ಮಂಗಳೂರು: ತುಳುನಾಡಿನ ಕಾರಣೀಕ ಕ್ಷೇತ್ರ ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ 150ನೇ ಗರಡಿ ಸಂಭ್ರಮಕ್ಕೆ ರಾಜ್ಯ ಸರಕಾರ, ಜಿಲ್ಲಾಡಳಿತದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ಹೇಳಿದರು.
ಕಂಕನಾಡಿ ಗರಡಿ ಕ್ಷೇತ್ರಕ್ಕೆ ಗುರುವಾರ ಸಚಿವ ಸುನೀಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದ ಜತೆ ಮಾತನಾಡಿದರು.
ಗರಡಿ ಸಂಭ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಕನ್ನಡ ಸಂಸ್ಕೃತಿಕ ಇಲಾಖೆಯಿಂದ ನೀಡಲಾಗುವುದು. ಜಿಲ್ಲಾಡಳಿತದ ಜತೆ ಆಡಳಿತ ಮಂಡಳಿ ಈಗಾಗಲೇ ಸಭೆ ನಡೆಸಿದ್ದು, ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಮಾ.6ರಂದು ಸಿಎಂ ಗರಡಿಗೆ: ಮಾ.6ರಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಗರಡಿ ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಈ ನಿಟ್ಟಿನಲ್ಲೂ ಸಿದ್ಧತೆ ನಡೆಯುತ್ತಿದೆ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ಸಚಿವರಿಗೆ ಜಿಲ್ಲಾಡಳಿತ ಸಹಕಾರ ಹಾಗೂ ಇನ್ನಿತರ ತಯಾರಿ ಕುರಿತಂತೆ ಮಾಹಿತಿ ನೀಡಿದರು. ಈ ಸಂದರ್ಭ ಉಪಮೇಯರ್ ಪೂರ್ಣಿಮಾ, ಕಂಕನಾಡಿ ಗರಡಿ ಸಂಭ್ರಮದ ಅಧ್ಯಕ್ಷ ಮೋಹನ್ ಉಜ್ಜೋಡಿ, ಕಾರ್ಪೊರೇಟರ್ ಸಂದೀಪ್ ಗರೋಡಿ, ಲೀಲಾವತಿ, ಕಂಕನಾಡಿ ಗರಡಿ ಕ್ಷೇತ್ರದ ಮೊಕ್ತೇಸರರಾದ ಜಗದೀಪ್ ಡಿ. ಸುವರ್ಣ, ಕಿಶೋರ್ ಮಜಿಲ, ದಿನೇಶ ಅಂಚನ್, ಆರ್ಥಿಕ ಸಮಿತಿ ಸಂಚಾಲಕ ಶರಣ್ ಪಂಪ್‌ವೆಲ್, ವಸಂತ್ ಪೂಜಾರಿ, ಸ್ವಾಗತ ಸಮಿತಿ ಸದಸ್ಯ ಉಮೇಶ್ ಸಾಲ್ಯಾನ್, ಪ್ರಕಾಶ್ ಗರೋಡಿ ಮತ್ತಿತರರು ಉಪಸ್ಥಿತರಿದ್ದರು.