News Kannada
Friday, March 24 2023

ಮಂಗಳೂರು

ಬಂಟ್ವಾಳ: ಸಿಸಿ ಕ್ಯಾಮರಗಳ ಅಸಮರ್ಪಕ ಕಾರ್ಯ ನಿರ್ವಾಹಣೆ ಬಗ್ಗೆ ಅಸಮಾಧಾನ

Bantwal: Dissatisfied with the malfunctioning of CCTV cameras
Photo Credit : News Kannada

ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಗಳ ಅಸಮರ್ಪಕ ಕಾರ್ಯ ನಿರ್ವಾಹಣೆ ಹಾಗೂ ಅನುಷ್ಠಾನದ ಬಗ್ಗೆ ಹಿಂದಿನ ಸಾಮಾನ್ಯ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದು ಗುರುವಾರ ನಡೆದ ಸಾಮಾನ್ಯ ಸಭೆಯಲ್ಲೂ ಸಿಸಿ ಕ್ಯಾಮರ ನಿರ್ವಹಣೆಯ ಬಗ್ಗೆ ಹಿಂದಿನ ಸಭೆಯ ನಿರ್ಣಯ ಕಾರ್ಯಗತವಾಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷದ ಸದಸ್ಯರು ಸಾಮಾನ್ಯ ಸಭೆಯನ್ನು ಬಹಿಷ್ಕರಿಸಿ ಅಧ್ಯಕ್ಷರ ಪೀಠದ ಮುಂದೆ ಧರಣಿ ಸತ್ಯಾಗ್ರಹ ನಡೆಸಿದರು.

ಪುರಸಭಾಧ್ಯಕ್ಷರು, ಮುಖ್ಯಾಧಿಕಾರಿ, ಆಡಳಿತ ಪಕ್ಷದ ಸದಸ್ಯರು ಧರಣಿ ನಿರತ ಸದಸ್ಯರನ್ನು ಮನವೊಲಿಸುವ ಪ್ರಯತ್ನ ನಡೆಸಿದರೂ ಫಲ ನೀಡದೆ ಇದ್ದಾಗ ಈ ವಿಚಾರವಾಗಿ 3 ನೇ ತಂಡದ ತಾಂತ್ರಿಕ ವರದಿ ಪಡೆದು ಫೆ.21 ರಂದು ಮಂಗಳವಾರ ಸಭೆ ಮುಂದುವರರೆಸುವುದಾಗಿ ತೀರ್ಮಾನಿಸಲಾಯಿತು.

ಪುರಸಭೆಯ ಅಧ್ಯಕ್ಷ ಮಹಮ್ಮದ್ ಶರೀಫ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಆರಂಭದಲ್ಲಿ ಬೀದಿ ಬದಿ ವ್ಯಾಪಾರ, ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಅನುಷ್ಠಾನದ ವಿಚಾರವಾಗಿ ತೀವ್ರ ಚರ್ಚೆ ಆರಂಭವಾಗಿ ಸಭೆ ಗದ್ದಲದ ಗೂಡಾಗಿತ್ತು. ಸಿಸಿ ಕ್ಯಾಮರ ಕಾರ್ಯಚರಣೆಗೊಳ್ಳದೇ ಇರುವ ಬಗ್ಗೆ ಮುಂದಿನ 30 ದಿನದೊಳಗಾಗಿ ಸಿಸಿ ಕ್ಯಾಮರ ದುರಸ್ಥಿ ಪಡಿಸಿ ವಸ್ತುಸ್ಥಿತಿಯ ಬಗ್ಗೆ ಮೂರನೇ ತಂಡದಿಂದ ಮತ್ತೊಮ್ಮೆ ವರದಿ ಪಡೆದು ಖಚಿತ ಪಡಿಸಿಕೊಳ್ಳುವ ಬಗ್ಗೆ ನಿರ್ಣಯ ಕೈಗೊಂಡಿರುವುದಾಗಿ ಅಧಿಕಾರಿ ಪಾಲನ ವರದಿ ಓದುತ್ತಿದ್ದಂತೆಯೇ ಮಧ್ಯ ಪ್ರವೇಶೀಸಿದ ವಿಪಕ್ಷ ಸದಸ್ಯ ಹರಿಪ್ರಸಾದ್ 30 ದಿನದಲ್ಲಿ ಸಿಸಿ ಕ್ಯಾಮರ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಸಂಬಂಧಪಟ್ಟ ವ್ಯಕ್ತಿಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಅಧ್ಯಕ್ಷರು ತಿಳಿಸಿದ್ದೀರಿ. ಇದೀಗ ಮೂವತ್ತು ದಿನ ಕಳೆದರೂ ಸಿಸಿ ಕ್ಯಾಮರ ಸಮಸ್ಯೆ ಪರಿಹಾರವಾಗಿಲ್ಲ.

ಲೋಕಾಯುಕ್ತಕ್ಕೆ ಯಾಕೆ ದೂರು ನೀಡಿಲ್ಲ ? ಎಂದು ಪ್ರಶ್ನಿಸಿದ ಅವರು ಸಿಸಿ ಕ್ಯಾಮರ ಅನುಷ್ಠಾನದಲ್ಲಿ ಅವ್ಯವಹಾರ ನಡೆದಿರುವುದಾಗಿ ಸಂಶಯ ವ್ಯಕ್ತಪಡಿಸಿದರು. ಈ ಬಗ್ಗೆ ಈಗಾಗಲೇ ಗುತ್ತಿಗೆದಾರನಿಗೆ ಪಾವತಿಯಾಗಿರುವ ಮೊತ್ತವನ್ನು ರಿಕವರಿ ಮಾಡಿಸಬೇಕು ಇಲ್ಲವೇ ಸಿಸಿ ಕ್ಯಾಮರನ್ನು ಪೂರ್ಣ ಪ್ರಮಾಣದಲ್ಲಿ ಸರಿಪಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಧ್ವನಿಗೂಡಿಸಿದ ಹಿರಿಯ ಸದಸ್ಯ ಗೋವಿಂದ ಪ್ರಭು ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಅಧ್ಯಕ್ಷರು ಮುಖ್ಯಾಧಿಕಾರಿ ಇದ್ದರೂ ಕೂಡ ಅವರು ಮಾತನಾಡುವುದಿಲ್ಲ ಸಿಬ್ಬಂದಿಗಳಲ್ಲಿ ಉತ್ತರ ಕೊಡಿಸಿ ಜವಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಆಡಳಿತ ಪಕ್ಷದ ಸದಸ್ಯ ಮುನೀಶ್ ಅಲಿಯೂ ವಿಪಕ್ಷ ಸದಸ್ಯರಿಗೆ ಬೆಂಬಲ ವ್ಯಕ್ತಪಡಿಸಿ 30 ದಿನದಲ್ಲಿ ಸಿಸಿ ಕ್ಯಾಮರ ಸಮಸ್ಯೆ ಬಗೆಹರಿಸುವುದಾಗಿ ಹೇಳಿ 60 ದಿನ ಆದರೂ ಇನ್ನು ಗಮನ ಹರಿಸದಿರುವುದು ನಿರ್ಲಕ್ಷದ ಪರಮಾವಧಿ ಎಂದು ಆರೋಪಿಸಿದರು. ಕೇವಲ ಅಧ್ಯಕ್ಷರನ್ನು ಮಾತ್ರ ಗುರಿಪಡಿಸುವುದು ಸರಿಯಲ್ಲ, ಅಧಿಕಾರಿಗಳನ್ನು ಸೇರಿಸಿ ಗುತ್ತಿಗೆದಾರನ ವಿರುದ್ದ ಪ್ರಕರಣ ದಾಖಲಿಸಿ ಎಂದು ಆಡಳಿತ ಸದಸ್ಯರಾದ ಸಿದ್ದೀಕ್ ಗುಡ್ಡೆಯಂಗಡಿ, ರಾಮಕೃಷ್ಣ ಆಳ್ವ ಅಧ್ಯಕ್ಷರ ಬೆಂಬಲಕ್ಕೆ ನಿಂತರು.
ಈ ಬಗ್ಗೆ ಸುದೀರ್ಘ ಮಾತಿನ ಚಕಮಕಿ ನಡೆದು ಮೂರನೇ ತಂಡದ ವರದಿ ಬಂದ ಬಳಿಕ ಈ ಬಗ್ಗೆ ತೀರ್ಮಾನ ಕೈಗೊಳ್ಳಲು ಅಧ್ಯಕ್ಷರು ಕಾಲವಕಾಶ ಕೇಳಿದಾಗ ಒಪ್ಪದ ವಿಪಕ್ಷ ಸದಸ್ಯರು ಅಧ್ಯಕ್ಷರ ಪೀಠದ ಮುಂಭಾಗ ಧರಣಿ ಆರಂಭಿಸಿದರು. ನಮ್ಮಿಂದ ತಪ್ಪಾಗಿದೆ, ಅನುಭವದ ಕೊರತೆ ಇದೆ ನೀವು ಹೇಳಿದಂತೆ ನಾವು ಮಾಡುತ್ತೇವೆ ಎಂದು ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅಸಹಾಯಕತೆ ತೋಡಿಕೊಂಡರು.

See also  ಬೆಳ್ತಂಗಡಿ: ದಿಢೀರ್ ಉಕ್ಕಿದ ಮೃತ್ಯುಂಜಯ ಹಾಗೂ ನೇತ್ರಾವತಿ ನದಿ

ಅಧ್ಯಕ್ಷರು, ಆಡಳಿತ ಸದಸ್ಯರು, ಅಧಿಕಾರಿಗಳು ಮನವೊಲಿಸುವ ಪ್ರಯತ್ನ ನಡೆಸಿದರೂ ಜಗ್ಗದ ಸದಸ್ಯರು ಪ್ರತಿಭಟನೆ ನಡೆಸಿದಾಗ ಮೂರನೇ ತಂಡದಿಂದ ಶುಕ್ರವಾರ ಪರಿಶೀಲನೆ ನಡೆಸಿ ಅವರಿಂದ ತಾಂತ್ರಿಕ ವರದಿ ಪಡೆದು ಫೆ.21 ರಂದು ಸಭೆ ಮುಂದುವರಿಸುವುದಾಗಿ ಅಧ್ಯಕ್ಷರು ಘೋಷಿಸಿದರು.

ಅಸಾಂವಿಧಾನಿಕ ಪದ ಬಳಸಿದ ಮುಖ್ಯಾಧಿಕಾರಿ:
ವಿಪಕ್ಷ ಸದಸ್ಯರ ಪ್ರತಿಭಟನೆಯ ಮಧ್ಯೆ ಗುತ್ತಿಗೆದಾರನ ಬಗ್ಗೆ ಆಕ್ರೋಶ ವ್ಯಕ್ತ ಪಡಿಸುವ ಭರದಲ್ಲಿ ಮಾತಿನ ಸ್ಥಿಮಿತವನ್ನು ಕಳೆದುಕೊಂಡ ಮುಖ್ಯಾಧಿಕಾರಿ ಎಂ.ಆರ್. ಸ್ವಾಮಿ ಅಸಾಂವಿಧಾನಿಕ ಪದ ಬಳಸಿ ಸದಸ್ಯರ ಟೀಕೆಗೆ ಗುರಿಯಾದರು. ನಿಮ್ಮ ಪದಬಳಕೆಯ ಬಗ್ಗೆ ಹಿಡಿತವಿರಲಿ, ಇಲ್ಲಿ ಮಹಿಳೆಯರು, ಗೌರವಾನ್ವಿತರು ಇದ್ದಾರೆ. ನೀವು ಗೌರವದ ಸ್ಥಾನದಲ್ಲಿದ್ದೀರಿ ಎಂದು ಸದಸ್ಯ ಮುನೀಶ್ ಅಲಿ ಎಚ್ಚರಿಸಿದರು. ಅಲ್ಲದೆ ಸಿಸಿ ಕ್ಯಾಮರದ ಬಗ್ಗೆ ಸದಸ್ಯರು ಮುಖ್ಯಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಾಗ ಸಿಸಿ ಕ್ಯಾಮರ ನಿರ್ವಾಹಣೆ ನೋಡುತ್ತಿದ್ದ ಸಿಬ್ಬಂದಿ ಇಕ್ಬಾಲ್ ವಿರುದ್ದ ಹರಿಹಾಯ್ದ ಮುಖ್ಯಾಧಿಕಾರಿ ನೀನೆನು ಮಾಡಿದ್ದಿ ಎಂದು ಗೊತ್ತಿದೆ ನಿನ್ನ ವಿರುದ್ದವೂ ಲೋಕಾಯುಕ್ತಕ್ಕೆ ದೂರು ನೀಡುವುದಾಗಿ ಗದರಿದರು.

ಬೀದಿ ಬದಿ ವ್ಯಾಪಾರದ ಗದ್ದಲ:
ರಸ್ತೆಗಳನ್ನು ಅತಿಕ್ರಮಿಸಿ ಅನಧಿಕೃತ ವಾಗಿ ಬೀದಿ ಬದಿಯಲ್ಲಿ ವ್ಯಾಪರ ಮಾಡುವವರು ಹಾಗೂ ಅನಧಿಕೃತವಾಗಿ ಕಟ್ಟಡ ನಿರ್ಮಿಸುವವರ ವಿರುದ್ದ ಕ್ರಮ ಕೈಗೊಳ್ಳುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ರಸ್ತೆ ಆಕ್ರಮಿಸಿ ವ್ಯಾಪರ ಮಾಡುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದಾಗ ಅವರಿಗೆ ಲೈಸೆನ್ಸ್ ನೀಡಲಾಗಿದೆ ಹೇಗೆ ಕ್ರಮ ಕೈಗೊಳ್ಳುವುದು ? ಎಂದು ಸಿಬ್ಬಂದಿ ರಾಘವೇಂದ್ರ ಅಸಹಯಕತೆ ತೋಡಿಕೊಂಡರು. ಬೀದಿಬದಿ ಎಂದು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ವ್ಯಾಪಾರ ನಡೆಸುವುದು ಸರಿಯಲ್ಲ ಅಂತವರ ಪರವನಗಿ ರದ್ದು ಮಾಡಿ ಎಂದು ಸದಸ್ಯರು ಪ್ರತಿಕ್ರಿಯಿಸಿದರು. ಎಲ್ಲಿಂದಲೋ ಬಂದವರು ಇಲ್ಲಿ ಬೀದಿಬದಿ ವ್ಯಾಪಾರ ಆರಂಭಿಸಿ ಶಾಶ್ವತವಾಗಿ ಟೆಂಟ್ ಹಾಕುತ್ತಾರೆ. ಭಾನುವಾರ ಬಿ.ಸಿ.ರೋಡು ಸಂತೆ ಮಾರ್ಕೆಟ್ ನಂತೆ ಆಗುತ್ತದೆ. ಆದ್ದರಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಆಗ್ರಹಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳಲು ಒಂದು ವಾರದ ಕಾಲವಕಾಶ ನೀಡಲಾಯಿತು.

ಉಪಾಧ್ಯಕ್ಷೆ ಜೆಸಿಂತಾ ಡಿಸೋಜಾ, ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ. ವೇದಿಕೆಯಲ್ಲಿದ್ದರು. ಸದಸ್ಯರಾದ ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಗೋವಿಂದ ಪ್ರಭು, ಹರಿಪ್ರಸಾದ್, ಜನಾರ್ದನ ಚೆಂಡ್ತಿಮಾರ್, ಗಂಗಾಧರ ಪೂಜಾರಿ, ಸಿದ್ದೀಕ್ ಗುಡ್ಡೆಯಂಗಡಿ, ಮಹಮ್ಮದ್ ನಂದರಬೆಟ್ಟು, ಲುಕ್ಮಾನ್, ಮೊದಲಾದವರು ಚರ್ಚೆಯಲ್ಲಿ ಭಾಗಿಯಾದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

153
Mounesh V

Read More Articles

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು