ಬೆಳ್ತಂಗಡಿ: ದೇವರು ಮತ್ತು ದೇಶವನ್ನು ಒಂದೇ ರೀತಿ ಕಾಣುವ ಜಗತ್ತಿನ ಅತ್ಯಂತ ಶ್ರೇಷ್ಠ ಧರ್ಮವಿದ್ದರೇ ಅದು ಹಿಂದೂ ಧರ್ಮ ಮಾತ್ರ. ಇಂತಹ ಪವಿತ್ರ ಹಿಂದೂ ಧರ್ಮ ಇಂದು ಆಕ್ರಮಣಕ್ಕೆ ಒಳಗಾಗುತ್ತಿದೆ. ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸನಾತನ ಧರ್ಮದ ಪರಂಪರೆಯ ಉಳಿವಿಗಾಗಿ ಸಂಕಲ್ಪ ತೊಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಆಮಂತ್ರಿತ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ನುಡಿದರು.
ಅವರು ಗುರುವಾರ ಅಳದಂಗಡಿ ಶ್ರೀ ಮಹಾ ಗಣಪತಿ ದೇವರ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಪ್ರಕೃತಿಯ ಆರಾಧನೆಯಿಂದ ದೈವತ್ವವನ್ನು ಕಾಣುವ ಶಕ್ತಿ ನಮ್ಮ ಮಣ್ಣಿಗಿದೆ. ಇಂದಿನ ಯುವ ಸಮಾಜಕ್ಕೆ ರಾಮಾಯಣ, ಮಹಾಭಾರತ, ಭಗವದ್ಗೀತೆಯ ಬಗ್ಗೆ ಒಲವು ಕಡಿಮೆಯಾಗಿದೆ. ನಮ್ಮ ತಾಯಂದಿರು ಈ ದೇಶದ ಶಕ್ತಿ. ಸನಾತನ ಹಿಂದೂ ಧರ್ಮದ ಪರಂಪರೆಯನ್ನು ಯುವ ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು. ಆ ಮುಖೇನ ನಮ್ಮ ಮನೆಗಳು ಧರ್ಮ, ಸಂಸ್ಕೃತಿ ಉಳಿಸುವ ಶ್ರದ್ದಾ ಕೇಂದ್ರಗಳಾಗಬೇಕು ಎಂದರು. ಅಳದಂಗಡಿ ಅರಮನೆಯ ಡಾ.ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು.
ನಾವೂರು ಆರೋಗ್ಯ ಕ್ಲಿನಿಕ್ ನ ಡಾ.ಪ್ರದೀಪ್ ನಾವೂರು ಮಾತನಾಡಿ ನಮ್ಮ ದೇವಸ್ಥಾನಗಳು ಪೂಜಾ ಕೈಂಕರ್ಯಗಳಿಗೆ ಮಾತ್ರ ಸೀಮಿತವಲ್ಲ, ನಮ್ಮ ಧರ್ಮದ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಪಡಿಸುವ ಶ್ರದ್ದಾಕೇಂದ್ರಗಳಾಗಬೇಕು. ಮಕ್ಕಳಿಗೆ 12 ವರ್ಷ ತುಂಬುವ ಮುಂಚೆ ಧರ್ಮಶಿಕ್ಷಣ ನೀಡಬೇಕು. ಅದು ಜೀವನಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದರು.
ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಮಾತನಾಡಿ ಅಜಿಲ ಸೀಮೆಯ ಬಹುತೇಕ ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರಗೊಂಡು ಬ್ರಹ್ಮಕಲಶೋತ್ಸವ ನಡೆದಿರುವುದರಿಂದ ಇಡೀ ಸೀಮೆ ಬೆಳಗಿದೆ. ನರೇಂದ್ರ ಮೋದೀಜಿಯವರು ಈ ದೇಶದ ಪ್ರಧಾನಿಯಾದ ನಂತರ ದೇವಾಲಯಗಳು ಪ್ರಗತಿಯಾಗಿ ಹಿಂದೂ ಸಮಾಜಕ್ಕೆ ಶಕ್ತಿ ತುಂಬಿದೆ. ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ ಶಾಸಕರಾದ ನಂತರ ಇಲ್ಲಿನ ಧಾರ್ಮಿಕ ಕ್ಷೇತ್ರಗಳು ಪ್ರಜ್ವಲಿಸಿ ಹಿಂದೂ ಸಮಾಜಕ್ಕೆ ಶಕ್ತಿ ಪ್ರೇರಣೆ ಸಿಕ್ಕಿದೆ ಎಂದರು.
ವೇದಿಕೆಯಲ್ಲಿ ಬೆಂಗಳೂರು ಸಾನ್ವಿ ಗ್ರೂಪ್ ಆಫ್ ಕಂಪೆನಿ ಮತ್ತು ಅನ್ನಪೂರ್ಣ ಹಾಸ್ಪಿಟಾಲಿಟಿ ಸರ್ವಿಸಸ್ ಸಿಇಒ ಹರೀಶ್ ಶೆಟ್ಟಿ ಕಂರ್ಬಿತ್ತಿಲ್, ಪ್ರಗತಿಪರ ಕೃಷಿಕ ಶ್ರೀನಿವಾಸ್ ರಾವ್ ದೊರಿಂಜ, ಮಂಗಳೂರು ಉದ್ಯಮಿ ಸದಾನಂದ ಎಂ ನಾವರ, ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ವಿಜಯಕೃಷ್ಣ ಐತಾಳ್ ಸರಪಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಂಗಾಧರ ಮಿತ್ತಮಾರು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸದಾನಂದ ಪೂಜಾರಿ ಉಂಗೀಲಬೈಲು, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ನೊಚ್ಚ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ, ಕೋಶಾಧಿಕಾರಿ ಅನಿಲ್ ಕೊಟ್ಟಾರಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಶಶಿಧರ ಡೋಂಗ್ರೆ ಸ್ವಾಗತಿಸಿದರು, ಯುವ ಸಾಹಿತಿ ಚಂದ್ರಹಾಸ ಬಳಂಜ ನಿರೂಪಿಸಿದರು. ನಂತರ ಉಮೇಶ್ ಮಿಜಾರು ಸಾರಥ್ಯದಲ್ಲಿ ನಮ್ಮ ಕಲಾವಿದೆರ್ ಬೆದ್ರ ಅಭಿನಯದ ತುಳು ನಾಟಕ ಕುಸಲ್ದ ಗೊಬ್ಬು ಪ್ರದರ್ಶನಗೊಂಡಿತು.