ಮಂಗಳೂರು, ಮಾ.2: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಂಗಳೂರಿನ ಸವಾರ್ಂಗೀಣ ಅಭಿವೃದ್ಧಿಗೆ ಬದ್ಧವಾಗಿದ್ದು, ಇದೇ ಮಾರ್ಚ್ 5ರ ಭಾನುವಾರ 315 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಿಲನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ನೆರವೇರಲಿವೆ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ತಿಳಿಸಿದರು.
ಅವರು ಮಾ.2ರ ಗುರುವಾರ ಮಂಗಳೂರು ನಗರದ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಚೇರಿಯ ಸಭಾಂಗಣದಲ್ಲಿ ಈ ಕುರಿತು ಹಮ್ಮಿಕೊಂಡಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ಇದೇ ಮಾರ್ಚ್ 5ರ ಭಾನುವಾರ ಸಂಜೆ 114 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೇಂದ್ರ ಮಾರುಕಟ್ಟೆ, 140 ಕೋಟಿ ರೂ. ಮೊತ್ತದಲ್ಲಿ ಮಹಾನಗರ ಪಾಲಿಕೆಯ ಜಲಾಭಿಮುಖ ಪ್ರದೇಶ ಅಭಿವೃದ್ಧಿ ಯೋಜನೆಯ ಕಾಮಗಾರಿಗಳು ಹಾಗೂ 45 ಕೋಟಿ ರೂಗಳ ವೆಚ್ಚದಲ್ಲಿ ಸುಲ್ತಾನ್ ಬತ್ತೇರಿ ಪೆಡೆಸ್ಟ್ರನ್ ಹ್ಯಾಂಗಿಂಗ್ ಬ್ರಿಡ್ಜ್ ಕಾಮಗಾರಿಗಳಿಗೆ ಶಿಲನ್ಯಾಸ ನೆರವೇರಿಸಲಾಗುವುದು ಹಾಗೂ 16.5 ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕದ್ರಿ ರಸ್ತೆ ಹಾಗೂ ಉದ್ಯಾನವನದ ಹೊರಗೆ ಸಮಗ್ರ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಜನಪ್ರತಿನಿಧಿಗಳು ಸೇರಿ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಬೇಕು, ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಸಿದ್ಧತೆಗಳನ್ನು ಕೂಡಲೇ ಮಾಡಿಕೊಳ್ಳಬೇಕು, ಅಂದು ಶಿಲನ್ಯಾಸ ಹಾಗೂ ಉದ್ಘಾಟನಾ ಕಾರ್ಯಕ್ರಮದ ನಂತರ ಸಂಜೆ 5.30ಕ್ಕೆ ನಗರದ ಟಿ ಎಮ್ ಎ ಪೈ ರಮಣ ಹಾಲ್‍ನಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಸಚಿವರು, ಶಾಸಕರು, ವಿಧಾನ ಪರಿಷತ್ ಶಾಸಕರು, ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರು ನಾಗರಿಕರು ಭಾಗವಹಿಸಲು ಅನುಕೂಲವಾಗುವಂತೆ ಪ್ರಚಾರ ಕಾರ್ಯ ನಿರ್ವಹಿಸುವಂತೆ ತಿಳಿಸಿದ ಶಾಸಕರು, ಆಮಂತ್ರಣ ಪತ್ರಿಕೆಯನ್ನು ಶಿಷ್ಟಾಚಾರದಂತೆ ಮುದ್ರಿಸಿ, ಎಲ್ಲರಿಗೂ ತಲುಪಿಸಲು ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ಅಧಿಕಾರಿ ಅರುಣ ಪ್ರಭಾ ಅವರಿಗೆ ಸೂಚಿಸಿದರು.
ವೇದಿಕೆ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಬೇಕು, ಬ್ಯಾಕ್ ಡ್ರಾಪ್, ಅಲಂಕಾರ, ಸ್ಥಳದಲ್ಲಿ ಕುಡಿಯುವ ನೀರು, ಉಪಹಾರದ ವ್ಯವಸ್ಥೆ ಸೇರಿದಂತೆ ಉತ್ತಮವಾಗಿ ಕಾರ್ಯಕ್ರಮವನ್ನು ಸಂಘಟಿಸಲು ಅಗತ್ಯ ರೂಪುರೇಷೆಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.
ಮಂಗಳೂರು ಮೇಯರ್ ಜಯಾನಂದ ಅಂಚನ್, ಉಪ ಮೇಯರು ಪೂರ್ಣಿಮಾ, ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರುಗಳಾದ ಪ್ರೇಮಾನಂದ ಶೆಟ್ಟಿ, ದಿವಾಕರ, ಭಾನುಮತಿ, ಕಿಶೋರ್, ಜಗದೀಶ್ ಶೆಟ್ಟಿ, ಶಕೀಲಾ ಕಾವ, ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ಟೆಕ್ನಿಕಲ್ ವಿಭಾಗದ ಜನರಲ್ ಮ್ಯಾನೇಜರ್ ಅರುಣ ಪ್ರಭಾ, ಕಾರ್ಯನಿರ್ವಾಹಕ ಇಂಜಿನಿಯರ್ ಗಳಾದ ಲಿಂಗೇಗೌಡ, ಚಂದ್ರಕಾಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.