ಮಂಗಳೂರು: ಖಾಸಗಿ ರಂಗದ ಬ್ಯಾಂಕ್‌ಗಳಲ್ಲಿ ಮುಂಚೂಣಿಯಲ್ಲಿರುವ, 100ನೇ ವರ್ಷಾಚರಣೆ ಸಂಭ್ರಮದಲ್ಲಿರುವ ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್ (ಕೆಬಿಎಲ್) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ನೋಂದಾಯಿಸಿದ ಠೇವಣೆ ರಹಿತ ಎನ್‌ಬಿಎಫ್‌ಸಿ ಸಂಸ್ಥೆಯಾದ ಪೈಸಾಲೋ ಡಿಜಿಟಲ್ ಲಿಮಿಟೆಡ್ (ಪಿಡಿಎಲ್) ಸಹಸಾಲ ನೀಡುವಿಕೆ ಕುರಿತ ಒಡಂಬಡಿಕೆಗೆ ಸಹಿ ಹಾಕಿವೆ.
ದೇಶದ ಸೂಕ್ಷ್ಮ ಹಾಗೂ ಸಣ್ಣ ಉದ್ಯಮ (ಎಂಎಸ್‌ಇ) ವಿಭಾಗಗಳಿಗೆ (ಸಣ್ಣ ಆದಾಯ ಹೊಂದಿರುವ ಉದ್ದಿಮೆ) ಆರ್ಥಿಕ ಬೆಂಬಲವನ್ನು ಒದಗಿಸಲು ಹಾಗೂ ಪ್ರೋತ್ಸಾಹ ನೀಡಲು ಈ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆದ್ಯತಾ ವಲಯದ ಸಣ್ಣ ಉದ್ದಿಮೆದಾರರ ಸಾಲದ ಹರಿವನ್ನು ಸುಧಾರಿಸಲು ಬ್ಯಾಂಕ್‌ಗಳು ಹಾಗೂ ಎನ್‌ಬಿಎಫ್‌ಸಿಗಳು ಜಂಟಿಯಾಗಿ ಸಾಲ ನೀಡಲಿವೆ. ಈ ಕುರಿತು ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್. ಮಾತನಾಡಿ, “ಸಹ ಸಾಲ ನೀಡುವಿಕೆ ಮಾದರಿಯು ಅದ್ಯತಾ ವಲಯಗಳಿಗೆ ಸಾಲ ನೀಡುವ ವಿನೂತನ ಮಾರ್ಗಗಳಲ್ಲಿ ಒಂದಾಗಿದೆ. ಈ ವ್ಯವಸ್ಥೆಯಿಂದ ಕರ್ಣಾಟಕ ಬ್ಯಾಂಕ್ ಹಾಗೂ ಪೈಸಾಲೋ ಡಿಜಿಟಲ್ ಸಂಸ್ಥೆ ಮಧ್ಯೆ ಕ್ರಿಯಾತ್ಮಕ ಸಂಬಧ ಏರ್ಪಟ್ಟಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನ ಸಹ ಸಾಲ ನೀಡುವಿಕೆ ಕುರಿತ ಮಾನದಂಡಗಳ ಪ್ರಕಾರ ಈ ವ್ಯವಸ್ಥೆಯು ಬ್ಯಾಂಕ್‌ನ ಅದ್ಯತಾ ವಲಯಕ್ಕೆ ಅಗತ್ಯ ಬೆಂಬಲ ಒದಗಿಸಲು ನೆರವಾಗುತ್ತದೆ. ಜತೆಗೆ ಸಣ್ಣ ಉದ್ದಿಮೆದಾರರಿಗೆ ಹಣಕಾಸಿನ ಸಹಾಯವನ್ನು ಮಾಡಲು ಉತ್ತೇಜನ ಸಿಗುತ್ತದೆ” ಎಂದು ಹರ್ಷ ವ್ಯಕ್ತಪಡಿಸಿದರು.
ಪೈಸಾಲೋ ಡಿಜಿಟಲ್ ಉಪ ವ್ಯವಸ್ಥಾಪಕ ನಿರ್ದೇಶಕ ಶಂತನು ಅಗರ್‌ವಾಲ್ ಮಾತನಾಡಿ, ಕರ್ಣಾಟಕ ಬ್ಯಾಂಕ್ ಹಾಗೂ ಪೈಸಾಲೊ ಡಿಜಿಟಲ್ ಸಂಸ್ಥೆಗಳ ನಡುವಿನ ಈ ನೂತನ ಒಪ್ಪಂದ ಸುಮಾರು 365 ಮಿಲಿಯನ್ ಅಂಡರ್ ಬ್ಯಾಂಕ್‌ಡ್ ಹಾಗೂ ಅಂಡರ್ ಸರ್ವೀಸ್‌ಡ್ ಜನಸಂಖ್ಯೆಯ 8 ಲಕ್ಷ ಕೋಟಿಯ ಸಣ್ಣ ಮೊತ್ತದ ಸಾಲ ನೀಡುವ ಬಹುದೊಡ್ಡ ಅವಕಾಶವನ್ನು ಎದುರು ನೋಡುತ್ತಿದ್ದೇವೆ. ಸಣ್ಣ ಉದ್ದಿಮೆದಾರರಿಗೆ ನೆರವಾಗುವ ನಿಟ್ಟಿನಲ್ಲಿ ಪೈಸಾಲೋ ಡಿಜಿಟಲ್ ತೆಗೆದುಕೊಂಡ ಬಹು ದೊಡ್ಡ ಹೆಜ್ಜೆ ಇದಾಗಿದೆ ಎಂದರು.
ಹೊಸದಿಲ್ಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಚೀಫ್ ಬಿಸಿನೆಸ್ ಆಫೀಸರ್ ಗೋಕುಲ್‌ದಾಸ್ ಪೈ ಹಾಗೂ ಪೈಸಾಲೋ ಡಿಜಿಟಲ್‌ನ ಉಪ ವ್ಯವಸ್ಥಾಪಕ ನಿರ್ದೇಶಕ ಶಂತನು ಅಗರ್‌ವಾಲ್ ಅವರು ಪರಸ್ಪರ ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಈ ಸಂದರ್ಭ ಬ್ಯಾಂಕಿನ ಕ್ರೆಡಿಟ್ ಮಾರ್ಕೆಟಿಂಗ್ ವಿಭಾಗದ ಜನರಲ್ ಮ್ಯಾನೇಜರ್ ರಾಜ ಬಿ.ಎಸ್., ಕ್ರೆಡಿಟ್ ಸ್ಯಾಂಕ್ಷನ್ ವಿಭಾಗದ ಜನರಲ್ ಮ್ಯಾನೇಜರ್ ರವಿಚಂದ್ರನ್ ಎಸ್, ದಿಲ್ಲಿ ವಲಯದ ಡೆಪ್ಯುಟಿ ಜನರಲ್ ಮ್ಯಾನೇಜರ್ ಹಾಗೂ ರೀಜನಲ್ ಹೆಡ್ ಜಗದೀಶ್ ಕೆ.ಎಸ್. ಮತ್ತು ಕರ್ಣಾಟಕ ಬ್ಯಾಂಕ್ ಹಾಗೂ ಪೈಸಾಲೋ ಡಿಜಿಟಲ್‌ನ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.