ಮಂಗಳೂರು: ರಾಜ್ಯ ವಿಧಾನ ಸಭೆಗೆ ಚುನಾವಣೆಗೆ ದಿನಾಂಕ ಘೋಷಣೆಗೆ ಕ್ಷಣಗಣನೇ ಆರಂಭವಾಗಿದ್ದು, ಈ ಸಮಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಮಹತ್ವ ಪಡೆದುಕೊಂಡಿದೆ. ಹಿಂದುತ್ವದ ಭದ್ರಕೋಟೆಯಾಗಿದ್ದ ಪುತ್ತೂರಿನಲ್ಲಿ ಹಿಂದುತ್ವದ ಸಂಘಟನೆಗಳು ಪಕ್ಷದ ನಡುವಿನ ಸಂಬಂಧ ಈ ಹಿಂದಿನಂತಿಲ್ಲ ಎಂಬ ಮಾತಿದೆ.
ಪ್ರವೀಣ್ ನೆಟ್ಟಾರು ಹತ್ಯೆ ವೇಳೆ ನಳಿನ್ ಸೇರಿದಂತೆ ಬಿಜೆಪಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಅಲ್ಲದೆ ಸಂಸದ ನಳೀನ್ ಕುಮಾರ್ ಕಟೀಲ್ ಮೃತದೇಹದ ಮೆರವಣಿಗೆಗೆ ಸ್ಥಳಕ್ಕೆ ಆಗಮಿಸಿದ ವೇಳೆ ಅವರ ವಾಹನದ ಮೇಲೆ ಕಾರ್ಯಕರ್ತರು ದಾಳಿ ನಡೆಸಿದ್ದನ್ನು ಮರೆಯುವಂತಿಲ್ಲ. ಈ ಎಲ್ಲ ಕಾರಣದಿಂದ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವವರಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಸಾಕಷ್ಟಿದೆ.
ಪಕ್ಷದ ಆಂತರಿಕ ಸಮೀಕ್ಷೆಯಲ್ಲಿಯೂ ಪುತ್ತೂರು ಮತ್ತು ಸುಳ್ಯದಲ್ಲಿ ಪಕ್ಷಕ್ಕೆ ಕಾಂಗ್ರೆಸ್‌ನಿಂದ ತೀವ್ರ ಪೈಪೋಟಿ ಎದುರಿಸಬೇಕಾದ ಅಂಶಗಳು ಉಲ್ಲೇಖವಾಗಿರುವುದು ರಾಷ್ಟ್ರೀಯ ನಾಯಕರ ಚಿಂತೆಗೆ ಕಾರಣವಾಗಿದೆ. ಅಲ್ಲದೆ ಸುಳ್ಯದಿಂದ 6 ಬಾರಿ ಗೆಲುವು ಸಾಧಿಸಿದ ಅಂಗಾರ ಅವರನ್ನು ಬದಲಾಯಿಸುವ ಅಂಶಗಳು ಪಕ್ಷದ ಸಮೀಕ್ಷೆಯಲ್ಲಿದೆ.
ಜಾತಿ ಆಧಾರದ ಮೇಲೆ ಟಿಕೆಟ್ ಖಾತ್ರಿ ಪಡಿಸುವಂತೆ ಪ್ರಬಲ ಸಮುದಾಯದ ನಾಯಕರು, ಧಾರ್ಮಿಕ ಮುಖಂಡರು ನಿರಂತರ ಒತ್ತಡ ಹೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯತಂತ್ರ ಹೆಣೆಯಬೇಕಿದೆ.
ಅಡಕೆ ಕೃಷಿಕರಿಗೆ ಸಿಹಿ ನೀಡುವರೇ: ದಕ್ಷಿಣ ಕನ್ನಡದಲ್ಲಿ ಪುತ್ತೂರು ಹೆಚ್ಚು ಅಡಕೆ ಬೆಳೆಯುವ ಪ್ರದೇಶ, ಸಮಾವೇಶದ ನೆಪದಲ್ಲಿ ಕೃಷಿಕರನ್ನು ಪಕ್ಷಕ್ಕೆ ಸೆಳೆಯುವ ಪ್ರಮುಖ ವಿಷಯಗಳಲ್ಲೊಂದು. ಅಡಕೆ ಕ್ಯಾನ್ಸರ್ ಕಾರಕ ಎಂಬ ವರದಿಗಳು ಆಗಾಗ್ಗೆ ಕೇಳಿಬರುತ್ತಿದ್ದು, ಸಹಜವಾಗಿ ಸಾಂಪ್ರದಾಯಿಕ ಅಡಕೆ ಬೆಳೆಗಾರರ ನೆಮ್ಮದಿ ಕಸಿದಿರುವುದು ಸುಳ್ಳಲ್ಲ. ಅಲ್ಲದೆ ಸುಳ್ಯ ಭಾಗದಲ್ಲಿ ಎಲೆಚುಕ್ಕಿ, ಹಳದಿ ರೋಗ ವ್ಯಾಪಕವಾಗಿದ್ದು ಜನರು ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಈ ಬಗ್ಗೆ ಬಿಜೆಪಿ ಚಾಣಾಕ್ಯ, ಗೃಹ ಸಚಿವ ಏನು ಘೋಷಣೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ನಾಯಕರಿಗೆ ಚಿಂತೆ: ಮಂಗಳೂರು ಉತ್ತರ , ಬೈಂದೂರು, ಕಾಪು, ದಕ್ಷಿಣ ಕನ್ನಡದ ಬಂಟ್ವಾಳ ಶಾಸಕರ ಬಗ್ಗೆ ಸಮೀಕ್ಷೆಯಲ್ಲಿ ಪ್ರತಿಕೂಲ ಅಂಶಗಳಿವೆ. ಮಂಗಳೂರು ಉತ್ತರದಲ್ಲಿ ಭರತ್ ಶೆಟ್ಟಿ ಶಾಸಕರಾಗಿದ್ದಾರೆ. ಬಂಟ್ವಾಳದಲ್ಲಿ ರಾಜೇಶ್ ನಾಯಕ್, ಬೈಂದೂರಿನಲ್ಲಿ ಸುಕುಮಾರ ಶೆಟ್ಟಿ, ಕಾಪುವಿನಲ್ಲಿ ಲಾಲಾಜಿ ಮೆಂಡನ್ ಶಾಸಕರು. ಈ ನಾಯಕರ ಬಗ್ಗೆ ಆಂತರಿಕ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ವಿರುದ್ಧ ದಿಕ್ಕಿನಲ್ಲಿರುವುದು ಕೇಂದ್ರ ನಾಯಕರ ಚಿಂತಗೆ ಕಾರಣವಾಗಿದೆ. ಪ್ರಸ್ತುತ ಶಾಸಕರಾಗಿರುವವರನ್ನೇ ಚುನಾವಣೆಗೆ ಅಭ್ಯರ್ಥಿಯನ್ನಾಗಿಸಿದಲ್ಲಿ ಗೆಲುವು ಕಷ್ಟ ಎಂಬುದು ನಾಯಕರು ಮನಗಂಡಿರುವ ಅಂಶ. ಈ ನಿಟ್ಟಿನಲ್ಲಿ ಚಾಣಾಕ್ಯನ ನಡೆ ಏನೆಂಬುದು ಸದ್ಯದ ಕುತೂಹಲ.