ಮಂಗಳೂರು: ಕೊಯಂಬತ್ತೂರು ಮತ್ತು ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ತಾವೇ ನಡೆಸಿದ್ದಾಗಿ ಐಸಿಸ್ ಉಗ್ರರ ಮುಖವಾಣಿ ವಾಯ್ಸ ಆಫ್ ಖೊರಸಾನ್ ನಿಯತಕಾಲಿಕೆ ಮೂಲಕ ಒಪ್ಪಿಕೊಂಡಿದ್ದಾರೆ.
ದಕ್ಷಿಣ ಭಾರತದಲ್ಲಿ ಭಯೋತ್ಪಾದಕರು ನೆಲೆ ಕಂಡುಕೊಂಡಿದ್ದಾರೆ ಎಂಬುದನ್ನು ಸಾಬೀತು ಮಾಡುವ ಉದ್ದೇಶದಿಂದ ಕೊಯಂಬತ್ತೂರುನಲ್ಲಿ ಕಳೆದ ವರ್ಷ ಅ.23ರಂದು ಕಾರ್ ಬಾಂಬ್ ಸ್ಫೋಟ ಹಾಗೂ ನ.19ರಂದು ಮಂಗಳೂರಿನ ಗರಡಿ ಸಮೀಪ ಆಟೋ ರಿಕ್ಷಾದಲ್ಲಿ ಕುಕ್ಕರ್ ಬಾಂಬ್ ಸ್ಫೋಟ ಸ್ಪೋಟಿಸಿ, ಕಾಫೀರ್‌ಗಳಲ್ಲಿ (ಇಸ್ಲಾಂ ನಂಬದವರು) ಭಯದ ವಾತಾವರಣ ಸೃಷ್ಟಿಸಲಾಗಿದೆ ಎಂದು ಹೇಳಿದೆ.
ಕೊಯಂಬತ್ತೂರು ಸ್ಫೋಟದ ನಾಲ್ಕು ತಿಂಗಳ ನಂತರ ಮತ್ತು ಮಂಗಳೂರು ಸ್ಫೋಟದ ಸುಮಾರು ಮೂರು ತಿಂಗಳ ನಂತರ, ಖೊರಾಸನ್ ಪ್ರಾಂತ್ಯದ ಇಸ್ಲಾಮಿಕ್ ಸ್ಟೇಟ್ ತನ್ನ ಮುಖವಾಣಿ ವಾಯ್ಸ್ ಆಫ್ ಖೊರಸಾನ್ ನಿಯತಕಾಲಿಕೆ ಮೂಲಕ, ತನ್ನ ಭಯೋತ್ಪಾದಕರು ದಕ್ಷಿಣ ಭಾರತದಲ್ಲಿ ಇದ್ದಾರೆ ಎಂದು ಒಪ್ಪಿಕೊಂಡಿದೆ. ಅಲ್-ಅಜೈಮ್ ಮೀಡಿಯಾ ಫೌಂಡೇಶನ್ 68 ಪುಟಗಳ ಮ್ಯಾಗಜಿನ್‌ನಲ್ಲಿ ಮಂಗಳೂರು ಸ್ಫೋಟ ಸೇರಿದಂತೆ ವಿವಿಧ ಅಂಶಗಳನ್ನು ಉಲ್ಲೇಖ ಮಾಡಿದೆ.
ಐಸಿಸ್ ಪರ ಹೋರಾಡುವ ಮುಜಾಹಿದೀನ್‌ಗಳು ದಕ್ಷಿಣ ಭಾರತದಲ್ಲಿ ಸಕ್ರೀಯವಾಗಿದ್ದಾರೆ. ಆದರೆ ಯಾವ ರಾಜ್ಯ ಎನ್ನುವುದನ್ನು ಉಲ್ಲೇಖ ಮಾಡಿಲ್ಲ. ಕೇರಳದಲ್ಲಿ ಐಸಿಸ್ ಪರ ಚಟುವಟಿಕೆಗಳು ಹೆಚ್ಚಿರುವುದರಿಂದ ತಜ್ಞರು, ಅದು ಕೇರಳವೇ ಆಗಿರುವ ಸಾಧ್ಯತೆಯಿದೆ ಎಂದಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಐಸಿಸ್ ಪರ ಚಟುವಟಿಕೆಗಳು ನಿಗೂಢ ರೀತಿಯಲ್ಲಿ ಹೆಚ್ಚುತ್ತಿದೆ.
ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ 60 ಕಡೆಗಳಲ್ಲಿ ಎನ್‌ಐಎ ಅಧಿಕಾರಿಗಳು ಐಸಿಸ್ ಪರವಾಗಿರುವ ವ್ಯಕ್ತಿಗಳ ಬಗ್ಗೆ ದಾಳಿ ನಡೆಸಿದ ಮೂರು ವಾರಗಳಲ್ಲಿ ಈ ರೀತಿಯ ಹೇಳಿಕೆ ನೀಡಿದೆ. ಇತ್ತೀಚಿನ ಆನ್ಲೈನ್ ಪತ್ರಿಕೆಯಲ್ಲಿ ಭಾರತದಲ್ಲಿ ಹಿಂದುಗಳು, ಭಾರತೀಯ ಜನತಾ ಪಾರ್ಟಿ, ಭಾರತೀಯ ಸೇನೆ ವಿರುದ್ಧ ದಾಳಿ ನಡೆಸುವಂತೆ ಐಸಿಸ್ ಮುಜಾಹಿದೀನ್‌ಗಳಿಗೆ ಕರೆ ನೀಡಿತ್ತು.
ಭಾರತದಲ್ಲಿ ಅಲ್ಲಾಹ್ ಮತ್ತು ಪ್ರವಾದಿಯ ವಿರೋಧಿ ಆಗಿರುವ ಹಿಂದುಗಳನ್ನು ಟಾರ್ಗೆಟ್ ಮಾಡುವಂತೆ ಹೇಳಿದೆ. ಕಾಶ್ಮೀರದಲ್ಲಿ ಮುಸ್ಲಿಮರಲ್ಲದವರನ್ನು ಕೊಲ್ಲಲು ಟಾರ್ಗೆಟ್ ಮಾಡುವಂತೆ ಹೇಳಿತ್ತು. ನಿಮ್ಮ ಇಸ್ಲಾಂ ವಿರೋಧಿ ಧೋರಣೆ ಸಹಿಸಿಕೊಳ್ಳಲಾಗದ ಸ್ಥಿತಿಗೆ ಮುಟ್ಟಿದೆ. ಇದಕ್ಕೆ ಸೂಕ್ತ ಪ್ರತೀಕಾರವನ್ನು ನಮ್ಮ ಜನರು ನೀಡಲಿದ್ದಾರೆ ಎಂದೂ ನಿಯತಕಾಲಿಕೆಯಲ್ಲಿ ಉಲ್ಲೇಖಿಸಲಾಗಿದೆ.