ಮಂಗಳೂರು: ಕಾಂಗ್ರೆಸ್ ಪಕ್ಷದವರು ಕಳೆದ ಎಪ್ಪತ್ತು ವರ್ಷಗಳಲ್ಲಿ ಜನರಿಗೆ ಕಿವಿಯಲ್ಲಿ ಹೂ ಇಟ್ಟು, ಮಂಕುಬೂದಿ ಎರಚಿ ವಂಚಿಸಿದ್ದಾರೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದವರು ಮುಂದೆಯೂ ಅವರು ಶಾಶ್ವತವಾಗಿ ಕಿವಿ ಮೇಲೆ ಹೂ ಇಟ್ಟುಕೊಂಡೇ ಇರಲಿದ್ದಾರೆ ಎಂದು ವಿಧಾನಸಭೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿವಿಗೆ ಹೂವಿಟ್ಟು ಆಗಮಿಸಿರುವುದಕ್ಕೆ ಪ್ರತಿಕ್ರಿಯೆ ನೀಡಿದರು.
ಬೊಮ್ಮಾಯಿಯವರ ಬಜೆಟ್ ಸರ್ವತೋಮುಖ ಅಭಿವೃದ್ಧಿ ಪೂರಕ ವಾಗಿದೆ. ಕೃಷಿಕರು, ಮಹಿಳೆಯರು, ಮತ್ತು ಯುವಕರ ಪರವಾದ ಪರ ಅಂಶಗಳಿವೆ. ಕೃಷಿಕರ ಪರವಾದ ಬಜೆಟ್ ಎಂದು ಹೇಳಿದರು.
ಈಗ ಮೂರು ಲಕ್ಷ ಕೋಟಿಗೂ ಅಧಿಕ ಬಜೆಟ್ ಮಂಡನೆಯಾಗಿದೆ. ಐದು ಲಕ್ಷದವರೆಗೆ ರೈತರಿಗೆ ಬಡ್ಡಿ ರಹಿತ ಸಾಲ ಘೋಷಣೆಯಾಗಿದೆ. ಅಡಿಕೆ ರೋಗ ಸಂಶೋಧನೆಗೆ ಹತ್ತು ಕೋಟಿ ಬಿಡುಗಡೆ ಮಾಡಲಾಗಿದೆ, ಕುಮ್ಕಿ, ಕಾನ, ಬಾಣೆ ಸಮಸ್ಯೆಗಳನ್ನು ಉಪ ಸಮಿತಿಗೆ ಒಪ್ಪಿಸಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಪದವಿ ಪಡೆದವರಿಗೆ ಎರಡು ಸಾವಿರ ಕೊಡುವ ಯೋಜನೆ, ಹಳ್ಳಿಯ ಯುವಕರಿಗೆ ವಿವೇಕಾನಂದರ ಹೆಸರಿನಲ್ಲಿ ಸಾಲ ಯೋಜನೆ, ಸ್ವಯಂ ಉದ್ಯೋಗ ಅವಕಾಶ, ಭೂ ರಹಿತ ಮಹಿಳೆಯರಿಗೆ ಐದುನೂರು ರೂ., ಸ್ವಸಹಾಯ ಸಂಘಕ್ಕೆ ಸಾಲ ಯೋಜನೆ, ಸ್ತ್ರೀ ಸಬಲೀಕರಣಕ್ಕೆ ಶಕ್ತಿ ತುಂಬುವ ಕೆಲಸ ಬಜೆಟ್ ನಲ್ಲಿ ಆಗಿದೆ ಎಂದರು.
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗೆ ಎಸ್ ಡಿಪಿಐ ಟಿಕೆಟ್ ವಿಚಾರವಾಗಿ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದ ನಳಿನ್ ಕುಮಾರ್ ಕಟೀಲು ಎಸ್ ಡಿಪಿಐ ಈ ಹಿಂದೆ ನಮಗೆ ಪಿಎಫ್ಐ ಜೊತೆ ಸಂಬಂಧ ಇಲ್ಲ ಅಂತ ಹೇಳಿತ್ತು. ಶಾಫಿ ಬೆಳ್ಳಾರೆ ಜೈಲಿನಲ್ಲಿ ಇರೋ ವ್ಯಕ್ತಿ, ಅಂಥವನಿಗೆ ಎಸ್ ಡಿಪಿಐ ಟಿಕೆಟ್ ಕೊಟ್ಟಿದೆ. ಇದು ಎಸ್ಡಿಪಿಐ ಪಿಎಫ್ಐ ನ ಮತ್ತೊಂದು ಮುಖ ಎನ್ನುವುದನ್ನ ಸ್ಪಷ್ಟ ಪಡಿಸಿದೆ. ಪ್ರಜಾಪ್ರಭುತ್ವ ದೇಶದಲ್ಲಿ ಕ್ರಿಮಿನಲ್ ಹಿನ್ನೆಲೆ ವ್ಯಕ್ತಿಯನ್ನು ಅಭ್ಯರ್ಥಿ ಮಾಡಿರುವುದು ಸರಿಯಲ್ಲ, ಈ ಬಗ್ಗೆ ತನಿಖೆ ಆಗಬೇಕು ಹಾಗೂ ಕಾಂಗ್ರೆಸ್ ನವರು ತಮ್ಮ ನಿಲುವು ಸ್ಪಷ್ಟಪಡಿಸಬೇಕು ಎಂದರು.