ಉಜಿರೆ: “ಸಮಾಜಕ್ಕೆ ಪ್ರೇರಣಾ ಶಕ್ತಿಯಾಗಿದ್ದ ಪಡುವೆಟ್ನಾಯರದ್ದು ಅಜಾತ ಶತ್ರು ವ್ಯಕ್ತಿತ್ವ.ಧಾರ್ಮಿಕ,ಶೈಕ್ಷಣಿಕ,ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ವಸ್ತುನಿಷ್ಠ ಮಾರ್ಗದರ್ಶನ ನೀಡುತ್ತಿದ್ದ ಅವರು ಆದರ್ಶ ಪ್ರಾಯ ವ್ಯಕ್ತಿ.ಅವರ ಪ್ರೇರಣಾ ದಾಯಿ ವ್ಯಕ್ತಿತ್ವ ತತ್ವಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕ ವಾಗುತ್ತದೆ”ಎಂದು ಹರೀಶ್ ಪೂಂಜ ಹೇಳಿದರು.
ಅವರು ಶುಕ್ರವಾರ ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಅಗಲಿದ,ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ,ಉಜಿರೆಯ ಧಣಿ ಎಂದೇ ಖ್ಯಾತಿವೆತ್ತ ಯು.ವಿಜಯರಾಘವ ಪಡುವೆಟ್ನಾಯರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
“ಜನರ ಬದುಕಿನ ಶಕ್ತಿಯಾಗಿದ್ದರು.ಕಷ್ಟ ಸುಖಗಳಲ್ಲಿ ಭಾಗಿಯಾಗಿ ಪ್ರೇರಣಾ ಶಕ್ತಿಯಾಗಿದ್ದರು.ಊರ ಜನರನ್ನು ಕುಟುಂಬ ಸದಸ್ಯರಂತೆ ಪ್ರೀತಿಸುತ್ತಿದ್ದ ಅವರು ತಾರತಮ್ಯ ತೋರದ ವ್ಯಕ್ತಿಯಾಗಿದ್ದರು” ಎಂದು ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್ ಹೇಳಿದರು.
“ಯೋಚನೆ, ಮಾತು, ಕೃತಿ ಸಾಮ್ಯತೆ ಇದ್ದಾಗ ಮಾತ್ರ ಆ ವ್ಯಕ್ತಿ ಮಹಾತ್ಮನಾಗುತ್ತಾರೆ. ಆ ಸಾಲಿಗೆ ವಿಜಯರಾಘವ ಪಡ್ವೆಟ್ನಾಯರು ಸೇರುತ್ತಾರೆ. ವ್ಯಕ್ತಿತ್ವ ಹಾಗೂ ಆದರ್ಶಕ್ಕೆ ಸಾವಿಲ್ಲ” ಉಜಿರೆ ಎಸ್ ಡಿ ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಹೇಳಿದರು.
“ಧನಿಕನಾಗಲು ಸಂಪತ್ತು ಬೇಕು.ಆದರೆ ಪಡುವೆಟ್ನಾಯರು ಧನಿಕರಾದದ್ದು ಅವರ ಶ್ರೇಷ್ಠ ಗುಣ,ಆತ್ಮೀಯತೆ ಯಿಂದ.ಸರಳತೆಯ ಮೃದು ನುಡಿಗಳಿಂದ ಅವರು ಸಂಪದ್ಭರಿತ ರಾಗಿದ್ದರು.ಧರ್ಮಾತೀತವಾದ ಶಕ್ತಿಯಾಗಿದ್ದರು. ಎಂದಿಗೂ ಸ್ಮರಿಸಬಹುದಾದ ವ್ಯಕ್ತಿಯಾಗಿದ್ದು ಎಲ್ಲರಿಗೂ ಪೂಜನೀಯರು. ಮೇರು ವ್ಯಕ್ತಿಯಾಗಿದ್ದ ಅವರು ಎಲ್ಲರಿಗೂ ಪ್ರೀತಿ ಪಾತ್ರರು”ಎಂದು ನ್ಯಾಯವಾದಿ ಧನಂಜಯ ರಾವ್ ನುಡಿದರು.
ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಸೈಂಟ್ ಆಂಟನಿ ಚರ್ಚಿನ ಧರ್ಮಗುರು ಫಾ.ಜೇಮ್ಸ್ ಡಿಸೋಜಾ,ಉದ್ಯಮಿ ಶಶಿಧರ್ ಶೆಟ್ಟಿ ಬರೋಡ,ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಅಡೂರು ವೆಂಕಟ್ರಾಯ ನುಡಿ ನಮನ ಸಲ್ಲಿಸಿದರು.
ನಿವೃತ್ತ ಉಪನ್ಯಾಸಕ ಪ್ರಕಾಶ್ ಪ್ರಭು, ಜಯಲಕ್ಷ್ಮಿ ಗೀತ ನಮನ ಸಲ್ಲಿಸಿದರು.
ಎಸ್ ಕೆ ಡಿ ಆರ್ ಡಿ ಪಿ ಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್,ಉಜಿರೆ ಎಸ್ ಡಿಎಂ ಆಸ್ಪತ್ರೆಯ ನಿರ್ದೇಶಕ ಜನಾರ್ದನ್,ಎಸ್ ಡಿ ಎಂ ಪ.ಪೂ.ಕಾಲೇಜಿನ ಪ್ರಿನ್ಸಿಪಾಲ್ ದಿನೇಶ್ ಚೌಟ,ಹಿರಿಯ ಮುತ್ಸದ್ದಿ ಭುಜಬಲಿ ಧರ್ಮಸ್ಥಳ,ಎಸ್ ಡಿ ಎಂ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಮೋಹನ್ ನಾರಾಯಣ್,ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಬಿ. ಸೋಮಶೇಖರ ಶೆಟ್ಟಿ,ಡಾ.ಕುಮಾರ ಹೆಗ್ಡೆ ಬಿ.ಎ.ಮತ್ತಿತರರು ಉಪಸ್ಥಿತರಿದ್ದರು.
ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು. ಉಪನ್ಯಾಸಕ ಡಾ.ಶ್ರೀಧರ ಭಟ್ ಕಾರ್ಯಕ್ರಮ ನಿರೂಪಿಸಿದರು. ಪಡುವೆಟ್ನಾಯರ ಕುರಿತ ಆಡಿಯೋ ಬಿಡುಗಡೆಗೊಳಿಸಲಾಯಿತು.