ಮಂಗಳೂರು: ಕುಲಶೇಖರ- ಮೂಡುಬಿದಿರೆ – ಕಾರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆದುಕೊಂಡಿದ್ದು, ಕೆಲ ಪ್ರದೇಶಗಳ ಚಹರೆಯೇ ಬದಲಾಗಿದೆ. ಆದರೆ ಕಾಮಗಾರಿ ವೇಳೆ ಸುರಕ್ಷತೆಗೆ ಆದ್ಯತೆ ನೀಡದ ಕಾರಣ ಹೆದ್ದಾರಿ ರಾತ್ರಿವೇಳೆ ಕತ್ತಲೆ ಕೂಪವಾಗಿ ಅಪಘಾತಗಳಿಗೆ ಕಾರಣವಾಗುತ್ತಿದೆ. ಅಲ್ಲದೆ ಹೆದ್ದಾರಿ ಭೂ ಸ್ವಾಧೀನ ತೊಡಕು ಕಾಮಗಾರಿ ವೇಗಕ್ಕೆ ತಡೆಯಾಗಿದೆ. ದಿಲೀಪ್ ಬಿಲ್ಡ್‌ಕಾನ್ ಕಂಪನಿ ರಸ್ತೆ ಕಾಮಗಾರಿ ಗುತ್ತಿಗೆ ಪಡೆದಿದ್ದು, 45 ಕಿಲೋಮೀಟರ್ ಉದ್ದದ ರಸ್ತೆ ಅಗಲ 45 ಮೀಟರ್ ಇರಲಿದೆ. ದಕ್ಷಿಣ ಕನ್ನಡದ 18 ಗ್ರಾಮ ಉಡುಪಿಯ 2 ಗ್ರಾಮಗಳಲ್ಲಿ ಹೆದ್ದಾರಿ ಹಾದು ಹೋಗಲಿದೆ.
ಸುರಕ್ಷತೆಗೆ ಬೇಕಿದೆ ಆದ್ಯತೆ: ಬೆಳುವಾಯಿ ಭಾಗದಲ್ಲಿ ಕಾಮಗಾರಿ ಬಿರುಸು ಪಡೆದುಕೊಂಡಿದ್ದು, ಬೃಹತ್ ಮರಗಳ ತೆರವು ಸೇತುವೆ, ಇತ್ಯಾದಿ ನಡೆಯುತ್ತಿದೆ. ಕೆಲದಿನಗಳ ಹಿಂದೆ ಬೆಳುವಾಯಿಯಲ್ಲಿ ಮರತೆರವು ಮಾಡಿದ್ದನ್ನು ಗುತ್ತಿಗೆ ದಾರರು ರಸ್ತೆ ಬದಿಯಲ್ಲಿ ಪೇರಿಸಿ ಇಟ್ಟಿದ್ದು, ಇದಕ್ಕೆ ತಾಗಿ ಬೈಕ್ ಸವಾರ ದುರ್ಮರಣವನ್ನಪ್ಪಿದ್ದರು. ಅದೇ ರೀತಿ 3 ಪ್ರಮುಖ ಅಪಘಾತ ಪ್ರಮುಖಗಳು ಕಾಮಗಾರಿ ವಲಯದಲ್ಲಿ ನಡೆದಿದ್ದು, ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸ್ತುತ ರಸ್ತೆ ಬದಿಯಲ್ಲಿ ಮರ ಪೇರಿಸಿ ಇರಿಸುವ ಸಮಸ್ಯೆ ನಿವಾರಣೆಯಾಗಿದೆ. ಆದರೆ ರಾತ್ರಿ ವೇಳೆ ಈ ರಸ್ತೆ ಬೀದಿ ದೀಪ, ರಿಫ್ಲೆಕ್ಟರ್‌ಗಳಿಲ್ಲದೆ ಈ ಪ್ರದೇಶ ಕತ್ತಲಕೂಪವಾಗಿರುತ್ತದೆ. ಅದೇವೇಳೆ ಹಠಾತ್ತಾಗಿ ಎದುರಾಗುವ ತಿರುವುಗಳು ಸವಾರರಿಗೆ ಕಂಟಕವಾಗಿ ಪರಿಣಮಿಸಿವೆ.
ಪೀಕ್ ಅವರ್‌ನಲ್ಲಿ ಕಾಮಗಾರಿ: ಬೆಳಗ್ಗಿನ ವೇಳೆ ಶಾಲಾ ಕಾಲೇಜು, ಕಚೇರಿಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಈ ವೇಳೆಯೇ ಮರತೆರವು ಮೊದಲಾದ ಪ್ರಮುಖ ಕೆಲಸಗಳನ್ನು ಕೈಗೊಳ್ಳುತ್ತಿರುವುದರಿಂದ ವಿಪರೀತ ವಾಹನ ದಟ್ಟಣೆ ಉಂಟಾಗುತ್ತಿದೆ. ಇದರ ಬದಲಿಗೆ ಮಧ್ಯಾಹ್ನ ವೇಳೆ ತೆರವು ಕಾಮಗಾರಿ ಕೈಗೊಳ್ಳಬೇಕು ಎಂಬುದು ಜನರ ಒತ್ತಾಯ. ಅಲ್ಲದೇ ಮರತೆರವು ವೇಳೆ ಪರ್ಯಾಯ ಮಾರ್ಗ ನಿರ್ಮಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.
ಅಪಘಾತ ತಾಣಗಳು ಇಂತಿವೆ: ಮಠದಕರೆಯಲ್ಲಿ ವಾಹನ ಸವಾರರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಬೇಕಿದೆ. ಕೆಸರಗದ್ದೆಯಲ್ಲಿ ಶೇ. 50 ಕಾಮಗಾರಿ ಪೂರ್ಣಗೊಂಡಿದ್ದು, ಸವಾರರರು ಅಪರಿಮಿತ ವೇಗದಲ್ಲಿ ಸಾಗುತ್ತಿದ್ದು, ಇಲ್ಲಿ ಮುಂಜಾಗ್ರತಾ ಕ್ರಮ ಅನಿವಾರ್ಯ.
ಕೆಲಪ್ರದೇಶಗಳ ಚಿತ್ರಣವೇ ಬದಲು: ಅಪಘಾತ ವಲಯವೆಂದೇ ಗುರುತಿಸಿಕೊಂಡ ಚಿಲಿಂಬಿ ಚಿತ್ರಣ ಬದಲಾಗಿದೆ. ಅಂತೆಯೇ ಬೆಳುವಾಯಿ ಕೂಡ ಹಿಂದಿಗಿಂತ ಬಹು ಬದಲಾಗಿದೆ.
ನಾವು ರಸ್ತೆ ಅಭಿವೃದ್ಧಿ ವಿರುದ್ಧ ಅಲ್ಲ ಆದರೆ ಕಳೆದುಕೊಂಡದ್ದಕ್ಕೆತಕ್ಕ ಪ್ರತಿಫಲ ಸಿಗಬೇಕಲ್ಲ. ಒಮ್ಮೆ ಮಾಡಿದ ಆದೇಶವನ್ನು ಭೂ ಸ್ವಾಧೀನಾಧಿಕಾರಿ ಮರು ಆದೇಶ ಮಾಡಿರುವುದರ ವಿರುದ್ಧ ನಾವು ಪುತ್ತಿಗೆ. ಪಡುಮಾರ್ನಾಡು, ಸಾಣೂರು ಗ್ರಾಮದ ಪರವಾಗಿ ಹೈಕೋರ್ಟ್ ಗೆ ದೂರು ನೀಡಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ, ಭೂ ಸ್ವಾಧೀನಾಧಿಕಾರಿಯ ಮರು ಆದೇಶ ಅನೂರ್ಜಿತ ಎಂದು ತೀರ್ಪು ನೀಡಿದೆ. ಈ ಬಗ್ಗೆ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ. ಇತರ ಗ್ರಾಮಗಳರೂ ಇದೇ ಅನ್ಚಯ ಮಾಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮರಿಯಮ್ಮ ಥೋಮಸ್ ಹೆದ್ದಾರಿ ಭೂಸ್ವಾಧೀನ ಹೋರಾಟ ಸಮಿತಿ ಪ್ರಮುಖರು
ರಸ್ತೆ ಧೂಳಿನಿಂದ ಸಂಚರಿಸುವುದೇ ಕಷ್ಟವಾಗಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳು, ಕಾರ್ಮಿಕರು ತೊಂದರೆ ಅನುಭವಿಸುವಂತಾಗಿದೆ. ಕಾಮಗಾರಿ ಗುತ್ತಿಗೆ ಪಡೆದ ಮಾರ್ಗದ ಇಕ್ಕೆಲಗಳಲ್ಲಿ ಸಂಚಾರ ಸುರಕ್ಷತೆ ಕ್ರಮಗಳನ್ನು ಅನುಸರಿಸಬೇಕಿದೆ.
ಕಾವೇರಮ್ಮ ಗೃಹಿಣಿ ಬನ್ನಡ್ಕ