ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿಯವರು ಜಗತ್ತು ಭಾರತದತ್ತ ನೋಡುವ ರೀತಿಯಲ್ಲಿ ಕೋವಿಡನ್ನು ಅದ್ಬುತವಾಗಿ ನಿಭಾಯಿಸಿದ್ದು,ಅವರು ಕೇವಲ ಪಕ್ಷಕ್ಕೆ ಸೀಮಿತವಾದ ನಾಯಕರಲ್ಲ ಇಡೀ ವಿಶ್ವಕ್ಕೆ ನಾಯಕರಾಗಿದ್ದಾರೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಭಾನುವಾರ ಪುಂಜಾಲಕಟ್ಟೆ ಆರೋಗ್ಯ ಕೇಂದ್ರದ ವಠಾರದಲ್ಲಿ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೊಳಪಟ್ಟು ನಡೆದ ಬೃಹತ್ ಆರೋಗ್ಯ ಮೇಳದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ನಂತಹ ಕಷ್ಟಕಾಲದಲ್ಲಿ ಶಾಸಕನಾಗಿ ಜನರ ಸೇವೆ ಮಾಡುವಂತ ಅವಕಾಶ ತನಗೂ ಸಿಕ್ಕಿರುವುದು ಅತ್ಯಂತ ಖುಷಿಕೊಟ್ಟಿದೆ. ಎ.ಜೆ.ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಪ್ರಶಾಂತ್ ಮಾರ್ಲ ಅವರ ಸಲಹೆ, ಸಹಕಾರದಿಂದ ಬಂಟ್ವಾಳ ತಾಲೂಕು ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲಾಗಿದೆ ಎಂದರು.
ಕಳೆದ ಐದುವರ್ಷದ ತನ್ನ ಶಾಸಕತ್ವದ ಅವಧಿಯಲ್ಲಿ ಸುಮಾರು ೨೦೦೦ ಕೋ.ರೂ. ಅಭಿವೃದ್ಧಿ ಕಾಮಗಾರಿಗಳನ್ನು ಕಾರ್ಯಗತಗೊಳಿಸಲಾಗಿದೆ ಎಂದ ಅವರು ವಿಶೇಷವಾಗಿ ಯಾವುದೇ ಗಲಭೆ, ಗೊಂದಲವಿಲ್ಲದೆ ಶಾಂತಿಯ ಬಂಟ್ವಾಳವನ್ನಾಗಿ ಪರಿವರ್ತಿಸಲಾಗಿರುವುದು ಸಮಾಧಾನ ತಂದಿದೆ ಎಂದರು.
ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರವನ್ನು ಮುಖ್ಯಮಂತ್ರಿ,ಆರೋಗ್ಯಸಚಿವರ ಸಹಕಾರದಲ್ಲಿ 12.40 ಕೋ.ರೂ. ವೆಚ್ಚದಲ್ಲಿ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆಯು ಮುಗಿದಿದೆ,ವಾರದೊಳಗೆ ಆರೋಗ್ಯ ಸಚಿವರಿಂದ ಶಿಲಾನ್ಯಾಸವನ್ನು ನೆರವೇರಿಸಲಾಗುವುದು ಎಂದರು.
ಮಂಗಳೂರು ಎ.ಜೆ.ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಪ್ರಶಾಂತ್ ಮಾರ್ಲ ಅವರು ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿ,ಕೇಂದ್ರ ಮತ್ತುರಾಜ್ಯ ಸರಕಾರ ಜನರ ಆರೋಗ್ಯದ ಹಿತದೃಷ್ಠಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇಲ್ಲಿ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಗೆ ಬರುವಂತ ರೋಗಿಗಳಿಗೆ ಎ.ಜೆ.ಆಸ್ಪತ್ರೆಯಿಂದ ಎಲ್ಲಾ ರೀತಿ ಸಹಕಾರ ನೀಡಲಾಗುವುದು ಎಂದರು.
ಶಾಸಕ ರಾಜೇಶ್ ನಾಯ್ಕ್ ಅವರ ಕಲ್ಪನೆಯಂತೆ ಬಂಟ್ವಾಳ ತಾಲೂಕು ಆಸ್ಪತ್ರೆಗೆ ಎಲ್ಲಾ ಸೌಕರ್ಯವನ್ನು ಒದಗಿಸಿ ಉತ್ತಮ ಆಸ್ಪತ್ರೆಯನ್ನಾಗಿಸಲಾಗಿದೆ ಎಂದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್,ಬಂಟ್ವಾಳ ತಾಲೂಕು ಆರೋಗ್ಯಾಧಿಕಾರಿ ಆಶೋಕ್ ಕುಮಾರ್ ರೈ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್, ಪಿಲಾತಬೆಟ್ಟು ಗ್ರಾ.ಪಂ. ಆದ್ಯಕ್ಷೆ ಹರ್ಷಿಣಿಪುಷ್ಪಾನಂದ, ಪಿಲಾತಬೆಟ್ಟು ವ್ಯ. ಸೇ. ಸ. ಬ್ಯಾಂಕ್ ಅಧ್ಯಕ್ಷ ಲಕ್ಮೀನಾರಾಯಣ ಉಡುಪ, ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರದ ವೈದ್ಯಾಧಿಕಾರಿ ರಿತೇಶ್ ಶೆಟ್ಟಿ, ಯೇನೆಪೊಯ ದಂತ ವೈದ್ಯೆ ಡಾ.ಪ್ರಕೃತಿ ಶೆಟ್ಟಿ,ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಜೋಸೆಫ್ ಎಂ.ಎನ್., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಯಾನಂದ ಪಿ.,ಮಾಲಾಡಿ ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಕರ್ಕೇರ, ಪಂಚಾಯತ್ ಸದಸ್ಯ ಪುನೀತ್ ಕುಮಾರ್,ಉದ್ಯಮಿಗಳಾದ ಹರೀಂದ್ರ ಪೈ,ಅಬ್ದುಲ್ ರಹಿಮಾನ್,ಸ್ಥಳೀಯ ಪ್ರಮುಖರಾದ ರಮೇಶ್ ಶೆಟ್ಟಿ ಮಜಲೋಡಿ,ಪ್ರವೀಣ್ ಶೆಟ್ಟಿ ಕುರ್ಡುಮೆ,ಮಂಜಪ್ಪ ಮೂಲ್ಯ , ಡಾ.ರಾಮಕೃಷ್ಣ ಎಸ್.,ಆರೋಗ್ಯ ಸಂರಕ್ಷಣಾಧಿಕಾರಿ ಡಾ. ಜ್ಯೋತಿ ,ಮಾಧವ ಬಂಗೇರ,ಪಿಡಿಒ ಪುರುಷೋತ್ತಮ,ಸಚಿನ್ ಕೋಡ್ಲಕ್ಕೆ, ನಾಗೇಶ್ ಪ್ರಭು , ರಾಜೇಶ್ ಪುಳಿಮಜಲು, ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಮೊದಲಾದವರಿದ್ದರು.
ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ನ ಸ್ಥಾಪಕಾಧ್ಯಕ್ಷ, ಮಾಜಿ.ಜಿ.ಪಂ. ಸದಸ್ಯಎಂ.ತುಂಗಪ್ಪ ಬಂಗೇರ ಪ್ರಾಸ್ತಾವಿಕವಾಗಿ ಮಾತನಾಡಿ,ತನ್ನ ಮೂವತ್ತು ವರ್ಷದ ಹೋರಾಟದ ಫಲವಾಗಿ ಶಾಸಕ ರಾಜೇಶ್ ನಾಯ್ಕ್ ಅವರ ಪರಿಶ್ರಮದಿಂದ ಪುಂಜಾಲಕಟ್ಟೆ ಪ್ರಾ.ಆ.ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿದ್ದು ಅತ್ಯಂತ ಸಂತೋಷವನ್ನು ತಂದಿದೆ ಎಂದು ಭಾವುಕರಾದರು.
ಮಂಗಳೂರು ವೆನ್ಲಾಕ್ ಆಸ್ಪತ್ರೆ, ,ದೇರಳಕಟ್ಟೆ ಯೇನೆಪೊಯ ಆಸ್ಪತ್ರೆಗಳು, ದ.ಕ ಜಿ.ಪಂ., ಜಿಲ್ಲಾ ಅರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಬಂಟ್ವಾಳ, ಶಶಾಂಕ್ ಕ್ಯಾಶ್ಯ ಇಂಡಸ್ಟ್ರೀಸ್ ನೈನಾಡ್ ಮತ್ತು ಪುಂಜಾಲಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಒಳಪಟ್ಟ ಎಲ್ಲಾ ಗ್ರಾಮ ಪಂಚಾಯತ್ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಪಿಲಾತಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸಹಕಾರದಲ್ಲಿ ಈ ಆರೋಗ್ಯ ಮೇಳ ನಡೆಯಿತು.
ಸಾಮಾನ್ಯ ರೋಗ, ಮೂತ್ರಪಿಂಡ,ಮಕ್ಕಳ ತಜ್ಞರು, ಸ್ತ್ರೀ ರೋಗ ಮೂಳೆ , ಕಣ್ಣು, ದಂತ ಸಹಿತ ಎಲ್ಲಾ ರೋಗಗಳಿಗೆ ಸಂಬಂಧಿಸಿ ನುರಿತ ತಜ್ಞ ವೈದ್ಯರು ಮೇಳದಲ್ಲಿ ಭಾಗವಹಿಸಿದ್ದರು.
ಪಿ.ಎಮ್ .ಪ್ರಭಾಕರ್ ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.