ಮಂಗಳೂರು: ಸಂದೇಶ ಫೌಂಡೇಶನ್ ಮತ್ತು ಸಿಗ್ನಿಸ್ ಕರ್ನಾಟಕ ಮತ್ತು ಸ್ಪಿಯರ್ ಹೆಡ್ ಅಕಾಡೆಮಿ ಸಹಯೋಗದಲ್ಲಿ ಬುಧವಾರ “ನೈತಿಕ ಮಾಧ್ಯಮದ ಕಡೆಗೆ” ಕುರಿತು ಒಂದು ದಿನದ ಸೆಮಿನಾರ್ ಸಂದೇಶ ಕ್ಯಾಂಪಸ್‌ನಲ್ಲಿ ನಡೆಯಿತು.
ಪತ್ರಿಕೋದ್ಯಮದದಲ್ಲಿ ನೈತಿಕ ಮೌಲ್ಯಗಳನ್ನು ಸಮಾಜಕ್ಕೆ ಮನವರಿಕೆ ಮಾಡುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಸೆಮಿನಾರ್ ಆಯೋಜಿಸಲಾಗಿತ್ತು. ಬೆಳಗ್ಗೆ 9.30ಕ್ಕೆ ನಿರೂಪಕ ಫಾ.ಸುನಿಲ್ ದಂಡವಟ್ಟಿ ಅವರ ಪರಿಚಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸಂದೇಶ ಸಂಸ್ಥೆ ನಿರ್ದೇಶಕ ಮತ್ತು ವಿಚಾರ ಸಂಕಿರಣ ಸಂಚಾಲಕ ಫಾದರ್ ಸುದೀಪ್ ಪೌಲ್ ವಿಚಾರ ಸಂಕಿರಣದ ಅಗತ್ಯ, ಆಶಯಗಳನ್ನು ವಿವರಿಸಿದರು.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಗಣ್ಯರಿಂದ ದೀಪ ಬೆಳಗಿಸುವುದರೊಂದಿಗೆ ಮತ್ತು ಸ್ಪೀಡ್ ಅಕಾಡೆಮಿಯ ಉಪಪ್ರಾಂಶುಪಾಲ ರೋಷನ್ ಎಚ್ ರಾಜ್ ಅವರ ನೇತೃತ್ವದಲ್ಲಿ ಅಂತರ್ಧರ್ಮೀಯ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಡಾ. ಮೋಸ್ಟ್ ಹೆನ್ರಿ ಡಿಸೌಜಾ, ಬಿಷಪ್ ಬಳ್ಳಾರಿ, ಸಿಗ್ನಿಸ್ ಇಂಡಿಯಾ ಅಧ್ಯಕ್ಷ ಫಾದರ್ ವಿಕ್ಟರ್ ವಿಜಯ್ ಲೋಬೊ, ವಿಲೇಜ್ ಟಿವಿಯ ಮ್ಯಾನೇಜಿಂಗ್ ಟ್ರಸ್ಟಿ ಕೆನ್ಯೂಟ್ ಜೀವನ್ ಪಿಂಟೋ, ಸಿಗ್ನಿಸ್ ಕರ್ನಾಟಕ ಕಾರ್ಯದರ್ಶಿ ಫಾದರ್ ರಿಚರ್ಡ್ ಡಿಸೋಜ ಉಪಸ್ಥಿತರಿದ್ದರು.
ಸಂದೇಶ ಫೌಂಡೇಶನ್ ಅಧ್ಯಕ್ಷ, ಬಳ್ಳಾರಿಯ ಬಿಷಪ್ ರೆವರೆಂಡ್ ಡಾ.ಹೆನ್ರಿ ಡಿಸೋಜಾ ಮಾತನಾಡಿ, ಮಾಧ್ಯಮಗಳು ನಿಖರವಾಗಿರಬೇಕು ಮತ್ತು ವಾಸ್ತವಿಕ ಮಾಹಿತಿಯನ್ನು ನೀಡಬೇಕು ಎಂದು ಕರೆ ನೀಡಿದರು. ಉದಾಹರಣೆಗಳ ಮೂಲಕ ಸತ್ಯ ತಿರುಚುವ ಬಗ್ಗೆ ವಿವರಿಸಿದರು. ವಾಸ್ತವ ವಿಚಾರಗಗಳನ್ನು ಸಮಾಜಕ್ಕೆ ವಿವರಿಸುವ ವಾಹಕರಾಗಬೇಕೇ ಹೊರತು ಅತಿರಂಜಿತ ವರದಿಗಳ ಮೂಲಕ ಸಮಾಜದ ದಿಕ್ಕು ತಪ್ಪಿಸಬಾರದು ಎಂದರು.
ಸೆಮಿನಾರ್ ನಾಲ್ಕು ಅಧಿವೇಶನಗಳಲ್ಲಿ ನಡೆಯಿತು. ಪ್ರತಿ ಅಧಿವೇಶಗನಗಳಲ್ಲಿ ಎರಡೂ ವಿಷಯಗಳನ್ನು ಚರ್ಚಿಸಲಾಯಿತು. ಶಿಕ್ಷಣ ತಜ್ಞರು ಮತ್ತು ಪತ್ರಿಕೋದ್ಯಮ ವೃತ್ತಿಯ ವಿವಿಧ ತಜ್ಞರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ‘ಭಾರತೀಯ ಸುದ್ದಿ ಮಾಧ್ಯಮದ ನೈತಿಕತೆ’, ‘ಪತ್ರಿಕೋದ್ಯಮದಲ್ಲಿ ನೈತಿಕತೆ ಮರುಸ್ಥಾಪನೆ, ನಿಖರತೆ ಮತ್ತು ಪರಿಶೀಲನೆ’, ‘ಸ್ವಾತಂತ್ರ್ಯ ಮತ್ತು ನಿಷ್ಠೆ’, ‘ಮೋಸ ಮತ್ತು ಕಟ್ಟುಕತೆ’, ‘ಗ್ರಾಫಿಕ್ಸ್ ಮತ್ತು ಇಮೇಜ್ ಮ್ಯಾನಿಪ್ಯುಲೇಶನ್’, ‘ಮೂಲ ಮತ್ತು ಗೌಪ್ಯತೆ’ ಮತ್ತು ‘ನೈತಿಕತೆ ಮತ್ತು ನಾಗರಿಕ ಪತ್ರಿಕೋದ್ಯಮ ವಿಷಯದ ಕುರಿತು ಚರ್ಚೆ ನಡೆಯಿತು.
ಸೆಮಿನಾರ್ ನಲ್ಲಿ 80 ಕ್ಕೂ ಹೆಚ್ಚು ವಿದ್ವಾಂಸರು, ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಸ್ತುತ ಪತ್ರಿಕೋದ್ಯಮದ ವಿದ್ಯಮಾನ ಕುರಿತು ಸಂವಾದ ನಡೆಯಿತು. ಸಂಪನ್ಮೂಲ ವ್ಯಕ್ತಿಗಳು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡು ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಮರ್ಥ ಪತ್ರಿಕೋದ್ಯಮ ವೇದಿಕೆಯ ಅಗತ್ಯವನ್ನು ಪ್ರಸ್ತುಪಡಿಸುವಲ್ಲಿ ಸೆಮಿನಾರ್ ಯಶಸ್ವಿಯಾಯಿತು.
ಸಮಾರೋಪ: ವಿಚಾರ ಸಂಕಿರಣದ ಸಮಾರೋಪದಲ್ಲಿಸಂದೇಶ ಫೌಂಡೇಶನ್ ನ ಟ್ರಸ್ಟಿ ರಾಯ್ ಕ್ಯಾಸ್ಟಲಿನೊ ಸಮಾರೋಪ ಭಾಷಣ ಮಾಡಿದರು.
ಸಮಾಜದ ಹಿತ ಕಾಯಬೇಕಾದ ಪತ್ರಿಕೋದ್ಯಮ ವ್ಯಾಪರೀಕರಣಗೊಳ್ಳುತ್ತಿದೆ. ನೈತಿಕತೆಯನ್ನು ಕಳೆದುಕೊಂಡು ಅಧಃಪತನದ ಹಾದಿ ಹಿಡಿದಿದೆ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಯ್ದುಕೊಳ್ಳುವ ಅಗತ್ಯ ಹಿಂದಿಗಿಂತ ಹೆಚ್ಚಿದೆ ಎಂದರು.
ಪ್ರಮಾಣಪತ್ರ: ಸೆಮಿನಾರ್‌ನಲ್ಲಿ ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಯಿತು.