಮೊದಲಿಗರಾಗಿದ್ದಾರೆ.