ಮಂಗಳೂರು: ಕಂಕನಾಡಿ ಸಮೀಪದ ನಾಗುರಿ ಯಲ್ಲಿ ನ. 19ರಂದು ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ತನಿಖೆಯನ್ನು ತೀವ್ರಗೊಳಿಸಿದ್ದು ಬುಧವಾರ ಮೈಸೂರಿನಲ್ಲಿ ಶೋಧ ಕಾರ್ಯ ನಡೆಸಿದೆ.
ಎನ್‌ಐಎ ಪ್ರಕರಣದ ಆರೋಪಿಯಾಗಿರುವ ಶಂಕಿತ ಉಗ್ರ ಮಹಮ್ಮದ್ ಶಾರೀಕ್ ಸ್ಫೋಟ ನಡೆಯುವ ಮೊದಲು ಮೈಸೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಅಲ್ಲಿ ಮೊಬೈಲ್ ತಂತ್ರಜ್ಞಾನದ ಬಗ್ಗೆ ತರಬೇತಿ ಕೂಡ ಪಡೆದಿದ್ದ. ಈ ವೇಳೆ ನಕಲಿ ಆಧಾರ್ ಕಾರ್ಡ್ ಹೊಂದಿದ್ದ. ಈ ಹಿನ್ನೆಲೆಯಲ್ಲಿ ಎನ್‌ಐಎ ಮೈಸೂರಿನಲ್ಲಿ ಶೋಧ ನಡೆಸಿದ್ದು, ಕೆಲವು ಪರಿಕರ, ನಗದನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನ. 19ರಂದು ಸಂಜೆ ಶಾರೀಕ್ ನಾಗುರಿ ಬಳಿ ಆಟೋರಿಕ್ಷಾ ಹತ್ತಿ ಪಂಪ್‌ವೆಲ್‌ಗೆ ಬಿಡುವಂತೆ ಹೇಳಿದ್ದ. ಅದರಂತೆ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರು ಪಂಪ್‌ವೆಲ್‌ನತ್ತ ಆಟೋ ಓಡಿಸುತ್ತಿದ್ದರು. ಕೆಲವೇ ಹೊತ್ತಿನಲ್ಲಿ ಭಾರೀ ಸ್ಫೋಟವುಂಟಾಗಿ ಶಾರೀಕ್ ಗಂಭೀರ ಗಾಯಗೊಂಡಿದ್ದ. ಪುರುಷೋತ್ತಮ ಪೂಜಾರಿ ಕೂಡ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಪುರುಷೋತ್ತಮ ಪೂಜಾರಿ ಜ. 14ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಕಾರೀಕ್‌ನನ್ನು ಡಿ. 17ರಂದು ಎನ್‌ಐಎ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿ ವಶಕ್ಕೆ ಪಡೆದುಕೊಂಡಿತ್ತು. ಈ ಬಗ್ಗೆ ಜ.20ರಂದು ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ. 23ರಂದು ಎನ್‌ಐಎ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿತ್ತು.