ಮಂಗಳೂರು: ಶಿವಧ್ವಜ್ ಶೆಟ್ಟಿ ನಟ, ನಿರ್ದೇಶಕ, ನಿರ್ಮಾಪಕನಾಗಿ ಕಳೆದ ೨೫ ವರ್ಷಗಳಿಂದ ಕನ್ನಡ ಮತ್ತು ತುಳು ಚಿತ್ರರಂಗಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಇದೀಗ ಅವರು “ಕೊರಮ್ಮ” ಎಂಬ ಹೊಸ ತುಳು ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ಕೊರಮ್ಮ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದರ ವಿಶೇಷ ಪ್ರದರ್ಶನ ಫೆಬ್ರವರಿ ೨೫ ಶನಿವಾರ ಸಂಜೆ ೩.೩೦ಕ್ಕೆ ಭಾರತ್ ಮಾಲ್ ನ ಬಿಗ್ ಸಿನಿಮಾಸ್ ನಲ್ಲಿ ನಡೆಯಲಿದೆ.
ತುಳು ಚಿತ್ರರಂಗ ೫೦ ವರ್ಷಗಳನ್ನು ದಾಡಿ ಮುಂದಡಿಯಿಡುತ್ತಿದೆ. ಈ ಶುಭ ಸಂದರ್ಭದಲ್ಲಿ ತುಳು ಚಿತ್ರರಂಗಕ್ಕೆ ಏನಾದರೂ ಗಣನೀಯವಾದ ಕೊಡುಗೆ ನೀಡಬೇಕೆನ್ನುವ ಮಹದಾಸೆಯೊಂದಿಗೆ ಈ ಚಿತ್ರವನ್ನು ತಯಾರಿಸಿದ್ದೇನೆ ಎನ್ನುತ್ತಾರೆ ಶಿವಧ್ವಜ್.
ಕತೆ ಹೇಳಲು ಹೊರಟವರಿಗೆ ನಮ್ಮ ತುಳು ನಾಡಿನಲ್ಲಿ ನೂರಾರು ಕತೆಗಳು ಸಿಗುತ್ತವೆ. ನಾವು ಚಿಕ್ಕಂದಿನಲ್ಲಿ ಆಡಿ ಬೆಳೆದ ಈ ಮಣ್ಣಿನಲ್ಲಿ ನಾನು ನೋಡಿದ, ಗಮನಿಸಿದ ವಿಷಯವನ್ನೇ ಈ ಚಿತ್ರಕ್ಕೆ ವಸ್ತುವಾಗಿ ಆಯ್ಕೆ ಮಾಡಿಕೊಂಡಿದ್ದೇನೆ. ನಮ್ಮ ಮಣ್ಣಿನ ಗುಣ, ಸಂಸ್ಕೃತಿ, ಆಚಾರ, ವಿಚಾರಗಳನ್ನೇ ಕಥಾವಸ್ತುವಾಗಿ ಇರಿಸಿಕೊಂಡು ನಾನು ಈ ಹಿಂದೆಯೂ ಚಲನಚಿತ್ರಗಳನ್ನು ಮಾಡಿದ್ದೇನೆ. ಈ ಹಿಂದೆ ಭೂತಕೋಲದ ವಿಷಯನ್ನು ಆಧರಿಸಿ ನಾನು ನಿರ್ದೇಶಿಸಿದ “ಗಗ್ಗರ” ತುಳು ಸಿನಿಮಾಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಲಭಿಸಿದೆ.
ಇದೀಗ ನಮ್ಮ ಊರಿನ ಯಜಮಾನ ಮತ್ತು ಆತನನ್ನೇ ನಂಬಿ, ಜೀವನವನ್ನೇ ಆತನಿಗಾಗಿ ಸಮರ್ಪಿಸಿದ ಕೆಲಸಗಾರನೊಬ್ಬನ ಕತೆಯನ್ನು “ಕೊರಮ್ಮ” ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದೇನೆ. ಇದು ಎಲ್ಲರಿಗೂ ಇಷ್ಟವಾಗಬಹುದು ಎನ್ನುವ ವಿಶ್ವಾಸ ಇದೆ ಎನ್ನುತ್ತಾರೆ ಶಿವಧ್ವಜ್.
“ಕೊರಮ್ಮ”
ಊರ ಯಜಮಾನ ಮಂಜಯ್ಯ ಹೆಗ್ಗಡೆಯವರ ಬಲಗೈ ಬಂಟ ಕೊರಮ್ಮ. ಯಜಮಾನರ ಒಳಿತು, ಕೆಡುಕು ಎಲ್ಲದರಲ್ಲಿ ಕೊರಮ್ಮ ಅವರ ಜೊತೆಗಿರುತ್ತಾನೆ. ಯಜಮಾನರ ಕೆಲಸ ಬಿಟ್ಟರೆ ತನಗೊಂದು ಅಸ್ತಿತ್ವವನ್ನೇ ಕೊರಮ್ಮ ನಿರೀಕ್ಷಿಸುವುದೂ ಇಲ್ಲ, ಸಿಕ್ಕಿಯೂ ಇಲ್ಲ. ಯಜಮಾನತಿಗೆ ಆತನ ಬಗ್ಗೆ ಇರುವ ಸಣ್ಣ ಅನುಕಂಪ, ಅವರ ಮಗನಿಗೆ ಇವನ ಬಗ್ಗೆ ಇರುವ ತಾತ್ಸಾರ, ಯಜಮಾನರ ಮಗನಿಗೆ ಮದುವೆಯಾಗದೆ ತನ್ನ ಮದುವೆಯ ಬಗ್ಗೆ ಯೋಚನೆಯನ್ನೂ ಮಾಡದ ಕೊರಮ್ಮ- ಈ ರೀತಿ ಕತೆ ಸಾಗುತ್ತಾ ಹೋಗುತ್ತದೆ. ಯಜಮಾನ ಮತ್ತು ಕೆಲಸಗಾರನ ನಡುವಣ ಸಂಬಂಧ ಬದಲಾಗುವ ಪರಿಸ್ಥಿತಿಯಲ್ಲಿ ಯಾವ ರೀತಿ ಅನಾವರಣಗೊಳ್ಳುತ್ತದೆ ಎಂಬುದೇ “ಕೊರಮ್ಮ”ದ ತಿರುಳು. ನಾವು, ನೀವು ಹುಟ್ಟಿ ಬೆಳೆದ ಈ ನಾಡಿನಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಈ ರೀತಿಯ ಕೊರಮ್ಮ ಮತ್ತು ಮಂಜಯ್ಯ ಹೆಗ್ಗಡೆಯವರನ್ನು ನೋಡಿರುತ್ತಾರೆ, ಗಮನಿಸಿರುತ್ತಾರೆ. ಈ ಮೂಲಕ ಪ್ರತಿಯೊಬ್ಬರನ್ನೂ ಈ ಕತೆ ತಟ್ಟಲಿದೆ ಎಂದು ನಾನು ನಂಬಿದ್ದೇನೆ.
ಈ ಚಿತ್ರವನ್ನು ಈಶ್ವರಿದಾಸ್ ಶೆಟ್ಟಿ ಮತ್ತು ರಾಜೇಶ್ವರಿ ರೈ ನಿರ್ಮಿಸಿದ್ದಾರೆ. ಅಡ್ಯಾರ್ ಮಾಧವ ನಾಯಕ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಮೋಹನ್ ಶೇಣಿ, ಬಿಂದು ರಕ್ಷಿದಿ, ಗುರು ಹೆಗ್ಡೆ, ರೂಪಾ ವರ್ಕಾಡಿ, ಲಕ್ಷ್ಮಣ್ ಕುಮಾರ್ ಮಲ್ಲೂರು, ಜಿನಪ್ರಸಾದ್, ದಿವ್ಯಶ್ರೀ ನಾಯಕ್ ಮುಖ್ಯಪಾತ್ರದಲ್ಲಿರುವ ಈ ಸಿನಿಮಾದಲ್ಲಿ ಬಹಳ ಮಂದಿ ಸ್ಥಳೀಯ ಕಲಾವಿದರು ಅಭಿನಯಿಸಿದ್ದಾರೆ. ಸುರೇಶ್ ಭೈರಸಂದ್ರ ಅವರ ಕ್ಯಾಮರ ಕೈಚಳಕವಿದೆ.
ನನ್ನನ್ನು ಒಬ್ಬ ನಟನಾಗಿ, ನಿರ್ದೇಶಕನಾಗಿ ಬೆಳೆಸಿದ ತುಳುನಾಡು ಮತ್ತು ತುಳುಚಿತ್ರರಂಗಕ್ಕೆ ನನ್ನ ಕೈಲಾದ ಸೇವೆ ಮಾಡುವ ಒಂದು ಪುಟ್ಟ ಪ್ರಯತ್ನವಿದು. ತುಳುಚಿತ್ರರಂಗಕ್ಕೆ ಐವತ್ತು ವರ್ಷಗಳು ತುಂಬಿರುವ ಈ ಶುಭ ಘಳಿಗೆಯಲ್ಲಿ ತುಳುವಿನಲ್ಲಿ ಉತ್ತಮ ಕಥಾವಸ್ತು ಇರುವ, ಸದಭಿರುಚಿಯ ಚಲನಚಿತ್ರಗಳನ್ನು ನೀಡುವ ಉದ್ದೇಶ ನನ್ನದು. ಮುಂದಿನ ದಿನಗಳಲ್ಲೂ ಈ ರೀತಿಯ ನಮ್ಮ ನಾಡಿನ ಸಂಸ್ಕೃತಿ, ಆಚಾರ ವಿಚಾರಗಳನ್ನು ದೇಶ ವಿದೇಶಗಳಲ್ಲಿರುವ ಸಿನಿಪ್ರಿಯರಿಗೆ ಹಂಚಬೇಕು ಎಂಬ ಹಂಬಲ ನನ್ನದು. ಈ ಪುಟ್ಟ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ಕೋರುತ್ತಿದ್ದೇನೆ. ಆದರೆ ಇಂತಹ ಸದಭಿರುಚಿಯ ಚಿತ್ರಗಳಿಗೆ ನಮ್ಮ ನಾಡಿನಲ್ಲಿ ಜನಬೆಂಬಲ ಏಕೆ ಸಿಗುತ್ತಿಲ್ಲ ಎಂಬ ಪ್ರಶ್ನೆಯೂ ನನ್ನನ್ನು ಕಾಡುತ್ತಿದೆ.
ಈ ಚಿತ್ರವನ್ನು ಥಿಯೇಟರ್‌ನಲ್ಲಿ ಬಿಡುಗಡೆ ಮಾಡಬೇಕೇ, ಬೇಡವೇ? ಮಾಡಿದರೆ ಜನರು ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಾರೆಯೇ? ಉತ್ತಮ ಕಂಟೆಂಟ್ ಇರುವ ಸಿನಿಮಾಗಳನ್ನು ಪ್ರೇಕ್ಷಕರು ಕೈಹಿಡಿಯುತ್ತಾರೆಯೇ- ಮುಂತಾದ ಪ್ರಶ್ನೆಗಳು ನನ್ನನ್ನು ಕಾಡುತ್ತಿರುವ ಈ ಸಂದರ್ಭದಲ್ಲಿ “ಕೊರಮ್ಮ” ಚಿತ್ರವನ್ನು ನಿಮ್ಮ ಮುಂದಿಡುತ್ತಿದ್ದೇನೆ. ನಿಮ್ಮ ಟೀಕೆ, ಟಿಪ್ಪಣಿಗಳನ್ನು ನಿರೀಕ್ಷಿಸುತ್ತಿದ್ದೇನೆ. ಚಿತ್ರ ಇಷ್ಟವಾದರೂ ಹೇಳಿ, ಇಷ್ಟವಾಗದಿದ್ದರೂ ಹೇಳಿ. ನಿಮ್ಮಿಂದ ಮುಕ್ತವಾದ ಅಭಿಪ್ರಾಯಗಳನ್ನು ಎದುರು ನೋಡುತ್ತಿದ್ದೇನೆ ಎಂಬ ಅಭಿಪ್ರಾಯವನ್ನು ನಟ ನಿರ್ದೇಶಕ ಶಿವಧ್ವಜ್ ಶೆಟ್ಟಿ ವ್ಯಕ್ತಪಡಿಸಿದ್ದಾರೆ.