ಮಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ವತಿಯಿಂದ ನೀಡಲಾಗುವ 2019, 2020, 2021, ಮತ್ತು 2022 ನೇ ಸಾಲಿನ ಮಾಧ್ಯಮ ವಾರ್ಷಿಕ ಪ್ರಶಸ್ತಿ ಮತ್ತು ದತ್ತಿ ಪ್ರಶಸ್ತಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆಗೈದ ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ. ಒಟ್ಟು 145 ಸಾಧಕ ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ.
ದಕ್ಷಿನ ಕನ್ನಡ ಜಿಲ್ಲೆಯಿಂದ ಹಿರಿಯ ಪತ್ರಕರ್ತರಾದ ಕೆ. ಆನಂದ ಶೆಟ್ಟಿ, ಪಿ.ಬಿ. ಹರಿಪ್ರಸಾದ್ ರೈ, ಗುರುವಪ್ಪ ಎನ್ ಟಿ ಬಾಳೇಪುಣಿ, ಆರ್ ರಾಮಕೃಷ್ಣ, ಬಿ. ರವೀಂದ್ರ ಶೆಟ್ಟಿ, ಶ್ರೀನಿವಾಸ ನಾಯಕ್ ಇಂದಾಜೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯವರಾದ ಸುರೇಶ್ ಬೆಳಗಜೆ, ರವಿಪ್ರಕಾಶ್, ಸುಧಾಕರ ದರ್ಬೆ, ಸುಕನ್ಯ, ಜ್ಯೋತಿ ಇರ್ವತ್ತೂರು, ಮೊದಲಾದವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ದ.ಕ.ಜಿಲ್ಲೆಯ ಗಿರೀಶ್ ರಾವ್ (ಜೋಗಿ) 2019ನೇ ಸಾಲಿನ ಅರಗಿಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮೈಸೂರು ದಿಗಂತ ಪ್ರಶಸ್ತಿ ಪ್ರದೀಶ್ ಎಚ್ ಮರೋಡಿಯವರ ಲೇಖನಕ್ಕೆ ಲಭಿಸಿದೆ. 2022 ನೇ ಸಾಲಿನ ಅತ್ಯುತ್ತಮ ಜಿಲ್ಲಾ ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಗೆ ಜಯಕಿರಣ ದಿನ ಪತ್ರಿಕೆ ಆಯ್ಕೆಯಾಗಿದೆ.
ವಾರ್ಷಿಕ ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ ನಗದು, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು. ಪ್ರಶಸ್ತಿ ಪ್ರದಾನ ನೆರವೇರಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರ ಸಚಿವರನ್ನು ಹಾಗೂ ಗಣ್ಯರನ್ನು ಆಹ್ವಾನಿಸಲಾಗುತ್ತದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೈಣೈ ಕೆ ತಿಳಿಸಿದ್ದಾರೆ.